ಉಳ್ಳಾಲ: ಹಾಡುಗಲೇ ಆಗಂತುಕರ ತಂಡದಿಂದ ಬಂದೂಕು ತೋರಿಸಿ ಬ್ಯಾಂಕ್ ದರೋಡೆ
ಉಳ್ಳಾಲ: ಇಲ್ಲಿನ ಕೋಟೆಕಾರಿನ ಬ್ಯಾಂಕ್ ಒಂದರಲ್ಲಿ ಹಾಡು ಹಗಲೇ ಭಾರೀ ಮೊತ್ತದ ದರೋಡೆ ನಡೆಸಿದ ಘಟನೆ ಜನವರಿ 17 ರಂದು ಶುಕ್ರವಾರ ನಡೆದಿದೆ.
ಹಾಡುಹಗಲೇ ಐದು ಮಂದಿ ಆಗಂತುಕರ ತಂಡದಿಂದ ಬಂದೂಕು ತೋರಿಸಿ ಈ ಕೃತ್ಯ ನಡೆದಿದ್ದು, ಫಿಯೆಟ್ ಕಾರಿನಲ್ಲಿ ಬಂದ ಈ ತಂಡ ಚಿನ್ನ, ನಗದುಗಳೆಲ್ಲವೂ ಕಳವು ಮಾಡಿ ಮಂಗಳೂರು ಕಡೆಗೆ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ
ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದ ಕಾರಣ ಹೆಚ್ಚಿನ ಪೊಲೀಸರು ಅದರ ಭದ್ರತೆಗೆ ತೆರಳಿದ್ದರು. ಇದನ್ನೇ ಟಾರ್ಗೆಟ್ ಮಾಡಿಕೊಂಡು ದರೋಡೆಗೆ ಸಂಚು ರೂಪಿಸಿದ್ದ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಉಳ್ಳಾಲ ಠಾಣೆ ಪೊಲೀಸರು, ಶ್ವಾನದಳ ಸಿಬ್ಬಂದಿ ಭೇಟಿ, ಪರಿಶೀಲನೆ ನಡೆಸಿದ್ದಾರೆ.
ಬ್ಯಾಂಕ್ಗೆ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಉಳ್ಳಾಲವು ಯುಟಿ ಖಾದರ್ ಅವರ ವಿಧಾನಸಭಾ ಕ್ಷೇತ್ರವಾಗಿದೆ.
ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ: ಯುಟಿ ಖಾದರ್
ಬ್ಯಾಂಕ್ ದರೋಡೆ ವಿಚಾರವಾಗಿ ಮಂಗಳೂರಿನಲ್ಲಿ ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ಪ್ರತಿಕ್ರಿಯಿಸಿದ್ದು, ಕೆಸಿ ರೋಡ್ನ ಕೋಟೆಕಾರು ಬ್ಯಾಂಕ್ನಲ್ಲಿ ಚಿನ್ನಾಭರಣ, ನಗದು ದರೋಡೆಯಾಗಿದೆ. ತಲ್ವಾರ್, ಗನ್ನಿಂದ ಬೆದರಿಸಿ ಬ್ಯಾಂಕ್ ದರೋಡೆ ಮಾಡಿದ ಮಾಹಿತಿ ದೊರೆತಿದೆ. ಜನಸಂದಣಿ ಕಡಿಮೆ ಇರುವ ಸಮಯದಲ್ಲೇ ದರೋಡೆ ನಡೆಸಿದ್ದಾರೆ. ಆರೋಪಿಗಳ ಬಂಧಿಸಲು ವಿಶೇಷ ತಂಡ ರಚನೆ ಮಾಡಲು ಸೂಚನೆ ನೀಡಲಾಗಿದೆ ಎಂದಿದ್ದಾರೆ.
ಜಿಲ್ಲಾಡಳಿತದಿಂದ ಪೊಲೀಸರಿಗೆ ಸಂಪೂರ್ಣ ಸಹಕಾರ ಕೊಡುತ್ತೇವೆ. ಪೊಲೀಸರು ಆದಷ್ಟು ಬೇಗ ಆರೋಪಿಗಳನ್ನು ಬಂಧಿಸುವ ವಿಶ್ವಾಸವಿದೆ ಎಂದು ಖಾದರ್ ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರ ತಂಡ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.