ಎ28: ಉಡುಪಿ ಧರ್ಮಪ್ರಾಂತ್ಯದ ಕೆಥೊಲಿಕ್ ಮಹಿಳಾ ಸಮಾವೇಶ
ಉಡುಪಿ: ಉಡುಪಿ ಧರ್ಮಪ್ರಾಂತ್ಯದ ಕೆಥೊಲಿಕ್ ಮಹಿಳಾ ಸಂಘಟನೆಯ ಐದನೇ ವಾರ್ಷಿಕೋತ್ಸವ ಹಾಗೂ ಧರ್ಮಪ್ರಾಂತ್ಯ ಮಟ್ಟದ ಮಹಿಳಾ ಸಮಾವೇಶವು ಎಪ್ರಿಲ್ 28 ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಕನ್ನರ್ಪಾಡಿ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಜರುಗಲಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಕೆಥೊಲಿಕ್ ಮಹಿಳಾ ಸಂಘಟನೆಯ ಅಧ್ಯಕ್ಷೆ ಐರಿನ್ ಪಿರೇರಾ ತಿಳಿಸಿದರು.
ಅವರು ಬುಧವಾರ ಉಡುಪಿಯಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಉಡುಪಿ ಸ್ವತಂತ್ರ ಧರ್ಮಪ್ರಾಂತ್ಯವಾಗಿ ಮಾರ್ಪಾಡಾದ ಬಳಿಕ ಕೆಥೊಲಿಕ್ ಸ್ತ್ರೀಯರ ಸಂಘಟನೆ ಧರ್ಮಪ್ರಾಂತ್ಯ ಮಟ್ಟದಿಂದ ಆರಂಭಿಸಿ ವಲಯ ಘಟಕಗಳ ಹಂತದಲ್ಲಿ ಸಕ್ರಿಯವಾಗಿ ಕಾರ್ಯಾಚರಿಸುತ್ತಿದ್ದು, ಧರ್ಮಪ್ರಾಂತ್ಯ ಮಟ್ಟದಲ್ಲಿ ಬಲಿಷ್ಠ ಸಂಘಟನೆಯಾಗಿ ರೂಪುಗೊಂಡಿದೆ. ಮಹಿಳೆಯರಲ್ಲಿ ನಾಯಕತ್ವ ಗುಣದೊಂದಿಗೆ ಸ್ವಾಭಿಮಾನಿಗಳಾಗಿ ಬದುಕು ರೂಪಿಸುವತ್ತ ಸಂಘಟನೆ ಕೆಲಸ ನಿರ್ವಹಿಸುತ್ತಿದೆ. ಈ ವರೆಗೆ ಸಂಘಟನೆಯ ಅಧ್ಯಕ್ಷತೆಯ ಚುಕ್ಕಾಣಿಯನ್ನು ಲೀನಾ ರೋಚ್ ಬ್ರಹ್ಮಾವರ, ವಾಯ್ಲೆಟ್ ಕ್ಯಾಸ್ತಲಿನೋ ಪಾಂಬೂರು, ಜೆನಿಫರ್ ಮಿನೇಜಸ್ ಬ್ರಹ್ಮಾವರ, ಸ್ಮೀತಾ ರೇಂಜರ್ ಮಿಯಾರು ವಹಿಸಿ ಪ್ರಸ್ತುತ ಐರಿನ್ ಪಿರೇರಾ ಉದ್ಯಾವರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕøತಿಕ ಕ್ಷೇತ್ರಗಳಲ್ಲಿ ಮಹಿಳೆಯರನ್ನು ಸಬಲೀಕರಿಸುವುದು. ನಮ್ಮ ಸಂಘಟನೆಯ ಉದ್ದೇಶವಾಗಿದೆ. ಹಾಗೂ ಸಂಪದ ಸಂಸ್ಥೆಯ ನಿರ್ದೇಶಕರಾದ ವಂ ರೆಜಿನಾಲ್ಡ್ ಪಿಂಟೊ ಮಾರ್ಗದರ್ಶನದಲ್ಲಿ ಕೇಂದ್ರ ಸಂಘಟನೆಯ ಅಡಿಯಲ್ಲಿ ಧರ್ಮಪ್ರಾಂತ್ಯದ 50 ಚರ್ಚುಗಳಲ್ಲಿ ಸಕ್ರಿಯವಾಗಿ ಕಾರ್ಯಾಚರಿಸುತ್ತಿದ್ದು, ಉಳಿದ ಚರ್ಚುಗಳಲ್ಲಿ ಸದ್ಯವೇ ಹೊಸ ಘಟಕಗಳ ರಚನೆ ಆಗಲಿದೆ. ಸಂಘಟನೆಯ ನೇತೃತ್ವದಲ್ಲಿ 450 ಸ್ವಸಹಾಯ ಸಂಘಗಳು ರಚಿಸಿದ್ದು 6500 ಕ್ಕೂ ಅಧಿಕ ಮಹಿಳೆಯರು ಸ್ವಸಹಾಯ ಸಂಘದ ಸದಸ್ಯರಾಗಿ ರಾಜ್ಯ ಸರಕಾರದಿಂದ ಬರುವ ವಿವಿಧ ಯೋಜನೆಗಳನ್ನು ಪಡೆದು ಸ್ವಉದ್ಯೋಗವನ್ನು ಮಾಡುತ್ತಿದ್ದಾರೆ. ಮಹಿಳೆಯರು ರಾಜಕೀಯದಲ್ಲಿ ಹೆಚ್ಚು ಸಕ್ರಿಯರಾಗಬೇಕು ಎನ್ನುವ ಉದ್ದೇಶದಿಂದ ರಾಜಕೀಯ ಜಾಗೃತಿಯನ್ನು ಮೂಡಿಸಿದ್ದು, ಸದ್ರಿ ಸಂಘಟನೆಯ ಮಾರ್ಗದರ್ಶನ ಹಾಗೂ ಪ್ರೋತ್ಸಾಹದ ಮುಖಾಂತರ 143 ಸದಸ್ಯರು ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿ, 68 ಜಯಶಾಲಿಯಾಗಿದ್ದಾರೆ. ಮುಂದೆಯೂ ಇನ್ನೂ ಹೆಚ್ಚಿನ ಕ್ರೈಸ್ತ ಮಹಿಳೆಯರು ರಾಜಕೀಯಕ್ಕೆ ಬರುವಂತೆ ಪ್ರೋತ್ಸಾಹ ನೀಡಲಾಗುವುದು.
ಮಹಿಳಾ ಸಮಾವೇಶದ ಉದ್ಘಾಟನೆ ಬೆಳಿಗ್ಗೆ 10 ಗಂಟೆಗೆ ನಡೆಯಲಿದ್ದು, ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ ಡಾ ಜೆರಾಲ್ಡ್ ಐಸಾಕ್ ಲೋಬೊ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ವಂ ಬ್ಯಾಪ್ಟಿಸ್ಟ್ ಮಿನೇಜಸ್ ಆಶೀರ್ವಚನ ನೀಡಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾಡಲಿದ್ದು ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಉಡುಪಿ ವಲಯದ ಪ್ರಧಾನ ಧರ್ಮಗುರು ವಂ ಫ್ರೆಡ್ ಮಸ್ಕರೇನಸ್, ಕಟೀಲು ಚರ್ಚಿನ ಧರ್ಮಗುರು ವಂ ರೋನಾಲ್ಡ್ ಕುಟಿನ್ಹಾ, ಕರ್ನಾಟಕ ಪ್ರಾಂತೀಯ ಮಹಿಳಾ ಆಯೋಗದ ಕಾರ್ಯದರ್ಶಿ ಲೌಲಿ ಎಲ್ದೋಸ್ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮಹಿಳೆಯರಿಗಾಗಿ ವಿಚಾಗೋಷ್ಠಿ ನಡೆಯಲಿದ್ದು, ಸಮಾಜ ಸೇವಕಿ, ಕರ್ನಾಟಕ ಸೋಪ್ಸ್ ಮತ್ತು ಡಿಚರ್ಜಂಟ್ ಇದರ ಮಾಜಿ ಅಧ್ಯಕ್ಷೆ ವೆರೋನಿಕಾ ಕರ್ನೆಲಿಯೋ ನೇತೃತ್ವ ವಹಿಸಲಿದ್ದಾರೆ. ವಿಚಾರಗೋಷ್ಟಿಯಲ್ಲಿ ಅಕಾಶವಾಣಿ ಮಂಗಳೂರು ಇದರ ಕಾರ್ಯನಿರ್ವಾಹಕಿ ಕನ್ಸೆಪ್ಟಾ ಆಳ್ವ, ನ್ಯಾಯವಾದಿ ಮೇರಿ ಶ್ರೇಷ್ಟ ವಿಚಾರ ಮಂಡನೆ ಮಾಡಲಿದ್ದಾರೆ. ಮಧ್ಯಾಹ್ನದ ಬಳಿಕ ಪ್ರತಿ ವಲಯದಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಸಿಸ್ಟರ್ ಟ್ರೀಜಾ ಮಾರ್ಟಿಸ್, (ನಿರ್ದೇಶಕಿ), ಸಿಂತಿಯಾ ಡಿ’ಸೋಜಾ (ಕಾರ್ಯದರ್ಶಿ), ಬೀನಾ ಲೂವಿಸ್ (ಕೋಶಾಧಿಕಾರಿ), ಜಾನೆಟ್ ಬಾರ್ಬೊಜಾ (ಸಂಘಟನೆಯ ಮುಖವಾಣಿ ‘ಮೊತಿಯಾಂ’ ಸಂಪಾದಕರು) ಉಪಸ್ಥಿತರಿದ್ದರು.