ಕಟೀಲು ದೇವಸ್ಥಾನದ ಅರ್ಚಕರ ಮನೆ ದರೋಡೆ ಆರೋಪಿಯ ಬಂಧನ
ಮಂಗಳೂರು: ಕಟೀಲು ದೇವಸ್ಥಾನದ ಅರ್ಚಕ ಶ್ರೀ ವಾಸುದೇವ ಅಸ್ರಣ್ಣರವರ ಮನೆಯಲ್ಲಿ ನಡೆದ ಡಕಾಯತಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡ ಆರೋಪಿಯನ್ನು ಬಂಧಿಸುವಲ್ಲಿ ಮಂಗಳೂರು ದಕ್ಷಿಣ ಸಹಾಯಕ ಪೊಲೀಸ್ ಆಯುಕ್ತರಾದ ಟಿ.ಕೋದಂಡರಾಮ್ ಅವರ ನೇತ್ರತ್ವದ ಮಂಗಳೂರು ದಕ್ಷಿಣ ರೌಡಿ ನಿಗ್ರಹ ದಳ ಯಶಸ್ವಿಯಾಗಿದೆ.
ಬಂಧಿತ ಆರೋಪಿಯನ್ನು ಉಳ್ಳಾಲ ಸೊಮೇಶ್ವರ ನಿವಾಸಿ ಚಂದ್ರಹಾಸ @ ಸೋಮೇಶ್ವರ ಚಂದ್ರ (42) ಎಂದು ಗುರುತಿಸಲಾಗಿದೆ.
ಅಕ್ಟೋಬರ್ 4ರಂದು ಮಧ್ಯರಾತ್ರಿಯ ಸಮಯ ಗಿಡಿಗೆರೆಯಲ್ಲಿನ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಅಸ್ರಣ್ಣರ ಮನೆಗೆ ನುಗ್ಗಿದ್ದ ಸುಮಾರು ಎಂಟು ಮಂದಿ ದರೋಡೆಕೋರರ ತಂಡ ತಲವಾರು, ಬಂದೂಕು, ರಾಡ್ ತೋರಿಸಿ ಮನೆಮಂದಿಯನ್ನು ಬೆದರಿಸಿದ್ದಲ್ಲದೆ 82 ಪವನ್ ಚಿನ್ನಾಭರಣ, 50 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದರು.
ಪ್ರಕರಣದಲ್ಲಿ ಆರೋಪಿ ಚಂದ್ರ ಪೊಲೀಸರಿಗೆ ತಲೆಮರೆಸಿಕೊಂಡಿದ್ದು ಊರಿಗೆ ಬಂದ ಬಗ್ಗೆ ಮಾಹಿತಿ ಬಂದ ಮೇರೆಗೆ ವಶಕ್ಕೆ ಪಡೆಯಲಾಗಿದೆ.
ಮುಂಬಯಿಯಲ್ಲಿ ಹೋಟೇಲಿನ ಮಾಲಿಕನಾಗಿದ್ದು, ಆರೋಪಿಯ ವಿರುದ್ದ ಮುಂಬಾಯಿಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದ್ದು ಸದ್ರಿ ಪ್ರಕರಣದಲ್ಲಿ ಆರೋಪಿಯು ಸುಮಾರು 7 ವರ್ಷಗಳ ಕಾಲ ಶಿಕ್ಷೆಯಾಗಿರುತ್ತದೆ. ಮಂಗಳೂರು ನಗರದಲ್ಲಿ ಉಳ್ಳಾಲ, ಕಾವೂರು ಬರ್ಕೆ, ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿರುತ್ತದೆ. ಆರೋಪಿಯನ್ನು ಮುಂದಿನ ಕ್ರಮದ ಬಗ್ಗೆ ಬಜ್ಪೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.