ಕಟೀಲಿನ ಬಿಜೆಪಿ ನಾಯಕನ ಹತ್ಯೆಗೆ ಸಂಚು; ಮೂವರ ಬಂಧನ
ಮಂಗಳೂರು: ಕಟೀಲಿನ ಬಿಜೆಪಿ ನಾಯಕನ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಪಟ್ಟಂತೆ ರೌಡಿ ನಿಗ್ರಹ ದಳದ ಪೊಲೀಸರು ಕಿನ್ನಿಗೋಳಿಯ ಗ್ಯಾಂಗ್‌ನ ಮೂವರನ್ನು ಬಂಧಿಸಿದ್ದಾರೆ. ಉಳಿದ ಮೂವರು ಪರಾರಿಯಾಗಿದ್ದಾರೆ.
ಬಂಧಿತರನ್ನು ಉಳಾಯಿಬೆಟ್ಟುವಿನ ಪ್ರದೀಪ ಪೂಜಾರಿ, ಬಂಟ್ವಾಳ ಕನ್ಯಾದ ದಿನೇಶ್ ಬೆಲ್ಚಡ, ಮುಲ್ಕಿಯ ಕಿಲ್ಪಾಡಿಯ ಶಿವಪ್ರಸಾದ ಎಂದು ಗುರುತಿಸಲಾಗಿದೆ.
ಕಿನ್ನಿಗೋಳಿ ಬಳಿ ಗಾಂಜಾ ಗುಂಪಿನ ಸದಸ್ಯರಾಗಿರುವ ಈ ಆರು ಮಂದಿ ಕಿನ್ನಿಗೋಳಿ ಸಮೀಪದ ಬಟ್ಟಕೋಡಿ ಶಿಬರೂರು ಬಳಿಯ ಕೊಡಮಣಿತ್ತಾಯ ದ್ವಾರದ ಬಳಿಯಲ್ಲಿ ಟಾಟಾ ಇಂಡಿಕಾ ಕಾರಿನಲ್ಲಿ ಮಾರಕಾಯುಧಗಳನ್ನು ಇಟ್ಟುಕೊಂಡು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದರು. ಮಾಹಿತಿ ಪ್ರಕಾರ ಪೊಲೀಸ್ ಅಧಿಕಾರಿ ನವೀನ್ ಚಂದ್ರ ಜೋಗಿ ನೇತೃತ್ವದಲ್ಲಿ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ತಲವಾರು, ಮೆಣಸಿನಹುಡಿ, ಮೊಬೈಲ್ ಹಾಗೂ ಹತ್ಯೆ ಮಾಡಲು ಬಳಸಲ್ಪಡುವ ತಲವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ತೀವ್ರ ತನಿಖೆಗೆ ಒಳಪಡಿಸಿದಾಗ ಕಟೀಲಿನ ಬಿಜೆಪಿ ನಾಯಕನನ್ನು ಮುಲ್ಕಿಯ ಬಪ್ಪನಾಡು ಬ್ರಹ್ಮಕಲಶೋತ್ಸವದ ದಿನದಂದು ಹತ್ಯೆಗೆ ಸಂಚು ರೂಪಿಸಿದ್ದರು ಎಂಬ ಮಾಹಿತಿ ಹೊರಬಂದಿದೆ.