ಉಳ್ಳಾಲ: ಚರ್ಚ್‍ಗೆ ದೂರದ ಊರುಗಳಿಂದಲೂ ಭಕ್ತರು ಬರುತ್ತಿದ್ದು ಹಿಂದಿರುಗಿ ಹೋಗಲು ಅನಾನುಕೂಲವಾಗುತ್ತಿತ್ತು, ಈ ನಿಟ್ಟಿನಲ್ಲಿ ತಂಗಲು ವ್ಯವಸ್ಥೆ ಮಾಡಲಾಗುತ್ತಿದ್ದು ಇದರಿಂದ ಚರ್ಚ್ ಅಭಿವೃದ್ಧಿಗೆ ಇನ್ನಷ್ಟು ಸಹಕಾರಿಯಾಗಲಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಮುಡಿಪು ಸಂತ ಜೋಸೆಫ್‍ವಾಜ್ ಮುಕ್ತಿಧರ ಕ್ಷೇತ್ರದ ಬಳಿ ನಿರ್ಮಾಣಗೊಳ್ಳಲಿರುವ ಯಾತ್ರಿ ವಿಲಾಸಕ್ಕೆ ಸೋಮವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಚರ್ಚ್‍ಗೆ ಸಂಪರ್ಕ ಕಲ್ಪಿಸುವ ರಸ್ತೆ 35 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದ್ದು ಕ್ರೈಸ್ತ ಅಭಿವೃದ್ಧಿ ಮಂಡಳಿಯಿಂದ 10 ಲಕ್ಷ ಹೊರತುಪಡಿಸಿ ಮುಖ್ಯಮಂತ್ರಿಯವರ ವಿಶೇಷ ಅನುದಾನದಿಂದಲೂ 25 ಲಕ್ಷ ನೀಡಲಾಗಿದೆ. ಯಾತ್ರಿ ವಿಲಾಸ 50 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿದ್ದು ಚರ್ಚ್ ಆಡಳಿತ ಮಂಡಳಿ ಸಂಪೂರ್ಣ ಜವಾಬ್ದಾರಿಯಲ್ಲಿ ಗುಣಮಟ್ಟದ ಕಾಮಗಾರಿ ನಡೆಯಬೇಕು. ನಿವಾಸ ನಿರ್ಮಾಣದಿಂದ ದಿನದ 24 ಗಂಟೆಯೂ ಪ್ರಾರ್ಥನೆ, ಧಾರ್ಮಿಕ ಕಾರ್ಯಕ್ರಮಗಳು ನಿರಂತರ ನಡೆಯಬೇಕು ಎಂದು ಹೇಳಿದರು.
ಪವಾಡ ಬೆಟ್ಟಕ್ಕೆ ಬರುವ ಭಕ್ತರ ಅನುಕೂಲ ಹಾಗೂ ಕ್ಷೇತ್ರ ಅಭಿವೃದ್ಧಿ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಪ್ರವಾಸೋಧ್ಯಮ ಇಲಾಖೆಯಿಂದಲೂ ಅನುದಾನ ನೀಡುವ ಯೋಜನೆ ಇದೆ. ಸೋಮನಾಥ ದೇವಸ್ಥಾನ ರಸ್ತೆ ಅಭಿವೃದ್ಧಿಗೆ 60 ಲಕ್ಷ ಅನುದಾನ ಬಿಡುಗಡೆಗೊಂಡಿದ್ದು 15 ದಿನಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
ಮಂಗಳೂರು ಪ್ರಾಂತ್ಯ ಧರ್ಮಗುರು ಅತೀ ವಂದನೀಯ ರೆ.ಫಾ.ಡೆನ್ನಿಸ್ ಮೋರಾಸ್, ಪೆರ್ಮನ್ನೂರು ಸಂತ ಸೆಬಾಸ್ತಿಯನ್ ಚರ್ಚ್ ಧರ್ಮಗುರು ರೆ.ಫಾ.ಜೆ.ಬಿ.ಸಲ್ದಾನ, ಸಂತ ಜೋಸೆಫ್‍ವಾಜ್ ಮುಕ್ತಿಧರ ಕ್ಷೇತ್ರ ಧರ್ಮಗುರು ರೆ.ಫಾ.ಬೆಂಜಮಿನ್ ಪಿಂಟೋ, ಇರಾ ಗ್ರಾಮ ಪಂಚಾಯಿತಿ ಅಧ್ಯಕ್ಷ ರಝಾಕ್ ಕುಕ್ಕಾಜೆ, ಪಜೀರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸೀತಾರಾಮ ಶೆಟ್ಟಿ, ಬಾಳೆಪುಣಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷೆ ವನಿತಾ, ತಾಲೂಕು ಪಂಚಾಯಿತಿ ಸದಸ್ಯ ಮಹಮ್ಮದ್ ಮೋನು, ಕುರ್ನಾಡು ಗ್ರಾಮ ಮಾಜಿ ಅಧ್ಯಕ್ಷರಾದ ದೇವದಾಸ್ ಭಂಡಾರಿ, ಪ್ರಶಾಂತ್ ಕಾಜವ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೊಂಟೆಪದವು, ಇಂಜಿನಿಯರ್ ಶೇಷಾದ್ರಿ, ಡಾ.ರಘು, ಪದ್ಮನಾಭ ನರಿಂಗಾನ ಮೊದಲಾದವರು ಉಪಸ್ಥಿತರಿದ್ದರು.
ಡಾ.ಐರಿನ್ ವೇಗಸ್ ಕಾರ್ಯಕ್ರಮ ನಿರೂಪಿಸಿದರು.