ಐದು ವರ್ಷಗಳಲ್ಲಿ ದೇಶವನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿದ ಮೋದಿ – ಅಶೋಕ್ ಕುಮಾರ್ ಕೊಡವೂರು
ಉಡುಪಿ: ಮನಮೋಹನ್ ಸಿಂಗ್ ಸರಕಾರ ಏನು ಮಾಡಿದೆ ಎನ್ನುವ ಶೋಭಾ ಕಳೆದ ಐದು ವರ್ಷದಲ್ಲಿ ಮೋದಿ ಮಾಡಿದ ಸಾಧನೆ ಏನು? ಹೆಸರು ಹೇಳಿ ಕರೆಯುವ ಯಾವುದಾದರೂ ಯೋಜನೆ ಇದ್ದರೆ ಹೇಳಲಿ. ಆಧಾರ್, ಐಎಫ್ಡಿ ಹೂಡಿಕೆ, ನಿರ್ಮಲ್ ಭಾರತ್(ಸ್ವಚ್ಚ ಭಾರತ), ಜಿ.ಎಸ್.ಟಿ. ಯಂತಹ ಯುಪಿಎ ಸರಕಾರದ ಯೋಜನೆಗಳನ್ನು ಅಂದು ವಿರೋಧಿಸಿ ಇಂದು ಕಾರ್ಯಗತಗೊಳಿಸಿದೆ. ಬಿಜೆಪಿಯ ಈ ನಿರ್ಧಾರದಿಂದ ದೇಶದ ಅಭಿವೃದ್ಧಿ ಕುಂಠಿತಗೊಳ್ಳಲು ಬಿಜೆಪಿ ಕಾರಣಕರ್ತವಾಗಿದೆ. ಇದನ್ನು ಬಿಜೆಪಿ ಸಾಧನೆ ಎನ್ನಬೇಕೇ? ಬಿಜೆಪಿ ಜನತೆಗೆ ನೀಡಿದ ಭರವಸೆಗಳಾದ ಭಯೋತ್ಪಾನೆ ನಿಗ್ರಹ, ಸ್ವಿಸ್ ಬ್ಯಾಂಕ್ನಿಂದ ಕಪ್ಪುಹಣ, ರಾಮಮಂದಿರ, ಸಮಾನ ನಾಗರೀಕ ಸಂಹಿತೆ, ಬಡತನ ಹಾಗೂ ಭ್ರಷ್ಟಾಚಾರ ನಿರ್ಮೂಲನ ಮಾಡಲು ಸಂಪೂರ್ಣ ವಿಫಲವಾಗಿದೆ. ಬದಲಾಗಿ ಅಸಮಾನತೆ, ಆರ್ಥಿಕ ಸಂಕಷ್ಟ ಮೊದಲಾದ ಸಮಸ್ಯೆಗಳನ್ನು ದೇಶದಲ್ಲಿ ಹುಟ್ಟುಹಾಕಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಆರೋಪಿಸಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು ಈ ಬಾರಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಅನೇಕ ಪ್ರಗತಿಪರ ಭರವಸೆಗಳನ್ನು ನೀಡಿದೆ. ಬಡತನ ನಿರ್ಮೂಲನಕ್ಕಾಗಿ ಬಡವರಿಗೆ ವಾರ್ಷಿಕ 72,000 ಕನಿಷ್ಠ ಆದಾಯ ಖಾತ್ರಿ ಯೋಜನೆ. ಉದ್ಯೋಗ ಸೃಷ್ಟಿಗಾಗಿ ಔದ್ಯೋಗಿಕ ಕ್ರಾಂತಿ, ಕೃಷಿ ಮತ್ತು ಕೃಷಿ ಕಾರ್ಮಿಕರ ಕಲ್ಯಾಣಕ್ಕಾಗಿ ವಿವಿಧ ಕಾರ್ಯಕ್ರಮಗಳು ಸಾರ್ವತ್ರಿಕ ಆರೋಗ್ಯಸೇವೆ, ಜನತೆಗೆ ಹೊರೆಯಾಗುತ್ತಿರುವ ಜಿ.ಎಸ್.ಟಿ.ಯನ್ನು ಏಕರೂಪ ತೆರಿಗೆಯಾಗಿ ಸರಳೀಕರಣ, ಪ್ರತೀ ಮಗುವಿಗೂ ಗುಣಮಟ್ಟದ ಶಿಕ್ಷಣ, ಮಹಿಳೆಯರಿಗೆ ಶೇ. 33 ಮೀಸಲು, ಸಾಂವಿಧಾನಿಕ ಸಂಸ್ಥೆಗಳ ರಕ್ಷಣೆ ಸೇರಿದಂತೆ ಅನೇಕ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ.
ನೋಟು ರದ್ದತಿ ಮೂಲಕ ಮೋದಿ ಸರಕಾರ ಬಡವರನ್ನು ಶೋಷಿಸುವ, ಹಿಂಸಿಸುವ ಕೆಲಸ ಮಾಡಿದೆ. ಜಿ.ಎಸ್.ಟಿ. ಕಾರ್ಯಗತಗೊಳಿಸಿ ಐದು ರೀತಿಯ ವಿವಿಧ ತೆರಿಗೆಗಳನ್ನು ವಿಧಿಸಲಾಯಿತು. ಒಂದೆಡೆ ಪೆಟ್ರೋಲ್ ಡೀಸೆಲ್ ದರ ಏರಿಕೆಯಾಗುತ್ತಿದೆ ಮತ್ತೊಂದೆಡೆ ಆರ್ಥಿಕ ಪರಿಸ್ಥಿತಿ ಅಧೋಗತಿಗಿಳಿಸುತ್ತಿದೆ. ಬಡವರು ಹಾಗೂ ದುಡಿಯುವ ವರ್ಗದ ಪರವಾಗಿ ಮೋದಿ ಸರಕಾರ ಯಾವುದೇ ಕಾರ್ಯಕ್ರಮಗಳನ್ನು ರೂಪಿಸಿಲ್ಲ. ಅವರ ಎಲ್ಲಾ ಯೋಜನೆಗಳು ಶ್ರೀಮಂತರು, ಉದ್ಯಮಿಗಳ ಕೇಂದ್ರೀಕೃತವಾಗಿದ್ದವು. ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ಭಯೋತ್ಪಾಧನೆ ಹೆಚ್ಚಳದೊಂದಿಗೆ ಸಾಂವಿಧಾನಿಕ ವ್ಯವಸ್ಥೆಯನ್ನು ದುರ್ಬಲಗೊಳಿಸಲಾಗಿದೆ. ರಾಜ್ಯಗಳು ಹಾಗೂ ಸರಕಾರದ ನಡುವಿನ ಸಂಬಂಧ ಶಿಥಿಲವಾಗಿದೆ.
ಕಳೆದ ಐದು ವರ್ಷಗಳ ಆಡಳಿತಾವಧಿಯಲ್ಲಿ ಬಿಜೆಪಿ ಒಂದೇ ಒಂದು ಗುರುತರ ಸಾಧನೆಯನ್ನು ಮಾಡದೆ ಸುಳ್ಳು ಅಂಕಿ ಅಂಶಗಳನ್ನು ಜನರ ಮುಂದಿಟ್ಟು ಪ್ರಚಾರ ನಡೆಸುತ್ತಿದೆ. ಸಮಾಜಿಕ ಬದಲಾವಣೆ ತರುವಂತಹ ಯಾವುದೇ ಕಾನೂನನ್ನು ಜಾರಿಗೆ ತರಲು ಬಿಜೆಪಿಗೆ ಸಾಧ್ಯವಾಗಿಲ್ಲ. ಜಿ.ಎಸ್.ಟಿ. ಯು.ಪಿ.ಎ. ಸರಕಾರದ ಕೂಸು. ಮಾಹಿತಿ ಹಕ್ಕು ಕಾಯ್ದೆ, ಬುಡಕಟ್ಟು ಜನಾಂಗಗಳಿಗೆ ಅಧಿಕಾರ ಕಲ್ಪಸಿದ್ದು, ಆಧಾರ್, ಲೋಕಪಾಲ್ ಮಸೂದೆಯೂ ಯು.ಪಿ.ಎ. ಸರಕಾರದ ಅವಧಿಯಲ್ಲಿ ಜಾರಿಗೆ ಬಂದಿರುವುದು.
ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಇದೇ ಜಿ.ಎಸ್.ಟಿ. ಹಾಗೂ ಆಧಾರನ್ನು ವಿರೋದಿಸಿ ದೇಶದ ಅಭಿವೃದ್ಧಿಯ ಹಿನ್ನಡೆಗೆ ಕಾರಣರಾಗಿದ್ದರು. ಕಳೆದ ಐದು ವರ್ಷಗಳಲ್ಲಿ ಸಾಧನೆ ಆದಾರದ ಮೇಲೆ ಮತ ಕೇಳಲು ಸಾಧ್ಯವಿಲ್ಲದೆ ನರೇಂದ್ರ ಮೋದಿಯವರು ಭಾವನೆಯ ಮೇಲೆ ಮತ ಯಾಚಿಸುತ್ತಿದ್ದಾರೆ. ಸಾಮಾನ್ಯ ಜನರ ಪರವಾಗಿ ಯಾವ ಬದ್ದತೆಯೂ ಮೋದಿ ಆಡಳಿತದಲ್ಲಿ ಕಂಡು ಬರುವುದಿಲ್ಲ. ಸೋಲಿನ ಭಿತಿಯಲ್ಲಿರುವ ಬಿಜೆಪಿ ಭಾವನಾನ್ಮಕ ವಿಷಯಗಳನ್ನು ಮುನ್ನಲೆಗೆ ತಂದು ಮತ ಯಾಚಿಸುತ್ತಿದೆ ರಾಮ ಮಂದಿರ, ಶಬರಿ ಮಲೆ ಮಹಿಳೆ ಪ್ರವೇಶ ವಿಚಾರ, ಕಾಶ್ಮೀರದ 370(ಜೆ) ವಿಧಿ ರದ್ದು ಸಹಿತ ಸೈನಿಕರ ರಕ್ಷಣೆ ಹೀಗೆ ಅನೇಕ ಭಾವನಾತ್ಮಕ ವಿಚಾರಗಳು ಬಿಜೆಪಿ ಪ್ರಣಾಳಿಕೆಯಲ್ಲಿ ಸೇರಿದೆ. ದೇಶದ ಅಭಿವೃದ್ಧಿಗೆ ಮತ ನೀಡಿ ಎಂದು ಕೇಳುವ ಬದಲು ರಾಮ ಮಂದಿರ ಹಾಗೂ ಹುತಾತ್ಮರ ಹೆಸರಲ್ಲಿ ಹಾಗೂ ಧರ್ಮದ ಹೆಸರಲ್ಲಿ ಮತ ಯಾಚಿಸುತ್ತಿದೆ. ದಿನ ಬೆಳಗಾದರೆ ಕರ್ನಾಟಕದ ಮೈತ್ರಿ ಸರಕಾರ ಪತನವಾಗುತ್ತಿದೆ ಎಂದು ಜನತೆಯ ಹಾದಿ ತಪ್ಪಿಸುವ ಷಡ್ಯಂತ್ರವನ್ನು ರೂಪಿಸುತ್ತಿದೆ. ಈ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸುವ ಮೂಲಕ ಮಗದೊಮ್ಮೆ ಪ್ರಧಾನಿಯಾಗುವ ಮೋದಿಯ ಕನಸು ಭಗ್ನವಾಗಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.