ಎಸ್ಪಿ ಡಾ.ಸಂಜೀವ ಎಂ.ಪಾಟೀಲ್ ಫೊನ್ –ಇನ್ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ

Spread the love

ಎಸ್ಪಿ ಡಾ.ಸಂಜೀವ ಎಂ.ಪಾಟೀಲ್ ಫೊನ್ –ಇನ್ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ   

ಉಡುಪಿ: ಉಡುಪಿ ಜಿಲ್ಲೆಗೆ ಹೊಸದಾಗಿ ಬಂದಿರುವ ಎಸ್ಪಿ ಡಾ.ಸಂಜೀವ ಎಂ.ಪಾಟೀಲ್ ಸಾರ್ವಜನಿಕರೊಂದಿಗೆ ಫೊನ್ –ಇನ್ ಕಾರ್ಯಕ್ರಮ ಶನಿವಾರದಿಂದ ಆರಂಭಿಸಿ ಮೊದಲ ದಿನವೇ ಜನರಿಂದ ಉತ್ತಮ ಸ್ಪಂದನೆ ಪಡೆದುಕೊಂಡಿದ್ದಾರೆ.

ಈ ಹಿಂದೆ ಉಡುಪಿಯ ಎಸ್ಪಿಯಾಗಿದ್ದ ಅಣ್ಣಾಮಲೈ ಬಳಿಕ ಸಂಜೀವ ಎಂ ಪಾಟೀಲ್ ಅವರ ಕಾರ್ಯವೈಖರಿ ಉಡುಪಿ ಜಿಲ್ಲೆಯ ಜನತೆಗೆ ಫಸ್ಟ್ ಇಂಪ್ರೆಶನ್ ಬೆಸ್ಟ್ ಇಂಪ್ರೆಶನ್ ಎಂಬಂತಾಗಿದ್ದು ಮೊದಲ ದಿನದ ಒಂದು ಗಂಟೆಯ ಫೋನ್ ಸಂಬಾಷಣೆಯಲ್ಲಿ 27ಕರೆಗಳು ಬಂದಿದ್ದು ಜನರಿಂದ ಶ್ಲಾಘನೆ ವ್ಯಕ್ತವಾಗಿದೆ.

ಬಸ್ಸುಗಳ ವೇಗ ಮಿತಿ ಹಾಗೂ ಕರ್ಕಶ ಹಾರ್ನ್ ಸಮಸ್ಯೆಗಳ ಕುರಿತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಎಸ್ಪಿಯವರಲ್ಲಿ ದೂರಿದ್ದು ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿಯವರು ಈಗಾಗಲೇ ಬಸ್ಸಿನ ಮ್ಹಾಲಕರನ್ನು ವೈಯುಕ್ತಿಕವಾಗಿ ಭೇಟಿ ಮಾಡಿ ಮೂರು ವಿಷಯಗಳ ಬಗ್ಗೆ ಸೂಚನೆ ನೀಡಿದ್ದು, ಅಪಾಯಕಾರಿಯಾಗಿ ಬಸ್ಸು ಒಡಿಸುವುದು, ಕರ್ಕಶ ಹಾರ್ನ್ ಹಾಕಿ ಜನರಿಗೆ ಹಾಗೂ ಸಣ್ಣ ವಾಹನಗಳಿಗೆ ತೊಂದರೆ ನೀಡುವುದು ಹಾಗೂ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಾಗಿ ಫೂಟ್ ಬೋರ್ಡಿನಲ್ಲಿ ಸಂಚರಿಸುವುದುನ್ನು ನಿಲ್ಲಿಸುವಂತೆ ಸೂಚನೆ ನೀಡಲಾಗಿದೆ. ಒಂದು ವೇಳೆ ಅವರು ಅದಕ್ಕೆ ಒಪ್ಪದೆ ಹೋದಲ್ಲಿ ಮುಂದಿನ ವಾರದಿಂದಲೇ ಕ್ರಮ ಕೈಗೊಳ್ಳೂವ ಎಚ್ಚರಿಕೆಯನ್ನು ನೀಡಿದರು.

ಜಿಲ್ಲೆಯ ಕೋಟ, ಶಿರ್ವ, ಗಂಗೊಳ್ಳಿ ಪರಿಸರದಲ್ಲಿ ಹೆಚ್ಚು ಹೆಚ್ಚು ಮಟ್ಕಾ ಜೂಜು ಇತ್ಯಾದಿ ದಂಧೆಗಳ ಕುರಿತು ಹೆಚ್ಚಿನ ಕರೆಗೆಳು ಬಂದಿದ್ದು, ಇದಕ್ಕೆ ಉತ್ತರಿಸಿದ ಸಂಜೀವ್ ಪಾಟೀಲ್ ಅವರು ಜಿಲ್ಲೆಯಲ್ಲಿ ಮಟ್ಕಾವನ್ನು ಸಂಪೂರ್ಣ ನಿಲ್ಲಿಸುವುದು ನನ್ನ ಉದ್ದೇಶ. ಯಾವುದೇ ಪ್ರಭಾವಿ ವ್ಯಕ್ತಿಯಾದರೂ ಕೂಡ ಆಯಾ ಭಾಗದ ಪೋಲಿಸ್ ಠಾಣೆಯ ಸಿಬಂಧಿಗಳು ಇದರ ಕುರಿತು ಕ್ರಮ ಕೈಗೊಳ್ಳಬೇಕು. ಅವರು ಕ್ರಮ ಕೈಗೊಳ್ಳದೆ ಇದ್ದರೆ ತಾನೇ ಸ್ವತಃ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ ಪಾಟೀಲ್ ಯಾರಿಗೂ ಕರೆದು ಎಚ್ಚರಿಕೆ ನೀಡುವುದಿಲ್ಲ ಯಾವುದೇ ಅಕ್ರಮ ಚಟುವಟಿಕೆ ನಡೆಸುವ ವ್ಯಕ್ತಿಗೆ ಸೂಕ್ತ ಜಾಗ ಎಂದರೆ ಜೈಲು ಮತ್ತು ಪೋಲಿಸ್ ಠಾಣೆ ಆದ್ದರಿಂದ ಅಂತಹ ಚಟುವಟಿಕೆಗಳಲ್ಲಿ ತೊಡಗಿರುವವರು ಇನ್ನೂ ಮುಂದೆ ನಿಲ್ಲಿಸುವುದು ಉತ್ತಮ. ಕರೆ ಮಾಡಿದ ವ್ಯಕ್ತಿಗಳು ಮಟ್ಕಾ ಚೀಟಿ ಬರೆಯುವವರ ಹೆಸರುಗಳನ್ನು ಈ ಸಂದರ್ಭದಲ್ಲಿ ನೀಡಿದ್ದು ಕರೆ ಮಾಡಿದ ವ್ಯಕ್ತಿಗಳ ಹೆಸರುಗಳನ್ನು ಗೌಪ್ಯವಾಗಿರಿಸಲಾಗುವುದು ಎಂದರು.

ಕೋಟ, ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ ಗೂಡಂಗಡಿಗಳಲ್ಲಿ ಅನಧೀಕೃತವಾಗಿ ಸಾರಾಯಿ ಮಾರಾಟ ನಡೆಯುತ್ತಿದ್ದು ಜನರಿಗೆ ಸಮಸ್ಯೆ ಉಂಟಾಗುವ ಕುರಿತು ಕರೆಗಳು ಬಂದವು ಅದಕ್ಕೆ ಪ್ರತಿಕ್ರಿಯಿಸಿದ ಎಸ್ಪಿಯವರು ಇದರ ಕುರಿತು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಠಾಣೆಯ ಅಧಿಕಾರಿಗಳಿಗೆ ಸೂಚನೆ ನೀಡಲಿದ್ದೇನೆ ಎಂದರು.

ಮಲ್ಪೆಯಲ್ಲಿ ಮೀನಿನ ಲಾರಿಗಳು ತ್ಯಾಜ್ಯದ ನೀರನ್ನು ರಸ್ತೆಯಲ್ಲಿ ಚೆಲ್ಲಿಕೊಂಡು ಹೋಗುತ್ತಿದ್ದು ಇದರಿಂದ ದ್ವಿಚಕ್ರ ವಾಹನ ಸವಾರರಿಗೆ ತೊಂದರೆಯುಂಟಾಗುತ್ತಿದೆ ಎಂಬ ಕುರಿತು ಬಂದ ಕರೆಗೆ ಉತ್ತರಿಸಿ ಸೋಮವಾರದಿಂದ ಅಂತಹ ಲಾರಿಗಳ ವಿರುದ್ದ ಕ್ರಮಕ್ಕೆ ಸ್ಥಳೀಯ ಪೋಲಿಸ್ ಠಾಣಾಧಿಕಾರಿಗೆ ಸೂಚನೆ ನೀಡಿದರು ಅಲ್ಲದೆ ಅಂತಹ ನಿಯಮ ಉಲ್ಲಂಘಿಸುವ ಲಾರಿಗಳನ್ನು ಸೀಜ್ ಮಾಡುವಂತೆ ಸೂಚನೆ ನೀಡಿದರು. ರಸ್ತೆಗಳಿರುವುದು ತ್ಯಾಜ್ಯವನ್ನು ಚೆಲ್ಲಲು ಅಲ್ಲ ತ್ಯಾಜ್ಯವನ್ನು ಚೆಲ್ಲುವುದಾದರೆ ಅವರವರ ಸ್ವಂತ ಸ್ಥಳದಲ್ಲಿಯೇ ಚೆಲ್ಲಲಿ ಎಂದರು.

ಉಡುಪಿ ಮಣಿಪಾಲ ಪರಿಸರದಲ್ಲಿ ರಿಕ್ಷಾಚಾಲಕರು ಮೀಟರ್ ಹಾಕದೆ ಯದ್ವಾತದ್ವ ಬಾಡಿಗೆ ವಸೂಲಿ ಮಾಡುತ್ತಿದ್ದು, ಪ್ರಶ್ನಿಸಿದರೆ ಹಲ್ಲೆಗೆ ಮುಂದಾಗುತ್ತಾರೆ ಎಂಬ ದೂರಿಗೆ ಉತ್ತರಿಸಿದ ಎಸ್ಪಿಯವರು ಅಂತಹ ರಿಕ್ಷಾದವರ ರಿಕ್ಷಾ ನಂಬರ್ ಮತ್ತು ಸ್ಥಳವನ್ನು ತನಗೆ ನೀಡುವಂತೆ ಸೂಚಿಸಿದರು.

ಇದಲ್ಲದೆ ಅಕ್ರಮ ಬಾರು, ಟ್ರಾಫಿಕ್ ಸಮಸ್ಯೆ, ಕುಡುಕರ ಹಾವಳೀ, ಅಕ್ರಮ ಮರಳುಗಾರಿಕೆ ಕುರಿತು ಕೂಡ ಸಾರ್ವಜನಿಕರು ಎಸ್ಪಿಯವರಲ್ಲಿ ದೂರಿಕೊಂಡರು.

ವಿಶೇಷವೆಂದರೆ ಶಾಲೆಯೊಂದರ ಶಿಕ್ಷಕರು ಕರೆ ಮಾಡಿ ತಮ್ಮ ಶಾಲೆಯ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಕಾನೂನಿನ ವಿಷಯ ಕುರಿತು ಕೇಳಲು ಫೋನಿನಲ್ಲಿ ಅವಕಾಶ ಕೇಳಿಕೊಂಡರು ಅದಕ್ಕೆ ಪ್ರತಿಕ್ರಿಯಿಸಿದ ಎಸ್ಪಿಯವರು ಫೋನಿನಲ್ಲಿ ಹೆಚ್ಚು ವಿಸ್ತಾರವಾಗಿ ಹೇಳಲು ಸಮಯದ ಅಭಾವವಿದ್ದು ಫೋನಿನ್ ಕಾರ್ಯಕ್ರಮ ಮುಗಿದ ಕೂಡಲೇ ತಾನೇ ಶಾಲೆಗೆ ಭೇಟಿ ನೀಡಿ ಅರ್ಧ ಗಂಟೆ ಕಾರ್ಯಕ್ರಮ ನೀಡುವುದಾಗಿ ಹೇಳೀದರು.

ಬಳಿಕ ಮಾತನಾಡಿದ ಎಸ್ಪಿಯವರು ಪ್ರಥಮ ಪ್ರಯತ್ನದಲ್ಲೇ ಉತ್ತಮ ಪ್ರತಿಕ್ರಿಯೆ ಲಭಿಸಿದ್ದು, 27 ಕರೆಗಳು ಬಂದಿವೆ. ಈ ಕಾರ್ಯಕ್ರಮ ಪ್ರತಿ ಶನಿವಾರ ನಿರಂತರವಾಗಿ ನಡೆಯಲಿದೆ. ಕರೆ ಮಾಡುವವರು ನಿರ್ಭಿತಿಯಿಂದ ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ಕರೆ ಮಾಡಿದವರಿಗೆ ಇಲಾಖೆ ಕೈಗೊಂಡ ಕ್ರಮದ ಕುರಿತು ವೈಯುಕ್ತಿವಾಗಿ ಇಲಾಖೆಯಿಂದ ಫೋನ್ ಮಾಡಿ ಮಾಹಿತಿ ನೀಡಲಾಗುವುದು. ಅಲ್ಲದೆ ಕರೆ ಮಾಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದರು. ಉಡುಪಿ ಜಿಲ್ಲೆಯಲ್ಲಿ ಪಾರ್ಕಿಂಗ್ ಸಮಸ್ಯೆ ಇರುವ ಬಗ್ಗೆ ಮಾಹಿತಿ ಬಂದಿದೆ. ಜಿಲ್ಲಾಧಿಕಾರಿ ಅವರ ಅಧಿಸೂಚನೆ ಮೇಲೆ ಪಾರ್ಕಿಂಗ್ ನೋ ಪಾರ್ಕಿಂಗ್ ಸ್ಥಳ ಗುರುತಿಸುವುದರ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿ ಬದಲಾವಣೆ ಮಾಡುವುದರ  ಬಗ್ಗೆ  ಸ್ಥಳೀಯರೊಂದಿಗೆ ಚರ್ಚೆ ನಡೆಸುವ ಕಾರ್ಯ ಠಾಣಾಧಿಕಾರಿ ಮಾಡುತ್ತಾರೆ ಡಿವೈಎಸ್ಪಿ ವರದಿಯನ್ನು ನನಗೆ ನೀಡುತ್ತಾರೆ, ಇನ್ನು ಹೆಚ್ಚಿನ ಮಳೆ ಆರಂಭವಾಗಿರುವುದರಿಂದ ಪೋಷಕರು ಶಾಲಾ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಹೆಚ್ಚಿನ ಸಹಾಯಕ್ಕಾಗಿ ಜಿಲ್ಲಾಡಳಿತಕ್ಕೆ ಕರೆ ಮಾಡಲಿ ಅಥವಾ ಪೊಲೀಸ್ ಇಲಾಖೆಗೂ ಮಾಹಿತಿ-ದೂರು ನೀಡಿದರೆ ಸಹಕರಿಸಲಾಗುವುದು ಎಂದರು.


Spread the love
1 Comment
Inline Feedbacks
View all comments
Sudhir Nayak
7 years ago

Its really a great move by SP of Udupi…
And action has been started immediately,i personally noticed today afternoon at 2pm manipal Police were inspecting all Bus horn sounds….