ಎಸಿ ಕೋಣೆಯಿಂದ ದಕ್ಷ ಎಸ್ಪಿ ಹೊರಬರಲಿ – ಶ್ರೀನಿಧಿ ಹೆಗ್ಡೆ

Spread the love

ಎಸಿ ಕೋಣೆಯಿಂದ ದಕ್ಷ ಎಸ್ಪಿ ಹೊರಬರಲಿ – ಶ್ರೀನಿಧಿ ಹೆಗ್ಡೆ

ಉಡುಪಿ: ರಾಜ್ಯದಲ್ಲೆ ಹೆಚ್ಚು ಶಾಂತಿಯುತ, ಕಾನೂನು ಸುವ್ಯವಸ್ಥೆಯನ್ನು ಪಾಲಿಸುವ ನಾಗರಿಕರನ್ನು ಹೊಂದಿರುವ ಉಡುಪಿ ಜಿಲ್ಲೆಯಲ್ಲಿ, ಪ್ರಸ್ತುತ ಎಸ್ಪಿಯಾಗಿರುವ ಡಾ.ಅರುಣ್ ದಕ್ಷ ಅಧಿಕಾರಿ ಎಂದು ಹೆಸರು ಪಡೆದಿದ್ದಾರೆ. ಆದರೆ ಅವರ ನಿರ್ಧಾರಗಳು ಪೋಲಿಸ್ ಸಿಬ್ಬಂದಿಗಳ ಆತ್ಮಸ್ಥೈರ್ಯವನ್ನು ಕುಗ್ಗಿಸುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ್, ಹೈಕೋರ್ಟ್ ವಕೀಲ ಶ್ರೀನಿಧಿ ಹೆಗ್ಡೆ ಪತ್ರಿಕಾ ಪ್ರಕಟಣೆಯಲ್ಲಿ ವಿಷಾದಿಸಿದ್ದಾರೆ.

ಆರಂಭದಲ್ಲಿ ಸಾಕಷ್ಟು ಖ್ಯಾತಿ ಪಡೆದ ಎಸ್ಪಿ ಡಾ.ಅರುಣ್ ಅವರ ಅವಧಿಯಲ್ಲಿ ನಡೆದ ಘನಘೋರ ಅಪರಾಧಗಳನ್ನು ಪತ್ತೆಹಚ್ಚುವಲ್ಲಿ ಅವರ ನೇತೃತ್ವದಲ್ಲಿ ಜಿಲ್ಲಾ ಪೋಲಿಸ್ ವಿಫಲವಾಗಿರುವುದು ನಗ್ನ ಸತ್ಯ. ಕ್ಷುಲ್ಲಕ ಕಾರಣಕ್ಕೆ ಪೋಲಿಸ್ ಸಿಬ್ಬಂದಿಗಳನ್ನು ಅಮಾನತು ಮಾಡುತ್ತ ಬ್ರಿಟಿಷ್ ಮಾದರಿ ಪೋಲಿಸಿಂಗ್ ಅನ್ನು ಬಿಟ್ಟು ಅವರು ತಮ್ಮ ಎಸಿ ಕೋಣೆಯಿಂದ ಹೊರಬಂದು ವಾಸ್ತವವನ್ನು ಅರಿತು ಕರ್ತವ್ಯವನ್ನು ನಿರ್ವಹಿಸಬೇಕು.

ಬ್ರಹ್ಮಾವರ ಠಾಣೆಯ ಲಾಕಪ್ ನಲ್ಲಿ ಆರೋಪಿ ಮೃತಪಟ್ಟಿದ್ದಾನೆ. ಈ ಘಟನೆಯಲ್ಲೂ ಕೇವಲ ಸಿಬ್ಬಂದಿ, ಪಿಎಸ್ಐ ಗಳ ಮೇಲೆ ಕ್ರಮ ಕೈಗೊಂಡರೇ ಮುಗಿಯಿತೇ..? ಜಿಲ್ಲಾ ಪೋಲಿಸ್ ಯಾಕಿಷ್ಟು ವಿಫಲವಾಗುತ್ತಿದೆ ಎಂಬ ಬಗ್ಗೆ ಎಸ್ಪಿಯವರು ಆತ್ಮವಲೋಕನ ಮಾಡಿಕೊಂಡರೇ ಸಮಸ್ಯೆಗೆ ಪರಿಹಾರ ಸಿಗಬಹುದು.

ಜಿಲ್ಲೆಯಲ್ಲಿ ನಿರಂತರ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದು, ಹೊರ ರಾಜ್ಯದ ಚಡ್ಡಿ ಗ್ಯಾಂಗ್ ಇಲ್ಲಿ ಕಳ್ಳತನ ನಡೆಸಿದೆ. ಸರಕಾರ ವಸತಿ ಗೃಹಕ್ಕೆ ನುಗ್ಗಿ ಆರು ಮನೆಯ ಬೀಗ ಒಡೆದು, ಮೂರು ಮನೆಯಿಂದ ಚಿನ್ನಾಭರಣ ದೋಚಿದ್ದಾರೆ. ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ವೃದ್ದ ಮಹಿಳೆಯನ ಕುತ್ತಿಗೆಯಲ್ಲಿದ್ದ ಸರವನ್ನು ಎಳೆದುಕೊಂಡು ಹೋದ ಘಟನೆಗಳು ನಡೆದಿದೆ.

ದಲಿತ ಯುವಕನ್ನು ಗುಂಡಿಕ್ಕಿ ಹತ್ಯೆಗೈದ ಪ್ರಕರಣದಲ್ಲಿಯೂ ಯಾವೊಬ್ಬ ಆರೋಪಿಯನ್ನು ಬಂಧಿಸಿಲ್ಲ. ಇದರ ನೇರಹೊಣೆಯನ್ನು ಎಸ್ಪಿಯವರೇ ಹೊರಬೇಕು. ತಾವು ಕಚೇರಿಯಿಂದ ಹೊರಬಂದು, ಜಿಲ್ಲೆಯನ್ನು ಸುತ್ತಾಡಿ ಜನರ ಪ್ರಶ್ನೆಗಳನ್ನು ಆಲಿಸಿ, ಸಮಸ್ಯೆಗಳನ್ನು ಬಗೆಹರಿಸಬೇಕೇ ವಿನಃ ಸಿಬ್ಬಂದಿಗಳನ್ನು ಅಮಾನತು ಮಾಡುವುದರಿಂದ ಯಾವುದೇ ಪರಿಹಾರ ಸಿಗುವುದಿಲ್ಲ.

ಭ್ರಷ್ಟಾಚಾರ ಮುಕ್ತ ಉಡುಪಿ ಮಾಡಲು ತಾವು ಪಣ ತೊಟ್ಟಿರುವುದು ಖುಷಿಯ ವಿಚಾರ. ಆದರೆ ಕ್ಷುಲ್ಲಕ ಕಾರಣಕ್ಕೆ ಸಿಬ್ಬಂದಿಗಳನ್ನು ಅಮಾನತು ಮಾಡುತ್ತಾ ಹೋದರೇ ನಾಳೆ ಜಿಲ್ಲೆಯಲ್ಲಿ ಪೋಲಿಸಿಂಗ್ ಮಾಡಲು ಯಾರು ಸಿದ್ದರಿರುವುದಿಲ್ಲ. ಜಿಲ್ಲಾ ಪೋಲಿಸ್ ಅಧಿಕಾರಿಯವರು ಪೋಲಿಸ್ ಸಿಬ್ಬಂದಿಗಳ ವಿಶ್ವಾಸವನ್ನು ಪಡೆದು ತಂಡವಾಗಿ ಕೆಲಸ ನಿರ್ವಹಿಸಿ, ಜಿಲ್ಲೆಯ ಜನೆತೆಗೆ ನ್ಯಾಯ ದೊರಕಿಸಿ ಕೊಡಲಿ.

ಭಾರತ ದೇಶದಲ್ಲಿ ಸಂವಿಧಾನದ ಚೌಕಟ್ಟಿನಲ್ಲಿ ಪೋಲಿಸ್ ವ್ಯವಸ್ಥೆ ಬರುತ್ತದೆ. ಪೋಲಿಸರಿಂದಾಗುವ ಅನ್ಯಾಯಗಳಿಗೆ ಸಾರ್ವಜನಿಕರು ನ್ಯಾಯಾಲಯದ ಮೊರೆ ಹೋಗುತ್ತಾರೆ. ದಕ್ಷ ಎಸ್ಪಿಯವರು ಕೆಲವು ವಿಚಾರದಲ್ಲಿ ರಾಜ್ಯ ಹೈಕೋರ್ಟಿನ ತೀರ್ಪನ್ನು ಕಡೆಗಣಿಸಿ, ತನ್ನ ಅಹಂ ಪ್ರತಿಷ್ಟೆಯನ್ನು ಸ್ಥಾಪಿಸಲು ಹೊರಟಿರುವುದು ಅವರಿಗೆ ಶೋಭೆ ತರುವುದಿಲ್ಲ. ಹೈಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಳ್ಳುವ ದಿನ ದೂರವಿಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love