“ಕನ್ನಡ ಸಾರಸ್ವತ ಲೋಕದ ಚಿಲುಮೆ ರಾಷ್ಟ್ರಕವಿ ಕುವೆಂಪು” -ಡಾ.ನರೇಂದ್ರ ರೈ ದೇರ್ಲ
ಮಂಗಳೂರು: ಕನ್ನಡ ಸಾರಸ್ವತ ಲೋಕದ ಚಿಲುಮೆ ರಾಷ್ಟ್ರಕವಿ ಕುವೆಂಪು. ಮೃದು ಸ್ವಭಾವದ, ಪರಿಸರದ ಕವಿ, ಕಾಡಿನ ನೈಜ ಸೌಂದರ್ಯದ ನಡುವೆ ನೆಲೆಸಿ ಕವಿತೆಗಳನ್ನು ರಚಿಸಿ ಜನಮಾನಸವನ್ನು ಸೆಳೆದ ಕನ್ನಡದ ಮೇರು ಕವಿ, ಸೃಜನಶೀಲ ವ್ಯಕ್ತಿತ್ವ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರು ಎಂದು ಪುತ್ತೂರು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ, ಪರಿಸರ ಬರಹಗಾರರಾದ ಡಾ. ನರೇಂದ್ರ ರೈ ದೇರ್ಲ ಹೇಳಿದರು.
ಪ್ರಕೃತಿ ರಮಣೀಯತೆಗೆ ಹೆಸರಾದ ಮಲೆನಾಡಿನ ಹಚ್ಚ ಹಸಿರಿನ ಪ್ರಕೃತಿ ಮಾತೆಯ ಮಡಿಲಿನಲ್ಲಿ ಬೆಳದು ಕವಿತೆ, ಕತೆ, ಕಾದಂಬರಿಗಳ ಮೂಲಕ ಪರಿಸರದ ನೈಜ ಚಿತ್ರಣವನ್ನು ನೀಡಿದ ಕುವೆಂಪು ಅವರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅಪಾರ ಎಂದರು.
ಮಂಗಳೂರಿನ ರಥಬೀದಿಯ ಡಾ.ಪಿ.ದಯಾನಂದ ಪೈ-ಪಿ.ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜಿನ ಕನ್ನಡ ವಿಭಾಗ, ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಕನ್ನಡ ವಿಭಾಗ ಹಾಗೂ ಕುಪ್ಪಳ್ಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ (ರಿ) ಇದರ ಸಹಯೋಗದಲ್ಲಿ ನಡೆದ “ಹೊಸ ತಲೆಮಾರಿಗೆ ಕುವೆಂಪು ಸಾಹಿತ್ಯ ದರ್ಶನ ವಿಶೇಷೋಪನ್ಯಾಸ ಮಾಲೆ” ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಜಶೇಖರ ಹೆಬ್ಬಾರ್.ಸಿ. ಮಾತನಾಡಿ, ವಿದ್ಯಾರ್ಥಿಗಳು ಕುವೆಂಪು ಅವರ ಕೃತಿಗಳನ್ನು ಓದುವುದರೊಂದಿಗೆ ಸಮಗ್ರವಾಗಿ ಅರ್ಥೈಸಿ ಜೀವನ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಧ್ಯಾಪಕ ಡಾ.ರಾಜಶೇಖರ ಹಳೆಮನೆ, ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥರಾದ ಡಾ.ಪ್ರಕಾಶಚಂದ್ರ ಶಿಶಿಲ, ಕನ್ನಡ ಪ್ರಾಧ್ಯಾಪಕ ಪ್ರೊ.ರವಿಕುಮಾರ್ ಎಂ.ಪಿ. ಮತ್ತು ಕಾಲೇಜಿನ ವಿವಿಧ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.
ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ.ಪ್ರಕಾಶಚಂದ್ರ ಶಿಶಿಲ ಸ್ವಾಗತಿಸಿ, ಕನ್ನಡ ಪ್ರಾಧ್ಯಾಪಕ ಪ್ರೊ. ರವಿಕುಮಾರ್ ಎಂ.ಪಿ ಆರಂಭ ಗೀತೆ ಹಾಡಿ, ಕನ್ನಡ ವಿಭಾಗ ಪ್ರಾಧ್ಯಾಪಕಿ ಡಾ.ನಾಗವೇಣಿ ಮಂಚಿ ವಂದಿಸಿದರು. ದ್ವಿತೀಯ ಪತ್ರಿಕೋದ್ಯಮ ವಿದ್ಯಾರ್ಥಿನಿ ತೇಜಸ್ವಿನಿ.ಕೆ ಕಾರ್ಯಕ್ರಮ ನಿರೂಪಿಸಿದರು.