ಏರ್ಯ ಲಕ್ಷ್ಮೀನಾರಾಯಣ ಆಳ್ವರ ನಿಧನಕ್ಕೆ ಸಂತಾಪ
ವಿಟ್ಲ: ಬೆರಗುಗೊಳಿಸುವ ಕಾರ್ಯಬಾಹುಳ್ಯದ ಸಾಂಸ್ಕೃತಿಕ ಸಂಘಟನೆಯ ರೂವಾರಿ ಏರ್ಯ ಲಕ್ಷ್ಮೀನಾರಾಯಣ ಆಳ್ವರು ಶಿಕ್ಷಣ, ಸಹಕಾರಿ, ಜಾನಪದ, ರಾಜಕೀಯ, ಸಾಹಿತ್ಯ, ಧಾರ್ಮಿಕ, ಕಲೆ, ಸಾಮಾಜಿಕ ಸಂಘಟನೆ, ಸಮ್ಮೇಳನಗಳ ಪ್ರವರ್ತಕ. ಹೀಗೆ ಸವ್ಯಸಾಚಿ ಅಗ್ರಪಂಕ್ತಿಯ ಬಹುಮುಖ ಸಾಮಾಜಿಕ ನಾಯಕರಾಗಿ ನಮ್ಮ ನಾಡಿನಲ್ಲಿ ಸಾಂಸ್ಕೃತಿಕ ಬದುಕಿನ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ ಧೀಮಂತರು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.
ಒಡಿಯೂರು ಶ್ರೀ ಸಂಸ್ಥಾನದ ಆರಂಭೋತ್ಸವದಲ್ಲಿ ಅವರು ಪಾಲ್ಗೊಂಡವರು. ಹಿರಿಯ ಸಾಹಿತಿಗಳಾದ ಆಳ್ವರ ಅಗಲುವಿಕೆ ನಾಡಿನ ಸಾಂಸ್ಕೃತಿಕ ಲೋಕಕ್ಕೆ ದೊಡ್ಡ ನಷ್ಟ. ಅಗಲಿದ ದಿವ್ಯಾತ್ಮಕ್ಕೆ ಆರಾಧ್ಯದೇವರು ಚಿರಶಾಂತಿಯನ್ನು ಕರುಣಿಸಲೆಂದು ಪ್ರಾರ್ಥಿಸಿದ್ದಾರೆ.
ಮಾಣಿಲ ಶ್ರೀ ಸಂತಾಪ: ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರ ಅಗಲುವಿಕೆ ನಾಡಿನ ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಅಗಲಿದ ದಿವ್ಯಾತ್ಮಕ್ಕೆ ಮಹಾಲಕ್ಷ್ಮಿಯು ಚಿರಶಾಂತಿಯನ್ನು ಕರುಣಿಸಲೆಂದು ಮಾಣಿಲ ಶ್ರೀಧಾಮದ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿ ಪ್ರಾರ್ಥಿಸಿದ್ದಾರೆ.
ಹೆಗ್ಗಡೆ ಸಂತಾಪ: ಹಿರಿಯ ಸಾಹಿತಿ, ಜಾನಪದ ವಿದ್ವಾಂಸ ಏರ್ಯ ಲಕ್ಷ್ಮೀನಾರಾಯಣ ಆಳ್ವರ ನಿಧನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಸಂತಾಪ ಸೂಚಿಸಿದ್ದು, ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದ್ದಾರೆ.
‘ಸಹೃದಯ ಸಾಹಿತಿ, ಸಜ್ಜನ ಸಮಾಜ ಸೇವಕರಾಗಿದ್ದ ಆಳ್ವರ ನಿಧನದಿಂದ ಕುಟುಂಬದ ಬಂಧು ಒಬ್ಬರನ್ನು ಕಳೆದುಕೊಂಡಷ್ಟೇ ದುಃಖವಾಗಿದೆ.
ಧರ್ಮಸ್ಥಳದ ವಿಶೆಷ ಅಭಿಮಾನಿ ಹಾಗೂ ಆಪ್ತರಾಗಿದ್ದ ಅವರು, ಎಲ್ಲ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಪ್ರತೀಕವಾಗಿದ್ದ ಆಳ್ವರ ಆದರ್ಶಗಳನ್ನು ಸದಾ ಪಾಲಿಸಿಕೊಂಡು ಜಾಗೃತರಾಗಿರುವುದೇ ನಾವು ಅವರಿಗೆ ಕೊಡುವ ಸೂಕ್ತ ಗೌರವ’ ಎಂದು ತಿಳಿಸಿದ್ದಾರೆ.
ಸಹಕಾರ ರಂಗದ ಅಜಾತಶತ್ರು, ನಾಡಿನ ಹಿರಿಯ ಸಾಹಿತಿ, ಎಸ್‌ಸಿಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರ ನಿಧನಕ್ಕೆ ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಸಂತಾಪ ಸೂಚಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತರಾಗಿದ್ದ, ಸ್ವಾತಂತ್ರ್ಯ ಹೋರಾಟಗಾರ, ಗಾಂಧಿವಾದಿ ಏರ್ಯ ಲಕ್ಷ್ಮಿನಾರಾಯಣ ಆಳ್ವ ಅವರ ನಿಧನಕ್ಕೆ ಶಾಸಕ ಡಿ. ವೇದವ್ಯಾಸ ಕಾಮತ್ ತೀವ್ರ ಸಂತಾಪ ಸೂಚಿಸಿದ್ದಾರೆ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ. ಅವರ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.