ಕನ್ನಡ ಕರುನಾಡಿಗರ ಹೃದಯದ ಭಾಷೆ : ಡಾ. ಹೊಸಮನಿ

Spread the love

ಕನ್ನಡ ಕರುನಾಡಿಗರ ಹೃದಯದ ಭಾಷೆ : ಡಾ. ಹೊಸಮನಿ

ಮಂಗಳೂರು: ಕರ್ನಾಟಕದಲ್ಲಿ ಇರುವಷ್ಟು ವಿವಿಧ ಭಾಷೆಗಳು ಭಾರತದ ಬೇರೆ ಯಾವ ರಾಜ್ಯದಲ್ಲಿ ಇರಲಾರವು, ರಾಜ್ಯದ ಒಳಗಿನ ಭಾಷೆಗಳಾದ ತುಳು, ಕೊಂಕಣಿ ಮತ್ತು ಬ್ಯಾರಿ ಮುಂತಾದ ಭಾಷಿಗರು ಕನ್ನಡವನ್ನು ಒಪ್ಪಿಕೊಂಡು ಅಪ್ಪಿಕೊಂಡಿರುವಂತೆ ಹೊರರಾಜ್ಯದಿಂದ ಬಂದು ಕರ್ನಾಟಕದಲ್ಲಿ ನೆಲೆಸಿರುವ ಅನ್ಯ ಭಾಷಿಗರು ಕನ್ನಡತನವನ್ನು ಮೈಗೂಡಿಸಿಕೊಳ್ಳಬೇಕು ಎಂದು, ಕನ್ನಡ ಚಿಂತನ ಮಾಲಿಕೆಯ ಎರಡನೇ ಕಾರ್ಯಕ್ರಮವನ್ನು ಮಂಗಳೂರಿನ ಮಹಿಳಾ ಐಟಿಐ ಸಭಾಂಗಣದಲ್ಲಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿದ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ. ಸತೀಶ್ ಕುಮಾರ್ ಹೊಸಮನಿ ಅವರು ನುಡಿದರು.

chida_by

ಕನ್ನಡ ಚಿಂತನ ಕಾರ್ಯಕ್ರಮವು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಯೋಜನೆಯಾಗಿದ್ದು ಕರುನಾಡಿಗರ ಮಾತೃ ಭಾಷೆಯಾದ ಕನ್ನಡವನ್ನು ನಿರಂತರ ನವಿರಾಗಿರಿಸುವ ಪೂರಕ ಪ್ರಕ್ರಿಯೆಯಾಗಿದೆ ಎಂದು ಹೃದಯವಾಹಿನಿ – ಕರ್ನಾಟಕದ ಅಧ್ಯಕ್ಷ ಕೆ.ಪಿ ಮಂಜುನಾಥ್ ಸಾಗರ್ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಅಭಿಪ್ರಾಯ ಪಟ್ಟರು.

ಮುಖ್ಯ ಅತಿಥಿ ಹಾಗೂ ದ.ಕ ಜಿಲ್ಲಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಅವರು ಮಾತನಾಡಿ ಮಾತೃ ಭಾಷೆಯ ಶಿಕ್ಷಣ ಉನ್ನತ ವ್ಯಕ್ತಿತ್ವ ರೂಪಿಸುವಲ್ಲಿ ಮಹತ್ತರ ಪಾತ್ರವಹಿಸುತ್ತದೆ. ಕನ್ನಡ ಮಾಧ್ಯಮ ಶಿಕ್ಷಣ ಪಡೆದವರೂ ಸಹ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಮಂಜುನಾಥ್ ಎಜುಕೇಷನ್ ಟ್ರಸ್ಟ್ ಸಂಯುಕ್ತವಾಗಿ ಆಯೋಜಿಸಿದ್ದ ಕನ್ನಡ ಚಿಂತನ ಮಾಲಿಕೆ 2 ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ವಕ್ವ್ ಬೋರ್ಡಿನ ಮಾಜಿ ಉಪಾಧ್ಯಕ್ಷ ಡಾ. ಹಾಜಿ ಕೆ.ಎ ಮುನೀರ್ ಬಾವ ವಹಿಸಿದ್ದರು ಹಾಗೂ ಮಹಿಳಾ ಐಟಿಐ ಪ್ರಾಂಶುಪಾಲರಾದ ಎ ಬಾಲಕೃಷ್ಣ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಂಗಳೂರಿನ ಹಿರಿಯ ಪತ್ರಕರ್ತರಾದ ಶ್ರೀ ಚಿದಂಬರ ಬೈಕಂಪಾಡಿ ಮತ್ತು ಸಮಾಜಸೇವಕ ಮತ್ತು ರೈತ ಮುಖಂಡ ಚಿಕ್ಕೋಡಿಯ ಶ್ರೀ ಮಾರುತಿ ಸೆಗುಣ್ಸೆ ಅವರಿಗೆ ಗೌರವ ಪುರಸ್ಕಾರ ನೀಡಲಾಯಿತು. ಗೌರವಕ್ಕೆ ಸ್ಪಂದಿಸಿ ಮಾತನಾಡಿದ ಶ್ರೀ ಚಿದಂಬರ ಬೈಕಂಪಾಡಿ “ನನಗೆ ಪತ್ನಿಕೋದ್ಯಮ ಉತ್ತಮ ಅನುಭವಗಳನ್ನು ನೀಡುವುದರೊಂದಿಗೆ ಗೌರವ ಸ್ಥಾನ ಮಾನಗಳನ್ನು ಕೊಟ್ಟಿದೆ, ಪತ್ರಿಕೋದ್ಯಮ ಕ್ಷೇತ್ರಕ್ಕೆ ನಾನು ಸದಾ ಋಣಿಯಾಗಿದ್ದೇನೆ” ಎಂದರು. ಖ್ಯಾತ ಜನಪದ ಗಾಯಕ ಗೊ.ನಾ ಸ್ವಾಮಿ ಮತ್ತು ತಂಡದಿಂದ ಗೀತಾಗಾಯನ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮವನ್ನು ತರಬೇತಿ ಅಧಿಕಾರಿಗಳಾದ  ಶಿವಕುಮಾರ್ ನಿರೂಪಿಸಿದರು ಮತ್ತು ಲೋಕೇಶ್ ಧನ್ಯವಾದವನ್ನಿತ್ತರು.


Spread the love