ಎ.ಬಿ.ವಿ.ಪಿ ವತಿಯಿಂದ ವಿವಿ ಕುಲಪತಿ ಹಾಗೂ ಕುಲಸಚಿವರಿಗೆ ಮನವಿ ಸಲ್ಲಿಕೆ
ಮಂಗಳೂರು: ಲಾಕ್ ಡೌನ್ ಮುಗಿದ ಬಳಿಕ ವಿದ್ಯಾರ್ಥಿ ಗಳಿಗೆ ಸರಿಯಾದ ಶಿಕ್ಷಣದ ವಾತಾವರಣವನ್ನು ನಿರ್ಮಾಣ ಮಾಡುವುದರ ಕುರಿತು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಪಿ.ಎಸ್. ಎಡಪಡಿತ್ತಾಯ ಹಾಗೂ ಕುಲ ಸಚಿವರಾದ ರಾಜು ಮೊಗವೀರ ಅವರನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವಿಭಾಗ ವತಿಯಿಂದ ಬುಧವಾರ ವಿವಿಯಲ್ಲಿ ಭೇಟಿ ಮಾಡಿ ವಿವಿಧ ಬೇಡಿಕೆಯುಳ್ಳ ಮನವಿ ಸಲ್ಲಿಸಿ, ಚರ್ಚಿಸಲಾಯಿತು.
ಮಂಗಳೂರು ವಿಶ್ವ ವಿದ್ಯಾನಿಲಯ ತನ್ನ ವ್ಯಾಪ್ತಿಯಲ್ಲಿ ಬರುವ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿಗಳನ್ನು ನಡೆಸುತ್ತಿದೆಯಾದರೂ ಗ್ರಾಮೀಣ ಭಾಗದ ಹಾಗೂ ನೆಟ್ ವರ್ಕ್ ರಹಿತ ಪ್ರದೇಶದಲ್ಲಿರುವ ವಿದ್ಯಾರ್ಥಿಗಳಿಗೆ ಇದರಿಂದ ಅನಾನುಕೂಲವಾಗಿದೆ. ಹಾಗಾಗಿ ಆನ್ ಲೈನ್ ತರಗತಿ ನಡೆಸಿದರೂ ಲಾಕ್ ಡೌನ್ ತರುವಾಯ 20 ರಿಂದ 25 ದಿನಗಳ ಕಾಲ ಪುನರಾವರ್ತನ ತರಗತಿಗಳನ್ನು ನಡೆಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಸೆಮಿಸ್ಡರ್ ಪರೀಕ್ಷೆ ನಡೆಸುವ ಕುರಿತು ಯೋಜನೆಗಳನ್ನು ರೂಪಿಸಿ ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಾಲೇಜುಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಆದಷ್ಟು ಬೇಗ ಪರೀಕ್ಷೆಗಳನ್ನು ನಡೆಸಿ ಸರಿಯಾದ ಫಲಿತಾಂಶ ನೀಡಬೇಕು ಹಾಗೂ ಮಂಗಳೂರು ವಿವಿ ವ್ಯಾಪ್ತಿಯಲ್ಲಿ ಬರುವ ಯಾವುದೇ ಕಾಲೇಜುಗಳು ಮುಂದಿನ ಶೈಕ್ಷಣಿಕ ವರ್ಷದ ಶುಲ್ಕವನ್ನು ಹೆಚ್ಚಿಸದಂತೆ ಆದೇಶ ಹೊರಡಿಸ ಬೇಕು ಎಂದು ಅ.ಭಾ.ವಿ.ಪ. ನಿಯೋಗವು ಕುಲಪತಿ ಹಾಗೂ ಕುಲ ಸಚಿವರಿಗೆ ಮನವಿಯನ್ನು ಸಲ್ಲಿಸಿ, ಚರ್ಚಿಸಿದರು.
ನಿಯೋಗದಲ್ಲಿ ಅ.ಭಾ.ವಿ.ಪ ಮಂಗಳೂರು ವಿಭಾಗ ಸಂಚಾಲಕ ಆಶೀಶ್ ಅಜ್ಜಿಬೆಟ್ಟು, ರಾಜ್ಯ ಕಾರ್ಯಕಾರಿಣಿ ಸದಸ್ಯ ನಿಶಾನ್ ಆಳ್ವ, ತಾ. ಸಂಚಾಲಕ ಹರ್ಷಿತ್ ಕೊಯಿಲ, ನಗರ ಸಹ ಕಾರ್ಯದರ್ಶಿ ನಾಗರಾಜ್ ಹಾಗೂ ಸರ್ವಕಾಲೇಜು ವಿದ್ಯಾರ್ಥಿ ಸಂಘದ ಪ್ರತಿನಿಧಿ ಸಂಜನ್ ಉಪಸ್ಥಿತರಿದ್ದರು.