ಎನ್.ಎಸ್.ಯು.ಐ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸಲು ಸಹಕಾರಿ –ವಿನಯ್ ಕುಮಾರ್ ಸೊರಕೆ
ಉಡುಪಿ: ವಿದ್ಯಾರ್ಥಿಗಳು ಎನ್.ಎಸ್.ಯು.ಐ ಅಂತಹ ಸಂಘಟನೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ರಾಜಕೀಯದೊಂದಿಗೆ ನಾಯಕತ್ವದ ಗುಣ ಬೆಳೆಯಲು ಸಹಕಾರಿಯಾಗುತ್ತದೆ ಎಂದು ಮಾಜಿ ನಗರಾಭಿವೃದ್ಧಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕರಾದ ವಿನಯ್ ಕುಮಾರ್ ಸೊರಕೆ ಹೇಳಿದರು.
ಅವರು ಶನಿವಾರ ಬಾರ್ಕೂರಿನ ಸಂಕಮ್ಮ ತಾಯಿ ಸಭಾಂಗಣದಲ್ಲಿ ನ್ಯಾಶನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾ ಕುಂದಾಪುರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಅಂತರ್ ಕಾಲೇಜು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಮಾವೇಶ ಸಿರಿ – 2019 ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ಶಕ್ತಿ ದೇಶದ ಬಹುದೊಡ್ಡ ಶಕ್ತಿಯಾಗಿದ್ದು ಅದನ್ನು ಯಾವುದೇ ಸರಕಾರಕಗಳು ಕೂಡ ಕಡೆಗಣಿಸುವಂತಿಲ್ಲ. ವಿದ್ಯಾರ್ಥಿ ಶಕ್ತಿ ಒಂದು ಸರಕಾರವನ್ನು ಉಳಿಸಲು ಅಥವಾ ಅಳಿಸಲು ಕೂಡ ಶಕ್ತವಾಗುತ್ತದೆ. ತಾನು ಕೂಡ ಎನ್ ಎಸ್ ಯು ಐ ಸಂಘಟನೆಯಿಂದ ಇಂದು ಈ ಮಟ್ಟಕ್ಕೆ ಬೆಳೆಯಲು ಕಾರಣವಾಗಿದ್ದು, ಸಂಘಟನೆಯ ಮೂಲಕ ಹೋರಾಟದ ಗುಣ ಬೆಳೆಯಲು ಸಹಕಾರಿಯಾಗುತ್ತದೆ. ಸಂಘಟನೆ ವಿದ್ಯಾರ್ಥಿಗಳಿಗೆ ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವ, ಹಾಗೂ ಸಾಮರಸ್ಯದ ಜೀವನದಂತಹ ಗುಣಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಎನ್ ಎಸ್ ಯುಐ ಅಧ್ಯಕ್ಷರಾದ ಕ್ರಿಸ್ಟನ್ ಡಿ ಆಲ್ಮೇಡಾ ವಹಿಸಿದ್ದರು. ನಿಖಿಲ್ ರಾಜ ಮೌರ್ಯಾ ದಿಕ್ಸೂಚಿ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ಉಪಾಧ್ಯಕ್ಷರಾದ ಪ್ರಖ್ಯಾತ್ ಶೆಟ್ಟಿ ತೆಂಕನಿಡಿಯೂರು, ಕುಂಬದಾಪುರ ವಿಧಾನಸಭಾ ಕ್ಷೇತ್ರದ ಎನ್ ಎಸ್ ಯು ಐ ಅಧ್ಯಕ್ಷ ವೀರೆಂದ್ರ ಕಾಂಚನ್, ಬಾರ್ಕೂರು ಘಟಕದ ಅಧ್ಯಕ್ಷ ದಿವಾಕರ ಕುಲಾಲ್, ಕಾಂಗ್ರೆಸ್ ನಾಯಕರಾದ ಮಲ್ಯಾಡಿ ಶಿವರಾಮ್ ಶೆಟ್ಟಿ, ಶಂಕರ್ ಕುಂದರ್, ಇಚ್ಚಿತಾರ್ಥ್ ಶೆಟ್ಟಿ, ಯತೀಶ್ ಕರ್ಕೇರಾ, ಕಿಶನ್ ಹೆಗ್ಡೆ ಕೊಳಕೆಬೈಲು ಹಾಗೂ ಇತರರು ಉಪಸ್ಥಿತರಿದ್ದರು.