ಎರಡು ದಿನಗಳ ಮಂಗಳೂರು ನದಿ ಉತ್ಸವಕ್ಕೆ ಸಚಿವ ಖಾದರ್ ಚಾಲನೆ

Spread the love

ಎರಡು ದಿನಗಳ ಮಂಗಳೂರು ನದಿ ಉತ್ಸವಕ್ಕೆ ಸಚಿವ ಖಾದರ್ ಚಾಲನೆ

ಮಂಗಳೂರು : ದ.ಕ. ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಕರಾವಳಿ ಉತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ಫಲ್ಗುಣಿ ನದಿ ತಟದಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ ‘ಮಂಗಳೂರು ನದಿ ಉತ್ಸವ’ಕ್ಕೆ ಕೂಳೂರು ಸೇತುವೆ ಜಟ್ಟಿ ಬಳಿಯಲ್ಲಿ ಶನಿವಾರ ಚಾಲನೆ ದೊರೆಯಿತು.

ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ನದಿ ಉತ್ಸವಕ್ಕೆ ಚಾಲನೆ ನೀಡಿದರು. ದೋಣಿಯಲ್ಲಿ ಸಂಗೀತದೊಂದಿಗೆ ಬಂಗ್ರ ಕೂಳೂರು ಜಟ್ಟಿವರೆಗೆ ಅತಿಥಿ ಗಣ್ಯರು ಆಗಮಿಸಿದರು. ಅಲ್ಲಿ ಪಂಚವಾದ್ಯ ನಗಾರಿ, ವಾದ್ಯದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.

ಬಳಿಕ ಮಾತನಾಡಿದ ಸಚಿವ ಖಾದರ್ ನದಿಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಪೂರಕವಾಗಿ ನಡೆಸಲಾಗುವ ಈ ನದಿ ಉತ್ಸವ ಪ್ರಥಮ ಹೆಜ್ಜೆಯಾಗಿದ್ದು, ಮುಂದಿನ ದಿನಗಳಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು ಸ್ಥಳೀಯಾಡಳಿತದ ಜತೆ ಸೇರಿ ಇಂತಹ ಉತ್ಸವಗಳನ್ನು ನಡೆಸುವಲ್ಲಿ ಇದು ತರಬೇತಿ ಕಾರ್ಯಕ್ರಮವಾಗಬೇಕಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ಇನ್ನಷ್ಟು ಪರಿಣಾಮಕಾರಿ ರೀತಿಯಲ್ಲಿ ಈ ಉತ್ಸವವನ್ನು ನಡೆಸಲು ಕ್ರಮ ವಹಿಸಲಾಗುವುದು. ಮೀನುಗಾರಿಕಾ ಜೆಟ್ಟಿ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳೊಂದಿಗೆ ನದಿ ಉತ್ಸವವನ್ನು ಇನ್ನೂ ಉತ್ತಮ ರೀತಿಯಲ್ಲಿ ನಡೆಸಲು ಅನುಕೂಲವಾಗುವಂತೆ ಮುಂದಿನ ಬಜೆಟ್ನಲ್ಲಿ ಅನುದಾನ ನೀಡಲು ಕ್ರಮ ವಹಿಸಲಾಗುವುದು .

ಜಿಲ್ಲೆಯಲ್ಲಿ ಸಾಕಷ್ಟು ನದಿ ಪ್ರದೇಶಗಳಿದ್ದು, ಅಲ್ಲಿ ಇಂತಹ ಉತ್ಸವಗಳನ್ನು ನಡೆಸುವ ಮೂಲಕ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಜತೆಗೆ ನದಿಯ ಸಂರಕ್ಷಣೆಗೆ ಮುಂದಾಗಲು ಜಿಲ್ಲಾ ಮಟ್ಟದಲ್ಲಿ ನೀತಿಯೊಂದನ್ನು ರೂಪಿಸಲು ಜಿಲ್ಲಾಧಿಕಾರಿಗೆ ಈಗಾಗಲೇ ಸೂಚನೆ ನೀಡಿರುವುದಾಗಿ ಸಚಿವ ಖಾದರ್ ತಿಳಿಸಿದರು.
ಬೋಟ್ಹೌಸ್ಗೆ ಸಬ್ಸಿಡಿ ಸೇರಿದಂತೆ ಈ ಉತ್ಸವವನ್ನು ಶಾಶ್ವತವಾಗಿ ಮುಂದುವರಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ಸ್ವಾಗತಿಸಿ ಮಾತನಾಡಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ನದಿಗಳ ಬಗ್ಗೆ ಜನರಿಗೆ ಜಾಗೃತಿ ಹಾಗೂ ಅರಿವು ಮೂಡಿಸುವ ಜತೆಗೆ ನದಿಗಳ ಸಂರಕ್ಷಣೆಯನ್ನು ಇನ್ನಷ್ಟು ಉತ್ತಮವಾಗಿ ನಿರ್ವಹಿಸಲು ಇದೊಂದು ಪ್ರಯತ್ನ ಎಂದರು.

ಈ ಸಂದರ್ಭ ಮನಪಾ ಮೇಯರ್ ಭಾಸ್ಕರ್ ಕೆ., ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಅಪರ ಜಿಲ್ಲಾಧಿಕಾರಿ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.


Spread the love