ಎರಡು ಬ್ಯಾಗ್ ಹಿಡಿದು ಉಡುಪಿಗೆ ಬಂದೆ; ಕರ್ನಾಟಕದ ಜನತೆ ತೋರಿದ ಪ್ರೀತಿಗೆ ಧನ್ಯವಾದ- ಅಣ್ಣಾಮಲೈ
ಬೆಂಗಳೂರು: ಕರ್ನಾಟಕವೊಂದು ಸುಂದರ ರಾಜ್ಯ. ಕರ್ನಾಟಕದ ಜನರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಕನ್ನಡಿಗನಾಗಿ ನಾನು ಹೆಮ್ಮೆಪಟ್ಟುಕೊಳ್ಳುತ್ತೇನೆ ಎಂದು ಐಪಿಎಸ್ ಅಧಿಕಾರಿ ಹಾಗೂ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ತೆರಳುವಾಗ ತಿಳಿಸಿದ್ದಾರೆ.
ಹೊರ ರಾಜ್ಯದಿಂದ ಬಂದಂತವರಿಗೆ ಇಷ್ಟೊಂದು ಪ್ರೀತಿಯನ್ನು ನೀಡಿದ್ದಾರೆ. ಉಡುಪಿ, ಚಿಕ್ಕಮಗಳೂರು, ಕಾರ್ಕಳದ ಜನರನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ. ನಾನು ಉಡುಪಿಗೆ ಹೋದಾಗ ಅಲ್ಲಿನ ಜನರು ನನ್ನನ್ನು ಆಧರಿಸಿದರು. ಅದರಲ್ಲೂ ತನಗೆ ಪ್ರಥಮವಾಗಿ ಉಡುಪಿಗೆ ನಿಯೋಜನೆ ಮಾಡಿದಾಗ 2 ಬ್ಯಾಗ್ ಗಳೊಂದಿಗೆ ಉಡುಪಿ ಬಸ್ ನಿಲ್ದಾಣಕ್ಕೆ ಬಂದ ತನಗೆ ಉಡುಪಿ ಜನರು ನೀಡಿದ ಪ್ರೀತಿಯನ್ನು ನಾನು ಮರೆಯಲಾರೆ, ಅವರನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ. ಕರ್ನಾಟಕ ಯಾವಾಗಲೂ ನನ್ನ ಎದೆಯಲ್ಲಿದೆ. ಬೇರೆ ರಾಜ್ಯದಿಂದ ಬಂದಿದ್ದರೂ ಕೂಡ ನಾನು ಕನ್ನಡಿಗ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆಯಿದೆ ಎಂದರು.
ನಾನು ನನ್ನ ಹುದ್ದೆಗೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದೇನೆ. ಅಂಗೀಕಾರ ಸ್ವಲ್ಪ ತಡವಾಗಬಹುದು. ಒಂದು ವರ್ಷದಿಂದ ಯೋಚಿಸಿ ನಿರ್ಧಾರ ತೆಗೆದುಕೊಂಡಿದ್ದೇನೆ. ಪೊಲೀಸ್ ಕೆಲಸವನ್ನು ಹೆಮ್ಮೆಯಿಂದ ಮಾಡಿದ್ದೇನೆ. 2019ನೇ ಭಾರತದಲ್ಲಿ ವಿವಿಧ ಕೆಲಸಗಳನ್ನು ಮಾಡಬಹುದು. ನಾನು ತುಂಬಾ ಸಂತೋಷವಾಗಿ ರಾಜೀನಾಮೆ ಸಲ್ಲಿಸಿದ್ದೇನೆ. ಒಂದೇ ಕೆಲಸ ಮಾಡುವುದಕ್ಕಿಂತ ಹಲವು ಕೆಲಸಗಳನ್ನು ಮಾಡುತ್ತೇನೆ. ರಾಜಕೀಯಕ್ಕೆ ಹೋಗೋ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ನಾನು ಯಾವ ಪಾರ್ಟಿಗೂ ಬರ್ತೀನಿ ಅಂಥ ಹೇಳಿಲ್ಲ ಎಂದು ಹೇಳಿದರು.
ದೇವರು ದಾರಿ ತೋರಿಸಿದಂತೆ ಹೋಗುತ್ತೇನೆ. ನಾನು ಏನೂ ದೊಡ್ಡ ವ್ಯಕ್ತಿಯಲ್ಲ. ಸಾಮಾನ್ಯ ಜನ ಅಷ್ಟೇ. ಇಲ್ಲಿ ತುಂಬಾ ಒಳ್ಳೆಯ ಜನಗಳಿದ್ದಾರೆ. ನನಗೆ ಸಂತೋಷ ಇದೆ. ಇಂದು ನನ್ನ ಸ್ವಂತ ನಿರ್ಧಾರ. ನಾನು ಜನರಿಗಾಗಿ ಕೆಲಸ ಮಾಡಿದ್ದೇನೆ. ಈಗಿನ ಸಿಎಂ ಕುಮಾರಸ್ವಾಮಿ ಅವರಿಂದ ಹಿಡಿದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಉತ್ತಮ ಬೆಂಬಲವನ್ನು ನೀಡಿದ್ದರು. ಯಾರಿಂದಲೂ ನನಗೆ ಕಿರುಕುಳವಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ನನಗೆ 4 ತಿಂಗಳು ರೆಸ್ಟ್ ಬೇಕು. ನಾನು ಪುಸ್ತಕ ಬರೆಯುತ್ತಿದ್ದೇನೆ. ಯುವಕರ ಅಭಿವೃದ್ಧಿ ವಿಚಾರಕ್ಕೆ ಪುಸ್ತಕ ಬರೆಯುವ ತಯಾರಿಯಲ್ಲಿದ್ದೇನೆ. ಇನ್ನು ಸ್ವತಂತ್ರ್ಯವಾಗಿ ಬೇರೆ ಏನಾದರೂ ಮಾಡಬೇಕು ಎನ್ನುವ ಆಸೆಯಿದೆ. ನಾನು ಏನಾದರೂ ಮಾಡುತ್ತೇನೆ. ನಾನು 21 ದಿನ ರಜಾ ಮಾತ್ರ ತೆಗೆದುಕೊಂಡಿದ್ದೇನೆ. ನನಗೆ ಸರಿಯಾಗಿ ರೆಸ್ಟ್ ಸಿಕ್ಕಿರಲಿಲ್ಲ. ನನ್ನ ಕೆಲಸ ನಾನು ಮಾಡಬೇಕು. ಎಲ್ಲರಿಗೂ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.
6 ತಿಂಗಳ ಸುದೀರ್ಘವಾದ ಗಹನ ಚಿಂತನೆಯ ಬಳಿಕ ನಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಕಳೆದ 9 ವರ್ಷಗಳಿಂದ ನಾನು ಈ ಸೇವೆಯಲ್ಲಿದ್ದು, ಪ್ರತಿ ಕ್ಷಣಗಳನ್ನು ‘ಖಾಕಿ’ ತತ್ವಕ್ಕೆ ಬದ್ಧವಾಗಿ ನಡೆದುಕೊಂಡು ಬಂದಿದ್ದೇನೆ. ಈ ಖಾಕಿಯಲ್ಲಿ ಸಿಗುವ ಹೆಮ್ಮೆಯ ಕ್ಷಣ ಹಾಗೂ ಸಹೋದ್ಯೋಗಿಗಳೊಂದಿಗೆ ಕಳೆದ ಕ್ಷಣಗಳು ಅವಿಸ್ಮರಣಿಯ. ಒಂದರ್ಥದಲ್ಲಿ ಪೊಲೀಸ್ ಸೇವೆಯೆಂದರೆ ದೇವರಿಗೆ ಅತೀ ಇಷ್ಟವಾದುದು ಎಂದು ನಾನು ನಂಬಿದ್ದೇನೆ. ಅತೀ ಒತ್ತಡದಲ್ಲಿ ನಿರ್ವಹಿಸುವ ಈ ಕೆಲಸದಲ್ಲಿ ಕುಂದು ಕೊರತೆಗಳು ಸಾಮಾನ್ಯ. ಅದೆಷ್ಟೋ ಕಾರ್ಯಕ್ರಮಗಳನ್ನು ನಾನು ಮಿಸ್ ಮಾಡಿದ್ದೇನೆ; ಹಲವು ಬಾರಿ ನನ್ನ ಕಷ್ಟಕಾಲದಲ್ಲಿ ನಿಂತವರ ಜೊತೆ ನನಗೆ ನಿಲ್ಲಲಿಕ್ಕಾಗಲಿಲ್ಲ, ಹಲವೊಮ್ಮೆ ಅಸಹಾಯಕತನ ಅನುಭವಿಸದ್ದೇನೆ; ಕೆಲವೊಮ್ಮೆ, ಮಾತನಾಡಬೇಕಾದ ಸಂದರ್ಭದಲ್ಲಿ ಮೌನ ವಹಿಸಿದ್ದೇನೆ.
ಕಳೆದ ವರ್ಷ ಕೈಲಾಶ ಮಾನಸಸರೋವರಕ್ಕೆ ನೀಡಿದ ಭೇಟಿ ನನ್ನ ಕಣ್ಣನ್ನು ತೆರೆಸಿದೆ. ಅದು, ಜೀವನದಲ್ಲಿ ಆದ್ಯತೆಯ ವಿಷಯಗಳನ್ನು ನನಗೆ ತಿಳಿಸಿಕೊಟ್ಟಿದೆ. ಮಧುಕರ್ ಶೆಟ್ಟಿ ಸರ್ ನಿಧನವು ಜೀವನದೊಳಗೆ ಮತ್ತೊಮ್ಮೆ ಆತ್ಮಾವಲೋಕನ ಮಾಡಲು ಪ್ರೇರೇಪಿಸಿದೆ.
ಎಲ್ಲಾ ಒಳ್ಳೆ ಕೆಲಸಗಳು ಒಂದು ದಿನ ಕೊನೆಯಾಗಲೇ ಬೇಕು, ಹಾಗೇಯೇ ನನ್ನ ಖಾಕಿ ದಿನಗಳೂ.. ಈ ನಿಟ್ಟಿನಲ್ಲಿ, ಹಿಂದೆನೇ ನಿರ್ಧಾರ ತೆಗೆದುಕೊಂಡಿದ್ದೆಯಾದರೂ, ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಜೀನಾಮೆ ನೀಡಿ ಸರ್ಕಾರಕ್ಕೆ ಸಮಸ್ಯೆ ಉಂಟುಮಾಡುವುದು ಸರಿ ಎನಿಸಲಿಲ್ಲ. ನನ್ನ ರಾಜೀನಾಮೆಯಿಂದ ನಿಮಗೆ ನೋವಾಗಿದ್ದರೆ, ನಾನು ಕ್ಷಮೆ ಯಾಚಿಸುತ್ತೇನೆ. ಪ್ರಾಮಾಣಿಕವಾಗಿ ಹೇಳೋದಾದರೆ, ನಾನಿದನ್ನು ಈಗ ಮಾಡಲೇಬೇಕು. ಈ ಕಠಿಣವಾದ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ನನ್ನ ಜೊತೆ ನಿಂತ ನನ್ನ ಆಪ್ತ ಸ್ನೇಹಿತೆ, ನನ್ನ ಮಡದಿಗೆ ಇದು ಬಹಳ ಭಾವನಾತ್ಮಕ ಸನ್ನಿವೇಶ.
ಮುಂದೇನು?
ನನ್ನ ಮುಂದಿನ ನಡೆಯೇನು ಎಂದು ತಿಳಿಯಲು ಬಯಸುವವರಿಗೆ ಹೇಳೋದಾದರೆ, ಬಹಳ ದೊಡ್ಡ ಕನಸುಗಳನ್ನು ಕಟ್ಟಿಕೊಳ್ಳಲು, ನಾನೊಬ್ಬ ಸಣ್ಣ ಮನುಷ್ಯ. ನಾನು ಜೀವನದಲ್ಲಿ ಕಳೆದುಕೊಂಡಿರುವ ಸಣ್ಣ ಪುಟ್ಟ ಸಂತೋಷಗಳನ್ನು ಮತ್ತೆ ಪಡೆಯಲು ಸಮಯ ಕಳೆಯಬೇಕು. ಬೆಳೆಯುತ್ತಿರುವ ನನ್ನ ಮಗನಿಗೆ ಒಳ್ಳೆ ತಂದೆಯಾಗಬೇಕು. ಆತನಿಗೆ ನನ್ನ ಅಗತ್ಯವಿದೆ.
ವಾಪಸು ಮನೆಗೆ ಮರಳಿ ಕೃಷಿ ಮಾಡಬೇಕು. ನಾನೀಗ ಪೊಲೀಸ್ ಅಧಿಕಾರಿಯಲ್ಲ, ನಾನೇ ಸಾಕಿದ ಕುರಿಗಳೂ ನಾನು ಹೇಳಿದ ಮಾತನ್ನು ಕೇಳುತ್ತವೋ, ಇಲ್ಲ ಗೊತ್ತಿಲ್ಲ. ಸಿಕ್ಕಿರುವ ಅವಕಾಶಗಳ ಬಗ್ಗೆ ಮಾತನಾಡಲು ನನ್ನಂಥ ನಶ್ವರ ಮನುಷ್ಯನಿಗೆ, ಜೀವನವು ಸಿಕ್ಕಿರುವ ಒಂದು ಬಲುದೊಡ್ಡ ಅವಕಾಶ.
ನನ್ನ ವೃತ್ತಿ ಜೀವನದ ಪ್ರತಿ ಹೆಜ್ಜೆಯಲ್ಲೂ, ನ್ಯಾಯದ ಹೋರಾಟದಲ್ಲಿ ನನ್ನ ಜೊತೆ ನಿಂತ ಕಾರ್ಕಳ, ಉಡುಪಿ ಮತ್ತು ಬೆಂಗಳೂರಿನ ಜನರನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ. ಅಪೂರ್ಣವಾಗಿದ್ದ ನನ್ನನ್ನು ಪರಿಪೂರ್ಣ ಮನುಷ್ಯನಾಗಿ ರೂಪಿಸಿದ್ದು ಈ ಜನ. ನನಗೆ ವೃತ್ತಿಪಾಠವನ್ನು ಕಲಿಸಿದ ಹಿರಿಯ ಸಹದ್ಯೋಗಿಗಳ ಮಾರ್ಗದರ್ಶನ ಹಾಗೂ ವೃತ್ತಿನಿಷ್ಠರಾಗಿರುವ ಕಿರಿಯ ಸಹದ್ಯೋಗಿಗಳನ್ನು ನಾನು ಬಹಳ ಮಿಸ್ ಮಾಡುವೆ. ಹಿರಿಯ ಕಿರಿಯ ಪೇದೆಗಳನ್ನೂ ಅಷ್ಟೇ ಮಿಸ್ ಮಾಡುವೆ. ನಾನು ಅವರಿಗಾಗಿ ಜೀವಿಸಿದ್ದೇನೆ, ಅವರ ಹಕ್ಕು-ಉತ್ತಮ ಜೀವನ ಗುಣಮಟ್ಟ ಅವರಿಗೆ ಸಿಗುವಂತಾಗಲು ನಾನು ಪರಿಶ್ರಮ ಪಟ್ಟಿದ್ದೇನೆ.
ನಿಮ್ಮ ನಿರೀಕ್ಷೆಗಳಿಗೆ ತಕ್ಕಂತೆ ನಾನು ನನ್ನ ಜವಾಬ್ದಾರಿ ನಿರ್ವಹಿಸಿದ್ದೇನೆ ಎಂಬ ನಂಬಿಕೆ ನನಗಿದೆ. ಒಂದು ವೇಳೆ ನನ್ನಿಂದ ಯಾವುದೇ ತಪ್ಪಾಗಿದ್ದರೂ, ನನ್ನಿಂದ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ. ನಾನೂ ನಿಮ್ಮಂತೆ ಒಬ್ಬ ಮನುಷ್ಯ ಎಂದು ಅವರು ತಿಳಿಸಿದ್ದಾರೆ.