ಐಜಿಪಿ ವಸತಿಗೃಹದಲ್ಲಿದ್ದ ಗಂಧದ ಮರ ನಳಿನ್ ಕೊಂಡೊಯ್ದಿದ್ದಾರೆ ಎನ್ನುವ ಮೂರ್ಖ ನಾನಲ್ಲ ; ಸಚಿವ ರೈ
ಮಂಗಳೂರು: ಐಜಿಪಿ ವಸತಿಗೃಹದ ಆವರಣದಲ್ಲಿದ್ದ ಶ್ರೀಗಂಧದ ಮರವನ್ನು ಸಂಸದ ನಳಿನ್ ತೆಗೆದುಕೊಂಡು ಹೋಗಿದ್ದಾರೆಂದು ಹೇಳುವಷ್ಟು ಮೂರ್ಖ ನಾನಲ್ಲ. ನಳಿನ್ ಮನೆ ಐಜಿಪಿ ಮನೆಗೆ ಹತ್ತಿರವಾಗಿದ್ದು ನನ್ನ ಮನೆ ತುಂಬಾ ದೂರದಲ್ಲಿದೆ. ಸಂಸದರಾಗಿದ್ದವರು ಯಾರ ಬಗ್ಗೆಯಾದರೂ ಮಾತನಾಡುವಾಗ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ದಕ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಾಜ್ಯದ ಅರಣ್ಯ ಸಚಿವ ರಮಾನಾಥ ರೈ ಹೇಳಿದರು.
ಅವರು ನಗರದ ಸರ್ಕಿಟ್ ಹೌಸಿನಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ, ಪ್ರಕರಣದ ಕುರಿತು ಈಗಾಗಲೇ ಒರ್ವ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಿದ್ದೇವೆ ಮತ್ತು ಅದು ತನಿಖೆಯ ಹಂತದಲ್ಲಿದೆ. ಅರಣ್ಯ ಎನ್ನುವುದು ನಮಗೆ ಒಂದು ತೆರೆದ ಸಂಪತ್ತು ಅದನ್ನು ರಕ್ಷಿಸುವುದಕ್ಕಾಗಿಯೇ ನಾವು ಅಧಿಕಾರಿಗಳನ್ನು ನೇಮಿಸುವುದು ಎಂದರು.
ನಮ್ಮ ಜಿಲ್ಲೆ ಕೋಮು ಸೌಹರ್ದತೆಗೆ ಹೆಸರುವಾಸಿಯಾಗಿತ್ತು ಆದರೆ ಇತ್ತೀಚೆಗೆ ಕೆಲವೊಂದು ಘರ್ಷಣೆಗಳಿಂದ ಅದಕ್ಕೆ ಧಕ್ಕೆಯುಂಟಾಗಿದೆ. ಜಿಲ್ಲೆಯ ಹೆಚ್ಚಿನ ಜನರು ಶಾಂತಿಯನ್ನು ಬಯಸುತ್ತಾರೆ ಆದರೆ ಕೆಲವೊಂದು ಸಂಘಟನೆಗಳನ್ನು ಶಾಂತಿಯನ್ನು ಕದಡುವ ಕೆಲಸವನ್ನು ಮಾಡುವುದರ ಮೂಲಕ ಅವರ ಲಾಭಕ್ಕಾಗಿ ಜಿಲ್ಲೆಯ ಶಾಂತಿಯನ್ನು ನಾಶ ಮಾಡುತ್ತಿದ್ದಾರೆ. ಇದಕ್ಕೆ ಕೊನೆ ಹಾಡಬೇಕಾಗಿದ್ದು ಮತ್ತೆ ಕೋಮು ಸೌಹಾರ್ದತೆಯನ್ನು ಬೆಳೆಸಬೇಕಾದ ಅವಶ್ಯಕತೆ ಇದೆ.
ದಕ ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆಗಳ ಹಿನ್ನಲೆಯಲ್ಲಿ ಮುಂದೆ ಶಾಂತಿ ಸಾಮರಸ್ಯವನ್ನು ಕಾಪಾಡುವ ಉದ್ದೇಶದಿಂದ ಸೆ. 12 ರಂದು ಸಾಮರಸ್ಯದ ನಡಿಗೆಯನ್ನು ಆಯೋಜಿಸಿದ್ದು, ಫರಂಗಿಪೇಟೆಯಿಂದ ಮಾಣಿಯ ವರೆಗೆ ಪಾದಯಾತ್ರೆಯ ಮೂಲಕ ಸಾಮರಸ್ಯದ ನಡೆ ನಡೆಯಲಿದ್ದು, ಮಾಣಿಯಲ್ಲಿ ಸಾರ್ವಜನಿಕ ಸಮಾವೇಶ ನಡೆಯಲಿದೆ ಎಂದರು.
ಇತ್ತೀಚೆಗೆ ಜಿಲ್ಲೆಯ ನಡೆದ ಹತ್ಯೆಗಳಲ್ಲಿ ಭಾಗಿಯಾದ ಸಂಘಟನೆಗಳಾದ ಸಂಘಪರಿವಾರ, ಪಿಎಫ್ ಐ ಮತ್ತು ಎಸ್ ಡಿ ಪಿಐ ಹೊರತುಪಡಿಸಿ ಜಿಲ್ಲೆಯ ಎಲ್ಲಾ ಶಾಂತಿಪ್ರಿಯ ನಾಗರಿಕರು ಇದರಲ್ಲಿ ಭಾಗವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವನ ನೆಲೆಯಲ್ಲಿ ಆಹ್ವಾನ ನೀಡುತ್ತಿದ್ದೇನೆ. ಸಾಮರಸ್ಯ ನಡಿಗೆ ಪಕ್ಷಾತೀತವಾಗಿದ್ದು ಯಾವುದೇ ಪಕ್ಷದ ಧ್ವಜ ಅಥವಾ ಘೋಷಣೆಗೆ ಅವಕಾಶವಿರುವುದಿಲ್ಲ ಎಂದರು.
ಗೃಹಸಚಿವ ಹುದ್ದೆ ಸಿಗುವುದರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ರೈ ನಾನು ನನ್ನ ರಾಜಕೀಯ ಜೀವನದಲ್ಲಿ ಎಂದೂ ಕೂಡ ಯಾವುದೇ ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟವನಲ್ಲ ಆದರೆ ಕೊಟ್ಟ ಹುದ್ದೆಯನ್ನು ನಿರಾಕರಿಸುವಂತಹ ಸಂತ ಕೂಡ ನಾನಲ್ಲ. ಪಕ್ಷ ಯಾವುದೇ ಹುದ್ದೆ ನೀಡಿದರು ಅದನ್ನು ಸರಿಯಾಗಿ ಪ್ರಾಮಾಣಿಕ ನೆಲೆಯನ್ನು ನಿರ್ವಹಿಸುತ್ತೇನೆ ಎಂದರು.