ಕಮೀಷನರ್ ಅಗ್ರವಾಲ್ ಎತ್ತಂಗಡಿಯಾಗದೆ ವಿರಮಿಸುವುದಿಲ್ಲ : ಮುನೀರ್ ಕಾಟಿಪಳ್ಳ

Spread the love

ಕಮೀಷನರ್ ಅಗ್ರವಾಲ್ ಎತ್ತಂಗಡಿಯಾಗದೆ ವಿರಮಿಸುವುದಿಲ್ಲ : ಮುನೀರ್ ಕಾಟಿಪಳ್ಳ

ಮಂಗಳೂರು: ಪ್ರತಿಭಟನೆ, ಧರಣಿಗಳಿಗೆ ಅನುಮತಿ ನಿರಾಕರಿಸುತ್ತಿರುವ, ಜನಪರ ಸಂಘಟನೆಗಳ ಮೇಲೆ ಸರಣಿ ಮೊಕದ್ದಮೆ ಹೂಡುತ್ತಿರುವ ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು, ಮಂಗಳೂರು ನಗರಿದಂದ ಅವರನ್ನು ವರ್ಗಾಯಿಸಬೇಕು ಒತ್ತಾಯಿಸಿ ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ನಗರದ ಕ್ಲಾಕ್ ಟವರ್ ಮುಂಭಾಗ ಪ್ರತಿಭಟನಾ ಸಭೆ ನಡೆಯಿತು.

ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿ ಕಮೀಷನ್ ಹಠಾವೊ ಘೋಷಣೆಗಳನ್ನು ಕೂಗಿದರು. ಕಮೀಷನರ್ ವಿರುದ್ಧದ ಆರೋಪಗಳ ಕುರಿತು ಹಾಡು ಕಟ್ಟಿ ಹಾಡಿದರು. ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ ಸಿಪಿಐಂ ದ‌.ಕ‌. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, “ಎಫ್ಐಆರ್ ದಾಖಲಿಸಿರುವ ಕುರಿತು ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಕರಾವಳಿಯಲ್ಲಿ ಸ್ಚಾತಂತ್ರ್ಯಪೂರ್ವದಿಂದಲೇ ದುಡಿಯುವ ಜನರ, ಜನಸಾಮಾನ್ಯರ ಪರವಾಗಿ ಹೋರಾಟಗಳನ್ನು ನಡೆಸುತ್ತಾ ಬಂದಿರುವ ಕಮ್ಯುನಿಸ್ಟ್ ಪಕ್ಷಗಳಿಗೆ ಇದು ಹೊಸದೂ ಅಲ್ಲ. ಆದರೆ, ಜನಸಾಮಾನ್ಯರು ಹಕ್ಕಿಗಳಿಗಾಗಿ, ತಮಗಾಗುತ್ತಿರುವ ಅನ್ಯಾಯಗಳ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕನ್ನೇ ನಿಷೇಧಿಸುವ ಕಮೀಷನರ್ ಅಗ್ರವಾಲ್ ನಡೆಯನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದರು

ಜನಪರ ಸಂಘಟನೆಗಳನ್ನು ಶತ್ರುಗಳಂತೆ ಕಾಣುವ ಅಗ್ರವಾಲ್ ಅದೇ ಸಂದರ್ಭ ಮತೀಯ ಶಕ್ತಿಗಳನ್ನು, ಅಕ್ರಮ ಮರಳುಗಾರಿಕೆ, ಜುಗಾರಿ, ಬೆಟ್ಟಿಂಗ್, ಮಸಾಜ್ ಪಾರ್ಲರ್ ದಂಧೆಕೋರರನ್ನು ಬಂಧುಗಳಂತೆ ಕಾಣುತ್ತಿದ್ದಾರೆ. ಆ ಮೂಲಕ ಮಂಗಳೂರಿನಲ್ಲಿ ಪೊಲೀಸ್ ರಾಜ್ ನಿರ್ಮಿಸುತ್ತಿದ್ದಾರೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಬ್ರಿಟಿಷ್ ವಸಾಹತು ಕಾಲದ ಜನರಲ್ ಡಯರ್ ನಂತೆ ವರ್ತಿಸುವ ಅನುಪಮ್ ಅಗ್ರವಾಲ್ ರನ್ನು ರಾಜ್ಯ ಸರಕಾರ ತಕ್ಷಣವೇ ವರ್ಗಾಯಿಸಬೇಕು, ಇಲ್ಲದಿದ್ದಲ್ಲಿ ಹೋರಾಟ ಜಿಲ್ಲೆಯ ಮೂಲೆ ಮೂಲೆಗೆ ವಿಸ್ತರಣೆಗೊಳ್ಳಲಿದೆ. ಪೊಲೀಸ್ ಕಮೀಷನರ್ ಎತ್ತಂಗಡಿಯಾಗದೆ ವಿರಮಿಸುವುದಿಲ್ಲ ಎಂದು ಹೇಳಿದರು.

ಪ್ರತಿಭಟನೆ ಯ ನೇತ್ರತ್ವವನ್ನು ಸಿಪಿಐಎಂ ಜಿಲ್ಲಾ ಸಮಿತಿ ಮುಖಂಡರಾದ ಜಯಂತಿ ಬಿ ಶೆಟ್ಟಿ, ಜೆ ಬಾಲಕೃಷ್ಣ ಶೆಟ್ಟಿ, ರಮಣಿ ಮೂಡಬಿದ್ರೆ, ರಾಧಾ ಪುತ್ತಿಗೆ, ವಸಂತಿ ಕುಪ್ಪೆಪದವು, ಯೋಗೀಶ್ ಜಪ್ಪಿನಮೊಗರು, ಜಯಂತ ನಾಯ್ಕ್, ಬಿ ಕೆ ಇಮ್ತಿಯಾಜ್, ಸಂತೋಷ್ ಬಜಾಲ್, ರಫೀಕ್ ಹರೇಕಳ, ಪ್ರಮೀಳಾ ಶಕ್ತಿನಗರ, ಶೇಖರ್ ಕುತ್ತಾರ್,ಈಶ್ವರಿ ಬೆಳ್ತಂಗಡಿ ಮುಂತಾದವರು ವಹಿಸಿದ್ದರು.


Spread the love
Subscribe
Notify of

0 Comments
Inline Feedbacks
View all comments