ಎರಡನೇ ವಾರಕ್ಕೆ ಕಾಲಿಟ್ಟ ಸಂಡೇ ಲಾಕ್ ಡೌನ್ – ಕುಂದಾಪುರ ತಾಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ
ಕುಂದಾಪುರ: ಕೋವಿಡ್-19 ಸಾಮುದಾಯಿಕವಾಗಿ ಹಬ್ಬುತ್ತಿರುವ ಹಿನ್ನೆಲೆ ಇದರ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಹೊರಡಿಸಿರುವ ಸಂಡೆ ಲಾಕ್ ಡೌನ್ ಎರಡನೆ ವಾರಕ್ಕೆ ಕಾಲಿಟ್ಟಿದ್ದು, ಕುಂದಾಪುರ ನಗರವೂ ಸೇರಿದಂತೆ ತಾಲೂಕಿನೆಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಶನಿವಾರ ರಾತ್ರಿ 8ರಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ಒಟ್ಟು 33 ಗಂಟೆಗಳ ಕಾಲ ಸರ್ಕಾರ ಹೊರಡಿಸಿರುವ ಕಟ್ಟುನಿಟ್ಟಿನ ಲಾಕ್ಡೌನ್ನಿಂದ ಕುಂದಾಪುರ ನಗರ ಹಾಗೂ ತಾಲೂಕಿನ ಗ್ರಾಮೀಣ ಭಾಗಗಳು ಸಂಪೂರ್ಣ ಬಂದ್ ಆಗಿವೆ.
ಹಾಲು, ಮೆಡಿಕಲ್, ಪೇಪರ್, ಬಿಟ್ಟರೆ ಬೇರಾವುದೇ ಅಂಗಡಿಗಳು ತೆರೆದಿಲ್ಲ. ಬೈಂದೂರು, ಗಂಗೊಳ್ಳಿ ಭಾಗಗಳಿಂದ ಕುಂದಾಪುರ ನಗರಕ್ಕೆ ಸಂಪರ್ಕಿಸುವ ಚಿಕನ್ಸಾಲ್ ರಸ್ತೆ ಪ್ರವೇಶದ್ವಾರದಲ್ಲಿ ಹಾಗೂ ಶಾಸ್ತ್ರೀ ಸರ್ಕಲ್ ಬಳಿಯಲ್ಲಿ ಬ್ಯಾರಿಕೇಡ್ಗಳನ್ನಿಟ್ಟು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ನಗರ ಪ್ರವೇಶಿಸುವ ಪ್ರತಿಯೊಬ್ಬರ ಮಾಹಿತಿ ಕಲೆಹಾಕಿ ತುರ್ತು ಕೆಲಸಗಳಿದ್ದರೆ ಮಾತ್ರ ನಗರ ಪ್ರವೇಶಕ್ಕೆ ಅನುಮತಿ ನೀಡುತ್ತಿದ್ದಾರೆ. ಕೆಲವು ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಗಸ್ತು ಬಿಟ್ಟರೆ, ಉಳಿದ್ಯಾವ ಕಡೆಗಳಲ್ಲೂ ಪೊಲೀಸರು ರಸ್ತೆಗಿಳಿದಿಲ್ಲ. ಪೊಲೀಸ್ ಸಿಬ್ಬಂದಿಗಳು ಫೀಲ್ಡಿಗಿಳಿಯದಿದ್ದರೂ ಕೊರೋನಾ ಭೀತಿಗೆ ಸಾರ್ವಜನಿಕರೆ ಸ್ವತಃ ಮನೆಯಲ್ಲೆ ಲಾಕ್ ಆಗಿದ್ದಾರೆ.
ತಾಲೂಕಿನ ಗ್ರಾಮೀಣ ಭಾಗವಾದ ಹೆಮ್ಮಾಡಿ, ಗಂಗೊಳ್ಳಿ, ಮುಳ್ಳಿಕಟ್ಟೆ, ಮರವಂತೆ, ತಲ್ಲೂರು ಸೇರಿಂದಂತೆ ಬಹುತೇಕ ಗ್ರಾಮೀಣ ಭಾಗಗಳು ಸಂಪೂರ್ಣ ಬಂದ್ ಆಗಿದ್ದವು. ಇನ್ನು ಗ್ರಾಮೀಣ ಭಾಗದಲ್ಲಿ ಅಲ್ಲಲ್ಲಿ ಖಾಸಗಿ ವಾಹನಗಳ ತಿರುಗಾಟ ಬಿಟ್ಟರೆ ರಿಕ್ಷಾ ಹಾಗೂ ಖಾಸಗಿ ಬಸ್ಗಳ ಓಡಾಟ ಸಂಪೂರ್ಣ ಸ್ತಬ್ಧಗೊಂಡಿದೆ.
ಕೊರೋನಾ ನಿಯಂತ್ರಣಕ್ಕಾಗಿ ಸೋಮವಾರದಿಂದ ಮಧ್ಯಾಹ್ನ ಎರಡು ಗಂಟೆಯ ಬಳಿಕ ಪುರಸಭಾ ವ್ಯಾಪ್ತಿಯ ಎಲ್ಲಾ ವ್ಯಾಪರಸ್ಥರು ಸ್ವಯಂಪ್ರೇರಿತ ಬಂದ್ ಗೆ ಮುಂದಾಗಿದ್ದಾರೆ.
ಸಚಿತ್ರ: ಅನಿಲ್ ಛಾಯ, ಕುಂದಾಪುರ