ಊರ ಜಾತ್ರೆ ನೆನಪಿಸಿದ ಜನತಾ ವ್ಯವಹಾರ ಮೇಳ!
ಹೆಮ್ಮಾಡಿಯ ಜನತಾ ಮಾಲ್ನಲ್ಲಿ ಮುಗಿಬಿದ್ದ ಗ್ರಾಹಕರು
ಇಲ್ಲಿ ವಿದ್ಯಾರ್ಥಿಗಳೇ ವರ್ತಕರು, ಅವರೇ ಗ್ರಾಹಕರು
ಲಾಭ-ನಷ್ಟ, ಏಳು-ಬೀಳುಗಳ ಪ್ರಾಕ್ಟಿಕಲ್ ನಾಲೆಡ್ಜ್
ಕುಂದಾಪುರ: ಸಾಲುಗಟ್ಟಿ ಮಳಿಗೆಗಳನ್ನು ತೆರೆದು ವ್ಯಾಪಾರ ವ್ಯವಹಾರಗಳಲ್ಲಿ ಬ್ಯುಸಿಯಾದ ವಿದ್ಯಾರ್ಥಿಗಳು. ಪಕ್ಕ ಜಾತ್ರೆಯಂತೆ ಕಂಡುಬಂದ ಇಲ್ಲಿನ ವ್ಯಾಪಾರ ಮಳಿಗೆಗಳಲ್ಲಿನ ಸಾಮಾಗ್ರಿಗಳನ್ನು ಕಂಡು ಖರೀದಿಸುತ್ತಿರುವ ಗ್ರಾಹಕರು. ಈ ಜಾತ್ರೆಗೆ ಹರಿದು ಬಂದ ಜನ ಸಾವಿರಾರು! ಅರೇ ಇದ್ಯಾವ ಜಾತ್ರೆ ಅಂತೀರಾ.. ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ..
ಎಸ್.. ಅನುದಿನವೂ ತರಗತಿ ಕೋಣೆಯೊಳಗೆ ಕುಳಿತು ಪಾಠ ಪ್ರವಚನಗಳಲ್ಲಿ ತಲ್ಲೀನರಾಗುತ್ತಿದ್ದ ವಿದ್ಯಾರ್ಥಿಗಳು ವಿವಿಧ ವ್ಯಾಪಾರ ಮಳಿಗೆಗಳನ್ನು ತೆರೆದು ವ್ಯವಹಾರದ ಅನುಭವ ಪಡೆದುಕೊಂಡರು. ಪಕ್ಕಾ ಜಾತ್ರೆಯಂತೆ ಕಂಗೊಳಿಸಿದ ಈ ದೃಶ್ಯ ಕಂಡು ಬಂದಿದ್ದು ಕುಂದಾಪುರ ತಾಲೂಕಿನ ಹೆಮ್ಮಾಡಿಯ ಜನತಾ ಕ್ಯಾಂಪಸ್ನಲ್ಲಿ.
ವಿವಿವಿ ಮಂಡಳಿ, ಸಮರ್ಪಣಾ ಎಜ್ಯುಕೇಶನಲ್ ಟ್ರಸ್ಟ್ ಆಡಳಿತಕ್ಕೊಳಪಟ್ಟ, ಪ್ರಾಂಶುಪಾಲ ಗಣೇಶ್ ಮೊಗವೀರ ಅವರ ಸಾರಥ್ಯದ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಒಂದು ದಿನದ ವ್ಯವಹಾರ ಮೇಳ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ. ಕಾಲೇಜು ಕ್ಯಾಂಪಸ್ನಲ್ಲಿ ಬರೋಬ್ಬರಿ 25ಕ್ಕೂ ಅಧಿಕ ಅಂಗಡಿಗಳನ್ನು ತೆರೆಯಲಾಗಿದ್ದು, ಪ್ರತೀ ಅಂಗಡಿಗಳಲ್ಲೂ ಗ್ರಾಹಕರು ಮುಗಿಬಿದ್ದು ವಸ್ತುಗಳನ್ನು ಖರೀದಿಸಿದರು. ಮಂಡಕ್ಕಿ-ಜಿಲೆಬಿ ಅಂಗಡಿ, ಪೊಟ್ಯಾಟೊ ಟ್ವಿಸ್ಟರ್, ಪಾಪ್ ಕಾರ್ನ್, ತರಕಾರಿ, ಹಣ್ಣು, ಬಟ್ಟೆಯಂಗಡಿ, ಕಬ್ಬಿನ ಜ್ಯೂಸ್, ಕೋಲ್ಡ್ ಕಾಫಿ, ನರ್ಸರಿ, ಚಾಟ್ಸ್, ಸಸ್ಯಹಾರಿ, ಮಾಂಸಹಾರಿ ಹೊಟೇಲ್, ಆರ್ಟ್ ಗ್ಯಾಲರಿ, ಬ್ಯಾಂಗಲ್ ಸ್ಟೋರ್ಸ್, ಐಸ್ಕ್ರೀಮ್ ಅಂಗಡಿಯೂ ಸೇರಿದಂತೆ, ಸ್ಟೇಶನರಿ, ಗೇಮ್ಸ್ ಸ್ಟಾಲ್ ಮೊದಲಾದ ಮಳಿಗೆಗಳು ಗಾಹಕರನ್ನು ಆಕರ್ಷಿಸಿದವು. ಜೊತೆಗೆ ಭಯ ಹುಟ್ಟಿಸುವ ಸ್ಕೇರಿ ಹೌಸ್ ವಿಶೇಷವಾಗಿ ವಿದ್ಯಾರ್ಥಿಗಳ, ಪೋಷಕರ ಮೆಚ್ಚುಗೆಗೆ ಪಾತ್ರವಾಯಿತು.
ದಿನನಿತ್ಯದ ಮಾರುಕಟ್ಟೆಯಲ್ಲಿ ಕಾಣುವಂತೆ ಇಲ್ಲಿಯೂ ಚೌಕಾಶಿ ವ್ಯಾಪಾರ ನಡೆಯಿತು. ನೆರೆದಿದ್ದವರು ತಿಂಡಿ ತಿನಿಸುಗಳನ್ನು ಖರೀದಿಸಿ ಕೈ ಬಾಯಿಗೆ ಕಸರತ್ತು ಕೊಡುವುದರ ಜೊತೆಗೆ ಮಕ್ಕಳ ವ್ಯಾಪಾರ ಮನೋಭಾವ ಕಂಡು ನಿಬ್ಬೆರಗಾದರು. ವ್ಯವಹಾರ ಮೇಳದ ಜೊತೆಗೆ ಜನತಾ ಆವಿಷ್ಕಾರ್-2023 ಕಾರ್ಯಕ್ರಮ ನೋಡುಗರ ಕಣ್ಮನ ಸೆಳೆಯಿತು. ಸ್ಥಳೀಯ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ವಿಜಾÐನ ಮಾದರಿ ಸ್ಪರ್ಧೆ, ಜಾನಪದ ನೃತ್ಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ವಿಜೇತರಿಗೆ ಆಕರ್ಷಕ ಬಹುಮಾನಗಳನ್ನೂ ನೀಡಲಾಯಿತು. ಸರಿಸುಮಾರು ಇಪ್ಪತ್ತಕ್ಕೂ ಅಧಿಕ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನ ಪಡೆದುಕೊಂಡರು. ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಭಾವಸಂಗಮ, ಚಿತ್ರಸಿರಿ ಮೊದಲಾದ ಕಾರ್ಯಕ್ರಮಗಳು ಜರುಗಿತು. ಬೆಳಿಗ್ಗೆ 9 ಗಂಟೆಗೆ ಆರಂಭಗೊಂಡ ವ್ಯವಹಾರ ಮೇಳ ಸಂಜೆ ಆರು ಗಂಟೆಯಾದರೂ ಗ್ರಾಹಕರಿಗೇನು ಕೊರತೆ ಇರಲಿಲ್ಲ. ವ್ಯವಹಾರ ಮುಗಿಸಿ ವಿದ್ಯಾರ್ಥಿಗಳು ಕೂತು ಲಾಭ-ನಷ್ಟದ ಲೆಕ್ಕಾಚಾರ ನಡೆಸಿ ಉಪನ್ಯಾಸಕರಿಗೆ ವರದಿ ಒಪ್ಪಿಸಿದರು.
ಮಕ್ಕಳು ಕ್ರಿಯಾಶೀಲರಾಗಿ ಪಠ್ಯದ ಜೊತೆಗೆ ವ್ಯವಹಾರದ ಜಾÐನ ತಿಳಿದುಕೊಳ್ಳಲು ನೆರವಾಗುವ ಸದ್ದುದ್ದೇಶದಿಂದ ಕಾಲೇಜು ಆಡಳಿತ ಮಂಡಳಿ ಆಯೋಜಿಸಿದ ಜನತಾ ವ್ಯವಹಾರ ಮೇಳ ವಿದ್ಯಾರ್ಥಿಗಳಲ್ಲಿ ಒಂದಷ್ಟು ಹೊಸ ಭರವಸೆಯನ್ನು ಮೂಡಿಸಿದೆ.