ಉದ್ಯಮಿ ಮುತ್ತಪ್ಪರೈ , ಅಜಿತ್ ಶೆಟ್ಟಿಯಿಂದ ಕುಕ್ಕೆಗೆ 2.5 ಕೋಟಿ ವೆಚ್ಚದ ಬ್ರಹ್ಮರಥ ಕಾಣಿಕೆ
ಉಡುಪಿ: ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಎನ್. ಮುತ್ತಪ್ಪ ರೈ ಹಾಗೂ ಉದ್ಯಮಿ ಅಜಿತ್ ಶೆಟ್ಟಿ ಅವರು ಜಂಟಿಯಾಗಿ ಅಕ್ಟೋಬರ್ 2ರಂದು ₹ 2.5 ಕೋಟಿ ವೆಚ್ಚದ ಬ್ರಹ್ಮರಥವನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕಾಣಿಕೆ ರೂಪದಲ್ಲಿ ಅರ್ಪಣೆ ಮಾಡಲಿದ್ದು ಅದರ ಮೆರವಣಿಗೆ ಕೋಟೇಶ್ವರದಿಂದ ಸೋಮವಾರ ಹೊರಟಿತು.
ಮೊದಲಿಗೆ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭಗವದ್ವಜ ಹಾರಿಸಿ ಚಾಲನೆ ನೀಡಿದರು. ವಿಧಾನ ಪರಿಷತ್ ಸಭಾಧ್ಯಕ್ಷ ಪ್ರತಾಪಚಂದ್ರ ಶೆಟ್ಟಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಡ್ಡೋಡಿ, ಬ್ರಹ್ಮರಥ ನಿರ್ಮಾಣದ ರುವಾರಿ ಮುತ್ತಪ್ಪ ರೈ ಪತ್ನಿ ಅನುರಾಧಾ ಎಂ.ರೈ ಉದ್ಯಮಿ ಅಜಿತ್ ಶೆಟ್ಟಿ ಉಪಸ್ಥಿತರಿದ್ದರು
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಮರ್ಪಿತಗೊಳ್ಳುವ ಬ್ರಹ್ಮರಥ ಉಡುಪಿಯಿಂದ ಮೆರವಣಿಗೆ ಹೊರಟಿದೆ. ಕುಕ್ಕೆಯ ಬ್ರಹ್ಮರಥ ಬಹಳ ಹಳೆಯದಾಗಿದ್ದು, ಜೀರ್ಣಾವಸ್ಥೆಗೆ ತಲುಪಿತ್ತು. ಹೀಗಾಗಿ ದೇವಸ್ಥಾನ ಸಮಿತಿ ನೂತನ ರಥ ರಚನೆ ಮಾಡಬೇಕೆಂದು ತೀರ್ಮಾನಿಸಿತ್ತು.
ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಸ್ಥಾಪಕ ಮುತ್ತಪ್ಪ ರೈ ಮತ್ತು ಉದ್ಯಮಿ ಅಜಿತ್ ಶೆಟ್ಟಿಯವರು ತಾವು ರಥ ನಿರ್ಮಾಣ ಮಾಡಿ ಕೊಡುವುದಾಗಿ ಹೇಳಿದ್ದರು. ಉಡುಪಿಯ ಕೋಟೇಶ್ವರದ ಶಿಲ್ಪಗುರು, ರಾಷ್ಟ್ರಪ್ರಶಸ್ತಿ ವಿಜೇತ ಲಕ್ಷ್ಮೀನಾರಾಯಣ ಆಚಾರ್ಯ ನೇತೃತ್ವದ ತಂಡ ಒಂದೂವರೆ ವರ್ಷ ನಿರಂತರವಾಗಿ ಕೆತ್ತನೆ ಕೆಲಸ ಮಾಡಿರುವ ಬ್ರಹ್ಮರಥ ಕುಕ್ಕೆಗೆ ಹೊರಟಿದೆ.
2018ರ ಮಾರ್ಚ್ 15ರಂದು ಬ್ರಹ್ಮರಥದ ಕೆತ್ತನೆ ಕೆಲಸ ಆರಂಭಿಸಲಾಗಿದ್ದು, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಲ್ಪಿ ಕೋಟೇಶ್ವರ ಲಕ್ಷ್ಮೀನಾರಾಯಣ ಆಚಾರ್ಯ ರಥವನ್ನು ನಿರ್ಮಿಸಿದ್ದಾರೆ. ಮಹಾಭಾರತ ಹಾಗೂ ರಾಮಾಯಣದಂತಹ ಅಭೂತ ಪೂರ್ವ ಶಿಲ್ಪ ಕಲಾಕೃತಿಯನ್ನು ರಥದಲ್ಲಿ ಕೆತ್ತಲಾಗಿದೆ.
ಮೆರವಣಿಗೆ ಕೋಟೇಶ್ವರದಿಂದ ಹೊರಟು ಸಾಲಿಗ್ರಾಮ, ಬ್ರಹ್ಮಾವರ, ಉಡುಪಿ ಮಾರ್ಗವಾಗಿ ಕಾಪು, ಪಡುಬಿದ್ರಿ, ಬಪ್ಪನಾಡು, ಮುಲ್ಕಿ, ಸುರತ್ಕಲ್ ಮೂಲಕ ಸಾಗಿ ಕದ್ರಿ, ಬಿಸಿ ರೋಡ್, ಉಪ್ಪಿನಂಗಡಿ, ಅಲಂಕಾರು, ಕಡಬ, ಮರ್ದಾಳ, ಬಿಳಿನೆಲೆ ಮಾರ್ಗವಾಗಿ ಹೋಗಲಿದೆ.
ಮುತ್ತಪ್ಪ ರೈ ಪತ್ನಿ ಅನುರಾಧ ಉಡುಪಿಯ ಅಂಬಲಪಾಡಿಯಲ್ಲಿ ಮಾತನಾಡಿ, ದೇವರ ಕೃಪೆಯಿಂದ ಕುಕ್ಕೆ ದೇವರ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಮುಂದಿನ ದಿನಗಳಲ್ಲಿ ದೇವರ ಸೇವೆ ಮಾಡುವ ಶಕ್ತಿ ನಮಗೆ ಸಿಗಲಿ ಎಂದು ಬೇಡಿಕೊಂಡಿದ್ದೇವೆ. ಅಲ್ಲಲ್ಲಿ ಜನ ಭಕ್ತಿ ತೋರಿ ಪೂಜೆ ಸಲ್ಲಿಸುತ್ತಿದ್ದಾರೆ. ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬ್ರಹ್ಮರಥ ಸಮರ್ಪಿಸುತ್ತೇವೆ ಎಂದರು. ದಕ್ಷಿಣ ಕನ್ನಡ ಜಿಲ್ಲೆ ಕಡಬದ ಉದ್ಯಮಿ ಅಜಿತ್ ಶೆಟ್ಟಿ ಕೂಡಾ ಬ್ರಹ್ಮ ರಥಕ್ಕೆ ದೇಣಿಗೆ ನೀಡಿದ್ದಾರೆ. ಕೋಟೇಶ್ವರದಿಂದ ಕುಕ್ಕೆಯವರೆಗೆ ತೆರಳುವ ಮೆರವಣಿಗೆಯ ಜವಾಬ್ದಾರಿಯನ್ನು ಅವರೇ ಹೊತ್ತಿದ್ದಾರೆ ಎಂದರು