ಮುಂಬಯಿ: ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತೀಯೋರ್ವ ಪ್ರಜೆಗೂ ತನ್ನ ಧರ್ಮ, ಭಾಷೆ, ಪ್ರಾಂತ್ಯ ಇತ್ಯಾದಿಗಳು ಪ್ರಧಾನವಾಗಿದ್ದು ಇವೆಲ್ಲಕ್ಕೂ ಮಿಗಿಲಾದದ್ದು ಮಾನವೀಯತೆ ಮತ್ತು ಭಾರತೀಯತೆ ಆಗಿದೆ. ಇವೆಲ್ಲವುದರ ಮಧ್ಯೆ ಸಾಮರಸ್ಯದ ಬದುಕನ್ನು ಬಾಳುತ್ತಾ ರಾಷ್ಟ್ರದ ಸ್ವಸ್ಥ ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ಹಿರಿದಾಗಿದೆ. ಪತ್ರಕರ್ತರ ಸಹಯೋಗ ನಮ್ಮೆಲ್ಲರ ಬಾಂಧವ್ಯದ ಬದುಕಿಗೆ ಬೆಸುಗೆಯಾಗಲಿ ಎಂದು ಮಹಾರಾಷ್ಟ್ರ ರಾಜ್ಯದ ಸಾರ್ವಜನಿಕ ಕಾಮಗಾರಿ ಮತ್ತು ಟೆಕ್ಸ್‍ಟೈಲ್ ಖಾತೆ ಸಚಿವ, ಮಹಾರಾಷ್ಟ್ರ ಮತ್ತು ಮಹಾರಾಷ್ಟ್ರ ಗಡಿ ಪ್ರದೇಶ ಉಸ್ತುವರಿ ಮಂತ್ರಿ ಚಂದ್ರಹಾಸ ಪಾಟೀಲ್ ತಿಳಿಸಿದರು.
ಮಹಾರಾಷ್ಟ್ರ ರಾಜ್ಯ ಸಚಿವಾಲಯದಲ್ಲಿ ಇಂದಿಲ್ಲಿ ಬುಧವಾರ ಸಂಜೆ ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ ಸಂಸ್ಥೆಯು ಪ್ರಕಾಶಿತ ಚತುರ್ಥ `ದಿನಚರಿ ಪುಸ್ತಕ-ಮಾಹಿತಿಸೂಚಿ ಕೈಪಿಡಿ-2016′(ಡೈಯರಿ-ಡಿರೆಕ್ಟರಿ)ಯನ್ನು ಬಿಡುಗಡೆ ಗೊಳಿಸಿ ಸಚಿವ ಚಂದ್ರಹಾಸ ಪಾಟೀಲ್ ನುಡಿದರು.
ಮಹಾರಾಷ್ಟ್ರ ರಾಜ್ಯಸರಕಾರದ ಮುಖ್ಯ ಕಾರ್ಯಾಲಯ (ಸಚಿವಾಲಯ)ದ ಮಂತ್ರಾಲಯ ಮತ್ತು ವಿಧಿ ಮಂಡಳ್ ವಾರ್ತಾಹಾರ್ ಸಂಘದ ಸಭಾಗೃಹದಲ್ಲಿ ಮಂತ್ರಾಲಯದ ಪ್ರಚಾರ ಸಹಾಯಕ ನಿರ್ದೇಶಕ ದೇವೇಂದ್ರ ಭುಜಬಲ್ ಡೈಯರಿ-ಡಿರೆಕ್ಟರಿ ವಿಧ್ಯಕ್ತವಾಗಿ ಅನಾವರಣ ಗೊಳಿಸಿ ಶುಭಾರೈಸಿದರು.
ಮರಾಠಿ ಪತ್ರಿಕಾರಿಕಾ ಜನಕ ದರ್ಪಣ್ಕರ್ ಆಚಾರ್ಯ ಬಾಳ ಶಾಸ್ತ್ರಿ ಜಂಭೇಕರ್ ಅವರ ಪ್ರತಿಮೆಗೆ ಪುಷ್ಪವೃಷ್ಠಿಗೈದು ದೇವೇಂದ್ರ ಭುಜಬಲ್ ಅವರು ಮಹಾರಾಷ್ಟ್ರದ ಮಂತ್ರಾಲಯದಲ್ಲಿ ಪತ್ರಕಾರ್ ದಿವಾಸ್ ಸಂಭ್ರಮಕ್ಕೆ ಚಾಲನೆ ನೀಡಿದರು. ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾದ ಸರಳ ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿüಗಳಾಗಿ ಮಹಾರಾಷ್ಟ್ರ ರಾಜ್ಯ ಸಚಿವಾಲಯದ ಮಂತ್ರಾಲಯ ಮತ್ತು ವಿಧಿ ಮಂಡಳ್ ವಾರ್ತಾಹಾರ್ ಸಂಘದ ಅಧ್ಯಕ್ಷ ಚಂದನ್ ಶಿರ್ವಾಳೆ, ಕಾರ್ಯದರ್ಶಿ ಚಂದ್ರಕಾಂತ್ ಶಿಂಧೆ, ಸ್ಟೇಟ್ ರಿಲೀಜ್ಹ್ ಫೌಂಡೇಶನ್ ಪುಣೆ ಇದರ ಅಧ್ಯಕ್ಷ, ರೇಖೀ ತಜ್ಞ ಅಶೋಕ್ ದೇಶ್‍ಮುಖ್ ಉಪಸ್ಥಿತರಿದ್ದರು.
ಕೈಪಿಡಿಯ ಸಂಪಾದಕ ಹಾಗೂ ಪತ್ರಕರ್ತರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ರೋನ್ಸ್ ಬಂಟ್ವಾಳ್, ಪತ್ರಕರ್ತರ ಭವನ ಸಮಿತಿ ಶಿವ ಎಂ.ಮೂಡಿಗೆರೆ, ಕಾರ್ಯಧ್ಯಕ್ಷ ಕ್ರೀಡಾ ಸಮಿತಿ ಕಾರ್ಯಧ್ಯಕ್ಷ ಜಯ ಸಿ.ಪೂಜಾರಿ, ಜೊತೆ ಕಾರ್ಯದರ್ಶಿ ಬಾಬು ಕೆ.ಬೆಳ್ಚಡ, ಕಾರ್ಯಕಾರಿ ಸಮಿತಿ ಸದಸ್ಯ ಶ್ಯಾಮ್ ಎಂ.ಹಂಧೆ ಹಾಜರಿದ್ದರು.