ಓ.. ‘ಕನ್ನಡ’ ಇಲ್ಲಿ ಬಾ ಮಗಳೇ..! ಒಂದನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾಳೆ ಈ ‘ಕನ್ನಡ’!
ಕುಂದಾಪುರ: ಕನ್ನಡ ರೋಮಾಂಚನ ಈ ಕನ್ನಡ..ಕಸ್ತೂರಿ ನುಡಿಯಿದು..ಕರುನಾಡ ಮಣ್ಣಿದು..ಚಿಂತಿಸು..ಪೂಜಿಸು.. ಈ ಕನ್ನಡ ಮಣ್ಣನು ಮರಿಬೇಡ ಓ ಅಭಿಮಾನಿ.. ಹಂಸಲೇಖ ಸಾಹಿತ್ಯದ ಈ ಹಾಡು ಕೇಳಿದರೆ ಕನ್ನಡಿಗರ ಮನ ಕುಣಿದಾಡುತ್ತದೆ. ಕನ್ನಡ ಎಂದ ತಕ್ಷಣ ಮೂಗು ಮುರಿಯುವವರೆ ಹೆಚ್ಚು ಮಂದಿಯಿರುವ ಈ ಕಾಲಘಟ್ಟದಲ್ಲಿ ಇಲ್ಲೊಬ್ಬರು ತನ್ನ ಮಗಳಿಗೆ “ಕನ್ನಡ” ಎಂದು ವಿಶಿಷ್ಟ ರೀತಿಯಲ್ಲಿ ಹೆಸರಿಟ್ಟು ಕನ್ನಡಾಭಿಮಾನವನ್ನು ಮೆರೆದಿದ್ದಾರೆ.
ಮೂಲತಃ ಕುಂದಾಪುರ ತಾಲೂಕಿನ ನೆಂಪು ನಿವಾಸಿ ಪ್ರತಾಪ್ ಶೆಟ್ಟಿ ಹಾಗೂ ಪ್ರತಿಮಾ ದಂಪತಿಯ ಮುದ್ದಾದ ಮಗುವಿಗೆ ಅಪರೂಪದ ‘ಕನ್ನಡ’ ಎಂದು ಹೆಸರಿಟ್ಟಿದ್ದಾರೆ. ಮಗು ಹುಟ್ಟಿದ ಕೂಡಲೇ ಗೂಗಲ್ ಹಾಗೂ ಜಾಲತಾಣಗಳಲ್ಲಿ ವಿಶಿಷ್ಟ, ವಿಭಿನ್ನ ಹೆಸರುಗಳನ್ನು ಹುಡುಕಾಡುವ ಪೋಷಕರ ಮಧ್ಯೆ ನೆಂಪುವಿನ ಪ್ರತಾಪ್ ಶೆಟ್ಟಿ ಹಾಗೂ ಪ್ರತಿಮಾ ದಂಪತಿ ಒಂದು ಹೆಜ್ಜೆ ಮುಂದಿದ್ದಾರೆ.
ಪ್ರಸ್ತುತ ಬೆಂಗಳೂರಿನ ಬನ್ನೇರುಘಟ್ಟದಲ್ಲಿ ನೆಲೆಸಿರುವ ಪ್ರತಾಪ್ ಶೆಟ್ಟಿ, ಒಳಾಂಗಣ ವಿನ್ಯಾಸ ಗುತ್ತಿಗೆ ವೃತ್ತಿಯಲ್ಲಿ ದುಡಿಯುತ್ತಿದ್ದಾರೆ. ಪ್ರತಾಪ್ ಕೆಲಸದ ನಿಮಿತ್ತ ತಮಿಳುನಾಡಿಗೆ ತೆರಳಿದಾಗ ಅಲ್ಲಿ ಹಲವಾರು ಮಂದಿಯ ಹೆಸರುಗಳು ತಮಿಳು ಹೆಸರಲ್ಲಿರುವುದು ಗಮನಿಸಿದ್ದಾರೆ. ತಮಿಳರಸನ್, ತಮಿಳುದೊರೈ ಮುಂತಾದ ಹೆಸರುಗಳನ್ನು ಕೇಳಿದ ಪ್ರತಾಪ್ ತಮ್ಮ ಮಗುವಿಗೂ ಇದೇ ರೀತಿಯಾಗಿ ಭಾಷರೆಯ ಹೆಸರಿಡಬೇಕು ಎಂದು ಯೋಚಿಸಿದ್ದಾರೆ. ಹೀಗಾಗಿಯೇ ತನ್ನ ಮಗಳಿಗೆ ಕನ್ನಡ ಎಂದು ನಾಮಕರಣ ಮಾಡಿದ್ದಾರೆ. ಮಗಳನ್ನು ಕರೆಯುವಾಗೆಲ್ಲಾ ಪ್ರೀತಿಯಿಂದ ಓ..ಕನ್ನಡ ಇಲ್ಲಿ ಬಾ ಮಗಳೇ..! ಎನ್ನುತ್ತಾರೆ ಈ ದಂಪತಿ.
ಬಿಬಿಎಂಪಿಯಲ್ಲಿ ನೋಂದಣಿ:
ನವೆಂಬರ್ ತಿಂಗಳಲ್ಲಿ ರಾಜ್ಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗಳು ಜೋರಾಗಿಯೇ ಇರಲಿವೆ. ಪ್ರತಾಪ್ ಶೆಟ್ಟಿಯವರ ಮಗಳು 2019ರ ನವೆಂಬರ್ ತಿಂಗಳ 27ರಂದು ಬೆಂಗಳೂರಿನ ರಂಗದೋರ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಜನಿಸಿದ್ದು, ಇದೀಗ ಒಂದನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾಳೆ. “ಮಗಳಿಗೆ ಕನ್ನಡ ಹೆಸರಿನಲ್ಲಿ ಜನನ ಪ್ರಮಾಣ ಪತ್ರವನ್ನು ನೋಂದಾಯಿಸಿಕೊಂಡಿದ್ದೇನೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜನನ ಪ್ರಮಾಣ ಪತ್ರವನ್ನು ನೋಂದಣಿ ಮಾಡಿದೆ” ಎಂದು ಪ್ರತಾಪ್ ಶೆಟ್ಟಿ ತಿಳಿಸಿದ್ದಾರೆ.
ಕನ್ನಡಾಭಿಮಾನ ಮರೆಯಾಗುತ್ತಿದೆ. ಕನ್ನಡದ ನೆಲದಲ್ಲಿ ಕನ್ನಡಿಗರನ್ನು ಹುಡುಕಬೇಕಾದ ಸ್ಥಿತಿ ಇದೆ. ಕನ್ನಡವೆಂದರೆ ನನಗೆ ಅಭಿಮಾನ. ನನ್ನ ಮಾತೃಭಾಷೆ ಎಂಬ ಹೆಮ್ಮೆ. ಕನ್ನಡ ಮಾತಾಡುವುದನ್ನು ಕೇಳುವುದೇ ಕಿವಿಗೆ ಇಂಪು. ನನ್ನ ಮಗಳ ಮೂಲಕ ಸದಾ ಕನ್ನಡವನ್ನು ನೆನಪಿಸುವ ಉದ್ದೇಶವೂ ಈ ಹೆಸರಿನ ಹಿಂದಿದೆ ಎನ್ನುತ್ತಾರೆ ಮಗುವಿನ ತಂದೆ ಪ್ರತಾಪ್ ಶೆಟ್ಟಿ