ಕಂಬಳ ಕ್ರೀಡೆಗೆ ಜಾತಿ – ಧರ್ಮದ ಬೇಲಿ ಇಲ್ಲ; ಇದು ಸರ್ವರ ಸಂಭ್ರಮ: ಸಿ.ಎಂ.ಸಿದ್ದರಾಮಯ್ಯ

Spread the love

ಕಂಬಳ ಕ್ರೀಡೆಗೆ ಜಾತಿ – ಧರ್ಮದ ಬೇಲಿ ಇಲ್ಲ; ಇದು ಸರ್ವರ ಸಂಭ್ರಮ: ಸಿ.ಎಂ.ಸಿದ್ದರಾಮಯ್ಯ

ಮಂಗಳೂರು: ‘ಕಂಬಳ ಕ್ರೀಡೆ ಮತ್ತು ಕಲೆಗೆ ಜಾತಿ-ಧರ್ಮದ ಬೇಲಿ ಇಲ್ಲ. ಇದು ಸರ್ವರ ಸಂಭ್ರಮ. ನಮ್ಮ ದೇಶ ಬಹುತ್ವದ ದೇಶ ’ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಉಳ್ಳಾಲ ನರಿಂಗಾನದ ಮೂರನೇ ವರ್ಷದ ಲವ-ಕುಶ ಜೋಡುಕೆರೆ ಕಂಬಳೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜನಪದ ಕ್ರೀಡೆ ಕಂಬಳ ಸರ್ವ ಜಾತಿ ಧರ್ಮದ ಜನಸಮುದಾಯವನ್ನು ಬೆಸೆಯುವಂತೆ ಮಾಡುತ್ತಿದೆ. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಭಾರತ ಸಂಸ್ಕೃತಿಯ ಒಂದು ಭಾಗ ಕರಾವಳಿ ಜಿಲ್ಲೆಗಳ ಸಂಸ್ಕೃತಿಯಾಗಿದೆ. ನಮ್ಮ ಸರಕಾರ ಕೂಡ ಎಲ್ಲಾ ಜಾತಿ, ಎಲ್ಲಾ ಧರ್ಮದ ಪರವಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಮಹಿಳೆಯರಿಗೆ ಆರ್ಥಿಕ ಶಕ್ತಿ ಕೊಡುವ ಮೂಲಕ ಕುಟುಂಬಗಳ ಮತ್ತು ಮಹಿಳಾ ಸಮಾಜದ ಆರ್ಥಿಕ ಶಕ್ತಿಯನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ಇಡೀ ದೇಶದಲ್ಲಿ ಮೊದಲಿಗೆ ಕೊಟ್ಟಿದ್ದು ನಮ್ಮ ಸರಕಾರ. ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಿ ಅವರು ಪ್ರತಿಭಟನೆ ಹಿಂತೆಗೆದುಕೊಳ್ಳುವಂತೆ ಮಾಡಿದ್ದು ನಮ್ಮ ಸರಕಾರ. ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ 10 ಸಾವಿರ ರೂ. ಸಿಗುವಂತೆ ಮಾಡುವ ಜವಾಬ್ದಾರಿಯನ್ನು ರಾಜ್ಯ ಸರಕಾರ ವಹಿಸಿಕೊಂಡಿದೆ ಎಂದರು.

ಸುಪ್ರೀಂಕೋರ್ಟ್ ನಿಷೇಧಿಸಿದ್ದ ಕಂಬಳ ಕ್ರೀಡೆಗೆ ಮರು ಚಾಲನೆ ಸಿಗುವಂತೆ ಮಾಡಿದ್ದು ನಮ್ಮ ಸರಕಾರ. ಸುಪ್ರೀಂ ಕೋರ್ಟ್ ನಿಷೇಧವನ್ನು ತೆರವುಗೊಳಿಸಲು ಸರ್ಕಾರ ಶ್ರಮಿಸಿತು. ಇದು ಕರಾವಳಿಯ ಜನಪದ ಸಂಸ್ಕೃತಿಗೆ ನಮ್ಮ ಸರಕಾರ ಕೊಟ್ಟ ಕೊಡುಗೆ ’ಎಂದರು.

‘ತಮ್ಮ ಮನೆ ಮಕ್ಕಳಂತೆ ಕೋಣಗಳನ್ನು ಸಾಕುತ್ತಾರೆ. ಕಂಬಳ ಕ್ರೀಡೆ ಜಿಲ್ಲೆಯ ಜನಪದ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಹೀಗಾಗಿ ಈ ಸಾಂಪ್ರದಾಯಿಕ ಕ್ರೀಡೆಯನ್ನು ಉಳಿಸಲು ನಾನು ಮುಂದಾದೆ’ ಎಂದು ಸಿಎಂ ಹೇಳಿದರು.

24 ಕಂಬಳಗಳನ್ನು ನಡೆಸಲು ಪ್ರತೀ ಕಂಬಳಕ್ಕೆ ತಲಾ 5 ಲಕ್ಷ ರೂ. ನೆರವನ್ನು ನಮ್ಮ ಸರಕಾರ ನೀಡಿದೆ.

ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಚಿವ ರಹೀಂ ಖಾನ್ ಸೇರಿ ಹಲವು ಪ್ರಮುಖರು, ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

ತುಳು ಎರಡನೇ ಭಾಷೆ: ಸರಕಾರ ಪರಿಗಣಿಸುತ್ತದೆ

ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರ ಬೇಡಿಕೆಯಂತೆ ತುಳು ಭಾಷೆಯನ್ನು ಎರಡನೇ ರಾಜ್ಯ ಭಾಷೆಯನ್ನಾಗಿ ಪರಿಗಣಿಸುವ ಬಗ್ಗೆ ಗಂಭೀರವಾಗಿ ಚಿಂತಿಸಲಾಗುವುದು ಎಂದರು.

ರಾಜಕಾರಣದಲ್ಲಿ ಯಾವುದೂ ಶಾಶ್ವತ ಅಲ್ಲ

ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಯು.ಟಿ.ಖಾದರ್ ಅವರು ಸ್ಪೀಕರ್ ಆಗುವ ಮೂಲಕ ಪ್ರೋಟೋಕಾಲ್ ಪ್ರಕಾರ ನನಗಿಂತ ಎತ್ತರದಲ್ಲಿದ್ದಾರೆ. ಮುಂದೆ ಇದಕ್ಕಿಂತ ಒಳ್ಳೆಯ ಅವಕಾಶಗಳು ಸಿಗಬಹುದು. ರಾಜಕಾರಣದಲ್ಲಿ ಯಾವುದೂ ಶಾಶ್ವತ ಅಲ್ಲ ಎಂದರು.

ಯು.ಟಿ.ಖಾದರ್ ಅವರು ಸ್ಪೀಕರ್ ಆದ ಬಳಿಕ ತಮ್ಮ ಕ್ಷೇತ್ರದ ಅಭಿವೃದ್ಧಿಗೆ 1,000 ಕೋಟಿ ರೂ.ಗಳಷ್ಟು ಅನುದಾನ ತಂದಿದ್ದಾರೆ. ಕ್ಷೇತ್ರದ ಬಗ್ಗೆ ಅಷ್ಟೊಂದು ಪ್ರೀತಿ ಇದೆ ಖಾದರ್ ಅವರಿಗೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.


Spread the love
Subscribe
Notify of

0 Comments
Inline Feedbacks
View all comments