ಉತ್ತಮ ಆಡಳಿತ ಮಾದರಿ ನೀಡಿದ ಶ್ರೀಕೃಷ್ಣ ಸದಾ ಸ್ತ್ಯುತರ್ಹ : ದಿನಕರ ಬಾಬು
ಉಡುಪಿ : ಉತ್ತಮ ಆಡಳಿತ ಮಾದರಿಯನ್ನು ನೀಡಿದ ಶ್ರೀಕೃಷ್ಣ ಪರಮಾತ್ಮ ಸದಾ ಸ್ತ್ಯುತರ್ಹ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ.
ಅವರು ಗುರುವಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಉಡುಪಿ ಇವರ ವತಿಯಿಂದ ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ಆಯೋಜಿಸಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ಶ್ರೀ ಕೃಷ್ಣ ಒಬ್ಬ ಸಾಮಾಜಿಕ ಕ್ರಾಂತಿಕಾರಿ, ಶ್ರೀಕೃಷ್ಣನ ಗೀತೋಪದೇಶವು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿದ್ದು, ಎಲ್ಲರಿಗೂ ಸ್ಪೂರ್ತಿ ನೀಡುತ್ತದೆ, ಗೀತೆಯ ‘ಕರ್ಮಣ್ಯೇ ವಾದಿಕಾರಸ್ಥೆ ಮಾ ಫಲೇಶು ಕದಾಚನಃ’ ದಂತೆ ಅಲ್ಲರೂ ತಮ್ಮ ಕಾರ್ಯಗಳನ್ನು ಯಾವುದೇ ಪ್ರತಿಫಲದ ಅಪೇಕ್ಷೆಯಿಲ್ಲದೇ ಮಾಡಬೇಕು, ಸರಕಾರಿ ನೌಕರರು ತಮ್ಮ ಕರ್ತವ್ಯವನ್ನು ಯಾವುದೇ ಫಲಾಪೇಕ್ಷೆಯಿಲ್ಲದೇ ಮಾಡಿ, ಸಾರ್ವಜನಿಕರಿಗೆ ನೀಡುವ ಸೇವೆಯಲ್ಲಿ ತೃಪ್ತಿಯನ್ನು ಕಾಣಬೇಕು, ಜನರು ನೀಡುವ ಗೌರವವೇ ದೊಡ್ಡ ಗೌರವ ಎಂದು ಹೇಳಿದರು.
ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಉಡುಪಿ ಜಿಲ್ಲಾ ಯಾದವ ಗೊಲ್ಲ ಸಮಾಜ ಸಂಘದ ಅಧ್ಯಕ್ಷ ಎಸ್.ಪುಟ್ಟಣ್ಣ ಗೊಲ್ಲ ಉಪಸ್ಥಿತರಿದ್ದರು. ಕುದಿ ವಸಂತ ಶೆಟ್ಟಿ ಶ್ರೀ ಕೃಷ್ಣನ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕನ್ನಡ ಸಂಸ್ಕøತಿ ಇಲಾಖೆಯ ತಾಂತ್ರಿಕ ಮೇಲ್ವಿಚಾರಕರಾದ ಪೂರ್ಣಿಮಾ ಸ್ವಾಗತಿಸಿದರು, ಸಹಾಯಕರಾದ ರಂಗಪ್ಪ ವಂದಿಸಿದರು. ನಳಿನಾದೇವಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ವೇಷ ಧರಿಸಿದ್ದ ಎಲ್ಲಾ ಮಕ್ಕಳಿಗೆ ನೆನಪಿನ ಕಾಣಿಕೆ ನೀಡಲಾಯಿತು. ಮೈತ್ರಿ ಕಲಾ ಸಂಗಮ, ಅಂಬಲಪಾಡಿ ಅವರಿಂದ ಭಜನಾ ಕಾರ್ಯಕ್ರಮ ಮತ್ತು ವೀಣಾ ಎಂ. ಸಾಮಗ ಮತ್ತು ಬಳಗ , ರಾಧಾಕೃಷ್ಣ ನೃತ್ಯ ನಿಕೇತನ (ರಿ.) ಇವರಿಂದ ಕೃಷ್ಣಂ ವಂದೇ ಜಗದ್ಗುರುಂ ನೃತ್ಯ ರೂಪಕ ನಡೆಯಿತು.