ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದ ಪೂವಮ್ಮ ಅವರಿಗೆ ಮುಖ್ಯಮಂತ್ರಿಗಳಿಂದ ಅಭಿನಂದನೆ
ಮಂಗಳೂರು : ರಾಜ್ಯ ಮತ್ತು ರಾಷ್ಟ್ರದ ಗೌರವವನ್ನು ಏಷ್ಯನ್ ಕ್ರೀಡಾಕೂಟದಲ್ಲಿ ಎತ್ತಿ ಹಿಡಿದ ರಾಜ್ಯದ ಪ್ರತಿಭೆ ಪೂವಮ್ಮ ಅವರಿಗೆ ಮುಖ್ಯ ಮಂತ್ರಿ ಕುಮಾರ ಸ್ವಾಮಿ ಅವರು ಇಂದು ಸನ್ಮಾನಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಪ್ರಗತಿ ಪರಿಶೀಲನೆ ಸಭೆಯಲ್ಲೇ ಆಯೋಜಿಸಲಾದ ಸಭೆಯ ಆರಂಭದಲ್ಲೇ ಸಾಧಕಿ ಪೂವಮ್ಮ ಅವರು ಚಿನ್ನದ ಪದಕ ಪಡೆದುದಕ್ಕೆ 25 ಲಕ್ಷ ಹಾಗೂ ಬೆಳ್ಳಿ ಪದಕ ಪಡೆದುದಕ್ಕೆ 15 ಲಕ್ಷ ಒಟ್ಟು 40 ಲಕ್ಷ ರೂ.ಗಳ ಚೆಕ್ ಜೊತೆಗೆ ನಿವೇಶನದ ಭರವಸೆ ನೀಡಿದ ಮುಖ್ಯಮಂತ್ರಿಗಳು ಹೃದಯಸ್ಪರ್ಶಿ ಅಭಿನಂದನೆಯನ್ನು ಕ್ರೀಡಾ ಸಾಧಕಿಗೆ ಸಲ್ಲಿಸಿದರು.
ಇಂದು ಮುಖ್ಯಮಂತ್ರಿಗಳು ಬೆಳಗ್ಗೆ ಜಿಲ್ಲೆಗೆ ಆಗಮಿಸಿದ ವೇಳೆ ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರೀಡಾಳುವಿಗೆ ಗೌರವ ನೀಡುವ ಬಗ್ಗೆ ನಿರ್ಧರಿಸಲಾಯಿತು. ಈ ಅಭಿನಂದನೆ ರಾಜ್ಯದ ಸಾಧಕರಿಗೆ ಸ್ಪೂರ್ತಿಯಾಗಲಿ ಎಂದ ಮುಖ್ಯಮಂತ್ರಿಗಳು, ಕ್ರೀಡಾ ಸಾಧಕರಿಗೆ ಇನ್ನಷ್ಟು ಪ್ರೋತ್ಸಾಹ ನೀಡಲು ಸರ್ಕಾರ ಬದ್ಧವಾಗಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪೂವಮ್ಮ ಅವರು, ಇಷ್ಟು ತುರ್ತು ಸಮಯದಲ್ಲಿ ತನ್ನ ಸಾಧನೆಗೆ ನೀಡಿದ ಗೌರವಕ್ಕೆ ತಾನು ಅನಂತಾನಂತ ಧನ್ಯವಾದಗಳನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಜಯಮಾಲಾ ಅವರು ಶುಭಹಾರೈಸಿದರು. ಸಂಸದ ನಳಿನ್ ಕುಮಾರ್ ಕಟೀಲ್. ಎಂಎಲ್ಸಿ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಜನಪ್ರತಿನಿಧಿಗಳು, ಅಧಿಕಾರಿಗಳಿದ್ದರು.