ಎನ್.ಎಸ್.ಎಸ್ ಗೆ 13.60 ಕೋಟಿ ಅನುದಾನ- ಪ್ರಮೋದ್ ಮಧ್ವರಾಜ್
ಉಡುಪಿ : ರಾಜ್ಯದಲ್ಲಿ ಎನ್.ಎಸ್.ಎಸ್ ನ್ನು ಬಲಪಡಿಸುವ ಉದ್ದೇಶದಿಂದ 13.60 ಕೋಟಿ ಅನುದಾನವನ್ನು ನೀಡಲಾಗಿದೆ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಅವರು ಶನಿವಾರ, ಎಂಜಿಎಂ ಕಾಲೇಜು ಉಡುಪಿಯ ರಾಷ್ಟೀಯ ಸೇವ ಯೋಜನಾ ಘಟಕ ಒಂದು ಮತು ಎರಡರ ಆಶ್ರಯದಲ್ಲಿ ,ಎಂಜಿಎಂ. ನ ನೂತನ ರವೀಂದ್ರ ಮಂಠಪದಲ್ಲಿ ನಡೆದ ಎನ್.ಎಸ್.ಎಸ್ ದತ್ತು ಗ್ರಾಮ ಯೋಜನೆ ಅನ್ವಯ ಅಲೆವೂರು ಗ್ರಾಮ ದತ್ತು ಸ್ವೀಕರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಇತರೆ ರಾಜ್ಯಗಳ ಎನ್.ಎಸ್.ಎಸ್ ಗೆ ಕೇಂದ್ರದ ಅನುದಾನ ದೊರೆಯುತ್ತಿದೆ ಆದರೆ ರಾಜ್ಯದಲ್ಲಿ ಕೇಂದ್ರದ ನೆರವು ಪಡೆಯದೇ ರಾಜ್ಯ ಸರ್ಕಾರವೇ ಅನುದಾನ ಬಿಡುಗಡೆ ಮಾಡುತ್ತಿದ್ದು, ಕಳೆದ ವರ್ಷ 5 ಕೋಟಿ 65 ಲಕ್ಷ ಇದ್ದ ಅನುದಾನವನ್ನು ಈ ವರ್ಷ 13.60 ಕೋಟಿಗೆ ಹೆಚ್ಚಿಸಲಾಗಿದೆ, ಎನ್.ಎಸ್.ಎಸ್ ಸದಸ್ಯರ ಸಂಖ್ಯೆಯನ್ನು 3 ಲಕ್ಷದಿಂದ 6 ಲಕ್ಷಕ್ಕೆ ಹೆಚ್ಚಿಸಲಾಗಿದ್ದು, ಎನ್.ಎಸ್.ಎಸ್ ಬಲವರ್ಧನೆಗೆ ಹಾಗೂ ವಿನೂತನ ಕಾರ್ಯಕ್ರಮಗಳನ್ನು ಅಳವಡಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಎಂದು ಸಚಿವರು ಹೇಳಿದರು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಕುಸುಮಾ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಲೆವೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಕಾಂತ ನಾಯಕ್, ಕಾಲೇಜು ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕರಿ ಡಾ. ಸುರೇಶ ರಮಣ ಮಯ್ಯ ಉಪಸ್ಥಿತರಿದ್ದರು.
ಎನ್,ಎಸ್.ಎಸ್ ಯೋಜನಾಧಿಕಾರಿಗಳಾದ ಶಮಂತ್ ಸ್ವಾಗತಿಸಿ, ಪ್ರಿಯಾಶ್ರೀ ವಂದಿಸಿದರು. ವಿದ್ಯಾರ್ಥಿನಿಯರಾದ ಶೃತಿ ಮತ್ತು ಚೈತ್ರಾ ನಿರೂಪಿಸಿದರು.