ಕನ್ನಡಕುದ್ರು ಸಂತ ಜೊಸೇಫ್ ವಾಜ್ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ
ಕುಂದಾಪುರ: ಗಂಗೊಳ್ಳಿ ಕನ್ನಡಕುದ್ರು ಸಂತ ಜೊಸೇಫ್ ವಾಜ್ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು.
ಮಂಗಳೂರಿನ ವಿಶ್ರಾಂತ ಧರ್ಮಾಧ್ಯಕ್ಷ ಅತಿ ವಂ ಡಾ ಅಲೋಶಿಯಸ್ ಪಾವ್ಲ್ ಡಿಸೋಜಾ ಅವರು ವಾರ್ಷಿಕ ಮಹೋತ್ಸವದ ಪ್ರಧಾನ ಬಲಿಪೂಜೆಯನ್ನು ನೆರವೇರಿಸಿ ಆಶೀರ್ವಚನ ನೀಡಿದರು.
ಗಂಗೊಳ್ಳಿ ಕೊಸೆಸಾಂವ್ ಅಮ್ಮನವರ ಚರ್ಚಿನ ಪ್ರಧಾನ ಧರ್ಮುಗುರು ವಂ|ಆಲ್ಬರ್ಟ್ ಕ್ರಾಸ್ತಾ, ಕುಂದಾಪುರ ವಲಯ ಪ್ರಧಾನ ಧರ್ಮಗುರು ವಂ|ಸ್ಟ್ಯಾನಿ ತಾವ್ರೊ, ಪಡುಕೋಣೆ ಚರ್ಚಿನ ಫ್ರೆಡ್ ಮಸ್ಕರೇನ್ಹಸ್, ಬೀದರ್ ಧರ್ಮಕೇಂದ್ರದ ವಂ|ದೀಪಕ್ ಫುರ್ಟಾಡೊ, ಕೋಟ ಚರ್ಚಿನ ವಂ|ಆಲ್ಫೋನ್ಸಸ್ ಡಿಲೀಮಾ, ತ್ರಾಸಿ ಚರ್ಚಿನ ಚಾರ್ಲ್ಸ್ ಲೂವಿಸ್, ಕೋಟೇಶ್ವರ ಚರ್ಚಿನ ವಂ|ಸಿರಿಲ್ ಮಿನೇಜಸ್ ಉಪಸ್ಥಿತರಿದ್ದರು.
ಮಹೋತ್ಸವದ ಪ್ರಾಯೋಜಕತ್ವವನ್ನು ಜಾನ್ ಸ್ಟೀಫನ್ ಕ್ರಾಸ್ತಾ ಕುಟುಂಬಿಕರು ವಹಿಸಿದ್ದರು.
ಸಂತ ಜೊಸೇಫ್ ವಾಜ್ ಅವರು ಗಂಗೊಳ್ಳಿಯಲ್ಲಿ ಸೇವೆ ನೀಡಿದ್ದು, ಅವರ ಹೆಸರಿನಲ್ಲಿ 1997ರಲ್ಲಿ ಗಂಗೊಳ್ಳಿ ಧರ್ಮಕೇಂದ್ರ ವ್ಯಾಪ್ತಿಯ ಕನ್ನಡ ಕುದ್ರುವಿನಲ್ಲಿ ಕಿರು ದೇವಾಲಯವನ್ನು ನಿರ್ಮಿಸಲಾಗಿದೆ. ಇಡಿ ಉಡುಪಿ ಧರ್ಮಪ್ರಾಂತ್ಯದಲ್ಲಿ ಸಂತ ಜೊಸೇಫ್ ವಾಜ್ ಅವರಿಗೆ ಸಮರ್ಪಿಸಿ ಏಕೈಕ ಕಿರು ದೇವಾಲಯ ಇದಾಗಿದ್ದು ಆಗಿನ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿದ್ದ ವಂ|ಡಾ|ಅಲೋಶಿಯಸ್ ಪಾವ್ಲ್ ಡಿಸೋಜಾ ಅವರು ದೇವಾಲಯವನ್ನು ಆಶೀರ್ವದಿಸಿದ್ದರು. ದೇವಾಲಯದಲ್ಲಿ ಪ್ರತಿ ಮಂಗಳವಾರ ಮುಕ್ತಿಧರ ಜೊಸೇಫ್ ವಾಜ್ ಅವರ ನೊವೆನಾ ಪ್ರಾರ್ಥನೆ ನಡೆಯುತ್ತಿದ್ದು ತಿಂಗಳಿಗೊಮ್ಮೆ ಗಂಗೊಳ್ಳಿಯ ಧರ್ಮಗುರುಗಳು ಆಗಮಿಸಿ ಬಲಿಪೂಜೆಯನ್ನು ಅರ್ಪಿಸುತ್ತಾರೆ.