ಕನ್ನಡ ಕಲಿಸದ ಸಿಬಿಎಸ್‍ಇ ಶಾಲೆಗಳಿಗೆ ನೋಟೀಸ್ – ಅಪರ ಜಿಲ್ಲಾಧಿಕಾರಿ ರೂಪಾ

Spread the love

ಕನ್ನಡ ಕಲಿಸದ ಸಿಬಿಎಸ್‍ಇ ಶಾಲೆಗಳಿಗೆ ನೋಟೀಸ್ – ಅಪರ ಜಿಲ್ಲಾಧಿಕಾರಿ ರೂಪಾ

ಮಂಗಳೂರು : ಕನ್ನಡ ಭಾಷೆ ಕಲಿಸದ ಅಥವಾ ದ್ವಿತೀಯ ಭಾಷೆಯಾಗಿ ಕನ್ನಡ ಕಲಿಸದ ಸಿಬಿಎಸ್‍ಇ ಸಿಲಬಸ್ ಹೊಂದಿರುವ ಶಾಲೆಗಳಿಗೆ ನೋಟೀಸ್ ಜಾರಿ ಮಾಡಲು ಅಪರ ಜಿಲ್ಲಾಧಿಕಾರಿ ರೂಪಾ ಸೂಚಿಸಿದ್ದಾರೆ.

ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಸಿಬಿಎಸ್‍ಇ ಶಿಕ್ಷಣ ವ್ಯವಸ್ಥೆಯ ಶಾಲೆಗಳಲ್ಲಿ ಕನ್ನಡವನ್ನು ದ್ವಿತೀಯ ಭಾಷೆಯನ್ನಾಗಿ ಕಡ್ಡಾಯವಾಗಿ ಕಲಿಸಬೇಕಿದೆ. ಆದರೆ, ನಗರದ ಕೆಲವು ಸಿಬಿಎಸ್‍ಇ ಶಾಲೆಗಳಲ್ಲಿ ಕನ್ನಡವನ್ನು ತೃತೀಯ ಭಾಷೆಯನ್ನಾಗಿ ಕಲಿಸುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ನಿಟ್ಟಿನಲ್ಲಿ ಇಂತಹ ಶಾಲೆಗಳಿಗೆ ಕೂಡಲೇ ನೋಟೀಸ್ ಜಾರಿ ಮಾಡುವಂತೆ ಅವರು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು. ಅಲ್ಲದೇ, ಕೂಡಲೇ ಜಿಲ್ಲೆಯ ಎಲ್ಲಾ ಸಿಬಿಎಸ್‍ಇ ಶಾಲೆಗಳಲ್ಲಿ ತಪಾಸಣೆ ನಡೆಸಿ ಪರಿಶೀಲಿಸಲು ಅವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಡಿಡಿಪಿಐ ವಾಲ್ಟರ್ ಡಿಮೆಲ್ಲೋ ಮಾತನಾಡಿ, ಸಿಬಿಎಸ್‍ಇ ಶಾಲೆಗಳಲ್ಲಿ ಕನ್ನಡ ಕಲಿಕೆ ಪರಿಶೀಲಿಸಲು ಈಗಾಗಲೇ ಇಲಾಖೆಯಲ್ಲಿ ಅಧಿಕಾರಿಗಳ ತಂಡ ರಚಿಸಲಾಗಿದ್ದು, ತಕ್ಷಣದಿಂದಲೇ ಕಾಯೋನ್ಮುಖವಾಗುಲಾಗುವುದು ಎಂದು ತಿಳಿಸಿದರು. ಕೇಂದ್ರೀಯ ವಿದ್ಯಾಲಯಗಳಲ್ಲಿ ಕನ್ನಡ ಕಲಿಸದೇ ಇರುವುದನ್ನು ಸಭೆಯ ಗಮನಕ್ಕೆ ಅವರು ತಂದರು. ಈ ಬಗ್ಗೆ ಜಿಲ್ಲಾಧಿಕಾರಿಗಳು ಕೇಂದ್ರೀಯ ವಿದ್ಯಾಲಯದ ಮುಂದಿನ ಸಭೆಯಲ್ಲಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ರೂಪಾ ತಿಳಿಸಿದರು.

ಜಿಲ್ಲೆಯ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಕನ್ನಡ ಅನುಷ್ಠಾನ ಸಮಿತಿ ರಚಿಸಿ, ಆಗಿಂದಾಗ್ಗೆ ಕಚೇರಿಯಲ್ಲಿ ಪರಿಶೀಲಿಸಬೇಕು. ಸರಕಾರಿ ವಾಹನಗಳ ನೋಂದಣಿ ಸಂಖ್ಯೆಯನ್ನು ಇಂಗ್ಲೀಷ್ ಲಿಪಿಯೊಂದಿಗೆ ಕನ್ನಡ ಲಿಪಿಯಲ್ಲಿಯೂ ನಮೂದಿಸಬೇಕು. ಕಚೇರಿಯ ಪ್ರಕಟಣೆ, ಸುತ್ತೋಲೆ ಹಾಗೂ ಕಾರ್ಯಸೂಚಿಗಳನ್ನು ಕನ್ನಡ ಭಾಷೆಯಲ್ಲಿಯೇ ಹೊರತರಬೇಕು ಎಂದು ಅಪರ ಜಿಲ್ಲಾಧಿಕಾರಿ ಸೂಚಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಮುಂದಿನ ವಾರ ಜಿಲ್ಲೆಯಲ್ಲಿ ಪ್ರಗತಿ ಪರಿಶೀಲನೆ ನಡೆಸಲಿದ್ದು, ಎಲ್ಲಾ ಇಲಾಖೆಯವರು ಈ ಬಗ್ಗೆ ಸಿದ್ಧತೆ ನಡೆಸಲು ಅವರು ಸೂಚಿಸಿದರು.

ಸಭೆಯಲ್ಲಿ ಮಂಗಳೂರು ಉಪವಿಭಾಗಾಧಿಕಾರಿ ರವಿಚಂದ್ರ ನಾಯಕ್, ನಗರಪಾಲಿಕೆ ಉಪ ಆಯುಕ್ತ ಸಂತೋಷ್ ಕುಮಾರ್, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.


Spread the love