ಕನ್ನಡ ರಾಜ್ಯೋತ್ಸವದ ವಿರುದ್ದ ತುರವೇ ಕರಾಳ ದಿನಾಚರಣೆ
ಉಡುಪಿ: ತುಳು ನಾಡು, ನುಡಿ, ನೆಲ ಜಲ ಇವುಗಳ ಉಳಿವಿಗಾಗಿ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಕನ್ನಡ ರಾಜ್ಯೋತ್ಸವದ ವಿರುದ್ದ ಕರಾಳ ದಿನವನ್ನಾಗಿ ಆಚರಿಸಲಾಯಿತು.
ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಐಕಳಬಾವ ಚಿತ್ತರಂಜನ್ ದಾಸ್ ಶೆಟ್ಟಿ ವಿದೇಶಗಳಲ್ಲಿ ತಿರಸ್ಕರಿಸಲ್ಪಟ್ಟ ವಿಷಕಾರಿ ಕಂಪೆನಿಗಳಿಗೆ ತುಳುನಾಡಿನ ಫಲವತ್ತಾದ ಕೃಷಿಭೂಮಿಯನ್ನು ನೀಡಿ ಪರಿಸರವನ್ನು ನಾಶ ಮಾಡಲಾಗುತ್ತಿದೆ. ಇಲ್ಲಿನ ಜನಪ್ರತಿನಿಧಿಗಳು, ತಮ್ಮ ಸ್ವಾರ್ಥಕ್ಕಾಗಿ ತುಳುನಾಡಿಗೆ ದ್ರೋಹ ಎಸಗುತ್ತಿದ್ದಾರೆ.
ಕರಾವಳಿಯ ಜೀವನದಿಯನ್ನು ತಿರುಗಿಸುವ ಭ್ರಷ್ಟ ಯೋಜನೆಗಳಿಂದ ಇಲ್ಲಿನ ಜಲಮೂಲಗಳೇ ಬತ್ತಿ ಹೋಗುವಂತಾಗುತ್ತಿದೆ. ನಾಡಿನ ನೆಲ, ಜಲ ಅಪಾಯದ ಅಂಚಿನತ್ತ ಸಾಗುತ್ತಿದೆ. ಮೂಲಭೂತ ಸೌಕರ್ಯ, ಉದ್ಯೋಗಾವಕಾಶಗಳನ್ನು ನೀಡದೆ ಪಕ್ಷಪಾತ ಧೋರಣೆ ಮಾಡಲಾಗುತ್ತಿದ್ದು ಒಂದು ಕೋಟಿಗಿಂತಲೂ ಅಧಿಕ ಮಂದಿ ಮಾತನಾಡುವ ತುಳು ಭಾಷೆಯನ್ನು ಇಷ್ಟು ವರ್ಷಗಳಾದರೂ ಸಂವಿಧಾನದ ಎಂಟನೆ ಪರಿಚ್ಛಧೇಕಕ್ಕೆ ಸೇರಿಸುವಂತೆ ಒತ್ತಾಯಿಸಿದರು.
ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗಿಶ್ ಶೆಟ್ಟಿ, ಸಂಚಾಲಕ ರಮೇಶ್ ಪೂಜಾರಿ, ಕಾರ್ಯದರ್ಶಿ ಅಜರುದ್ದಿನ್, ಪ್ರಶಾಂತ್ ಕಡಬ, ಸುರೇಂದ್ರ ನಿಟ್ಟೂರು, ವಿಕಾಸ್ ಶೆಟ್ಟಿ ಇತರರು ಉಪಸ್ಥಿತರಿದ್ದರು.