ಕರಾವಳಿಯಲ್ಲಿ ಬಿಜೆಪಿ ಸಂಸದರಿಂದ ಯಾವುದೇ ಅಭಿವೃದ್ಧಿ ಆಗಿಲ್ಲ – ಜನಾರ್ದನ ಪೂಜಾರಿ ಪುತ್ರ ಸಂತೋಷ್
ಮಂಗಳೂರು: ಕಾಂಗ್ರೆಸ್ ಪಕ್ಷ ಬಿಲ್ಲವ ಸಮುದಾಯವನ್ನು ಅಥವಾ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರನ್ನು ಕಡೆಗಣಿಸಿಲ್ಲ ಎಂದು ಜನಾರ್ದನ ಪೂಜಾರಿ ಅವರ ಪುತ್ರ ಸಂತೋಷ್ ಜೆ. ಪೂಜಾರಿ ಸ್ಪಷ್ಟಪಡಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನನ್ನ ತಂದೆ5 5 ಬಿ. ಜನಾರ್ದನ ಪೂಜಾರಿ ಅವರು 5 ದಶಕಗಳಿಂದ ರಾಜಕೀಯದಲ್ಲಿದ್ದರೂ ಅವರ ಕುಟುಂಬದ ಸದಸ್ಯರಾದ ನಾವು ರಾಜಕಾರಣದ ಪ್ರಭಾವವನ್ನು ಬಳಸಿಲ್ಲ, ಅವರು ಅದಕ್ಕೆ ಅವಕಾಶ ನೀಡಿಲ್ಲ. ಅದಕ್ಕೆ ಪ್ರಸ್ತುತ ಕರಾವಳಿಯ ರಾಜಕೀಯ ವರ್ತಮಾನವನ್ನು ಗಮನಿಸಿ ಮತ್ತು ಅಭಿವೃದ್ಧಿ ಪರ ವಿಚಾರಗಳನ್ನು ಅವಲೋಕಿಸಿಕೊಂಡು ಒಂದಿಷ್ಟು ವಿಷಯಗಳು ನಿಮ್ಮ ಮೂಲಕ ಸಾರ್ವಜನಿಕರ ಮುಂದಿಡುವುದು ಅನಿವಾರ್ಯವಾಗಿದೆ.
ದಕ್ಷಿಣ ಕನ್ನಡ ಸೇರಿದಂತೆ ಕರಾವಳಿಯಲ್ಲಿ ನಿರೀಕ್ಷಿತ ಪ್ರಮಾಣದ ಮೂಲಭೂತ ಸೌಕರ್ಯ ಅಭಿವೃದ್ಧಿ ಆಗಲ್ಲ. ಉಳ್ಳಾಲ ಶ್ರೀನಿವಾಸ ಮಲ್ಯರ ಕಾಲ ಘಟ್ಟದಿಂದ ಜನಾರ್ದನ ಪೂಜಾರಿ ಅವರ ತನಕ ಆಗಿರುವ ಕೇಂದ್ರ ಸರಕಾರದ ಅನುದಾನದ ಆಧಾರದ ಮೇಲೆ ನಡೆದ ಅಭಿವೃದ್ಧಿ ಯೋಜನೆಗಳು, ಅನಂತರದ ಬಿಜೆಪಿ ಲೋಕಸಭಾ ಸದಸ್ಯರ ಅವಧಿಯಲ್ಲಿ ಯಾವುದೇ ಹೊಸ ಯೋಜನೆಗಳು ಅನುಷ್ಠಾನ ಆಗಿಲ್ಲ.
ದಕ್ಷಿಣ ಕನ್ನಡ ಜಿಲ್ಲೆ ಅತ್ಯಂತ ಹೆಚ್ಚಿನ ಅಕ್ಷರಸ್ಥರ ಬುದ್ಧಿವಂತರ ಮತ್ತು ವಿಜ್ಞಾನ, ಆರೋಗ್ಯ, ಮಾಹಿತಿ ತಂತ್ರಜ್ಞಾನ, ವೈದ್ಯಕೀಯ, ಬ್ಯಾಂಕಿಂಗ್, ಎಂಜಿನಿಯರಿಂಗ್ ಮುತಾಂದ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚಿನ ಸಾಧನೆ ಮಾಡಿದ್ದು, ಯುವ ಜನಾಂಗವನ್ನು ಹೊಂದಿದ ಪ್ರದೇಶವಾಗಿದೆ, ಇಂತಹ ಜನರನ್ನು ಪ್ರತಿನಿಧಿಸಬಲ್ಲ ಲೋಕಸಭಾ ಸದಸ್ಯರು ಕೂಡ ಅಂತಹುದೇ ಶಿಕ್ಷಣ ಪಡೆದು ಮತ್ತು ಕರಾವಳಿಯ ಸುಶಿಕ್ಷಿತ ಜನರ ಪ್ರತಿನಿಧಿಯಾಗಿರಬೇಕೆಂದು ಮತದಾರರು ಬಯಸುವುದು ತಪ್ಪಿಲ್ಲ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಅಭಿವೃದ್ಧಿ ಮಾಡುವುದಕ್ಕಾಗಿ ನರೇಂದ್ರ ಮೋದಿ ಅವರ ಹೆಸರಲ್ಲಿ ಮತ ಕೇಳಲಾಗಿತ್ತು ಜನರು ಅದಕ್ಕೆ ಸ್ಪಂದಿಸಿದ್ದಾರೆ, ಆದರೆ, ಕಳೆದ 5 ವರ್ಷಗಳಲ್ಲಿ ಅಭಿವೃದ್ಧಿ ಆಗುವ ಬದಲು ಕರಾವಳಿಯ ಆರ್ಥಿಕ, ಔದ್ಯೋಗಿಕ ವ್ಯವಸ್ಥೆ ತಲ್ಲಣಗೊಳಿಸುವ ನೀತಿಗಳು ಕೇಂದ್ರ ಸರಕಾರ ಜಾರಿ ಮಾಡಿದೆ. ಇಲ್ಲಿನ ವಾಣಿಜ್ಯ, ವ್ಯಾಪಾರ, ಸಣ್ಣ ವ್ಯಾಪಾರ ಕ್ಷೇತ್ರಗಳಲ್ಲಿ ಅಪಾರ ನಷ್ಟ ಮತ್ತು ಆರ್ಥಿಕ ಸಂಕಷ್ಟಕ್ಕೆ ಒಳಗಾಯಿತು.
ಬಿಲ್ಲವ ಸಹಿತ ಬಹುಸಂಖ್ಯಾತ ಹಿಂದುಳಿದ ವರ್ಗದ ಸದಸ್ಯನಾಗಿ ರಾಜಕೀಯ ಕ್ಷೇತ್ರದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸರ್ವರಿಗೂ ಸಮಪಾಲು, ಸಮಬಾಳ್ವೆ ದೊರೆಯಬೇಕೆಂಬುವುದು ನಮ್ಮ ಆಶಯ. ಅದೇ ರೀತಿ ಸನ್ಮಾನ್ಯ ತಂದೆಯವರಾದ ಜನಾರ್ದನ ಪೂಜಾರಿ ಅವರಿಗೆ ಈ ವಿಚಾರಗಳಲ್ಲಿ ಕನಸುಗಳಿತ್ತು. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯಾಗಿ ಸ್ಥಳೀಯ ಯುವಜನತೆಗೆ ಊರಿನಲ್ಲೆ ಉದ್ಯೋಗ ನೀಡಬೇಕು ಎಂಬುದು ಅವರ ಮಹಾದಾಸೆ, ಇಲ್ಲಿನ ಬಹುತೇಕ ತಂದೆ ತಾಯಂದಿರ ಆಸೆಯೂ ಆಗಿದೆ.
ತನ್ಮೂಲಕ ಕೌಟುಂಬಿಕ ವ್ಯವಸ್ಥೆಯತ್ತ ಜಿಲ್ಲೆಯ ಬೆಳವಣಿಗೆಯಲ್ಲಿ ಯುವಜನತೆ ಪಾಲುದಾರರಾಗಬೇಕು ಎಂಬ ಹಂಬಲ ಇತ್ತು. ಅದಕ್ಕೆ ಉದ್ಯೋಗ ಅವಕಾಶ ಹೆಚ್ಚಿನ ಪ್ರಮಾಣದಲ್ಲಿ ದೊರೆಯುವ ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ, ಕಿರು ಕೈಗಾರಿಕೆ, ಮುಂತಾದ ಕ್ಷೇತ್ರದಲ್ಲಿ ಅಭಿವೃದ್ಧಿಗೊಳಿಸಬೇಕಾಗಿತ್ತು, ಆದರೆ ಅದು ಆಗಿಲ್ಲ. ಇದಕ್ಕೆ ಪೂರಕವಾಗಿ ಮೂಲಭೂತ ಸೌಕರ್ಯ ಅಭಿವೃದ್ಧಿ ಕೂಡ ಆಗುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣಗಳಲ್ಲಿ ಲೋಕಸಭಾ ಸದಸ್ಯರ ಸಂವಹನ ಸಾಮಥ್ಯದ ಬಗ್ಗೆ ಜನರು ಪ್ರಶ್ನೆ ಮಾಡುತ್ತಿದ್ದಾರೆ.
ಕಾಂಗ್ರೆಸ್ ಪಕ್ಷ ಬಿಲ್ಲವ ಸಮುದಾಯವನ್ನಾಗಲಿ ಜನಾರ್ದನ ಪೂಜಾರಿ ಅವರನ್ನಾಗಲಿ ಕಡೆಗಣಿಸಿದೆ ಎನ್ನುವುದು ಸರಿಯಲ್ಲ. ದೇವರಾಯ ನಾಯ್ಕ, ವಿನಯ್ ಕುಮಾರ್ ಸೊರಕೆ, ಆರ್. ಎಲ್. ಜಾಲಪ್ಪ, ಜನಾರ್ದನ ಪೂಜಾರಿ, ಎಸ್. ಬಂಗಾರಪ್ಪ ಮತ್ತು ಈ ಚುನಾವಣೆಯಲ್ಲಿ ಬಿ.ಕೆ. ಹರಿಪ್ರಸಾದ್, ಮಧುಬಂಗಾರಪ್ಪ ಅವರಿಗೆ ಅವಕಾಶವನ್ನು ಕಾಂಗ್ರೆಸ್ ನೀಡಿದೆ. ವಿಧಾನ ಸಭೆಯಲ್ಲಿ ತುಂಬಾ ಜನರಿಗೆ ಅವಕಾಶ ನೀಡಿದೆ.
ಕಾಂಗ್ರೆಸ್ ಪಕ್ಷ ಆರಂಭದಿಂದಲೂ ಬಿಲ್ಲವ, ಈಡಿಗ ಸೇರಿದಂತೆ ಹಿಂದುಳಿದ ವರ್ಗಗಳಿಗೆ ಬೆಂಬಲ ನೀಡಿದೆ. ಆದುದರಿಂದ, ಬಿ ಜನಾರ್ದನ ಪೂಜಾರಿ ಅವರ ಕನಸು ನನಸು ಮಾಡಲು ಸಾರ್ವಜನಿಕರು, ಅವರ ಹಿತೈಷಿಗಳು, ಯುವ ಜನರು ಬೆಂಬಲ ನೀಡಬೇಕು
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಜನತೆಯು ಕೃತಜ್ಞರಾಗಿರಬೇಕು ಎಂದು ಹೇಳುತ್ತಿದ್ದು, ಈ ಜಿಲ್ಲೆಯ ಅಭಿವೃದ್ಧಿಗೆ ಇಷ್ಟೊಂದು ಅಭಿವೃದ್ಧಿ ಯೋಜನೆಗಳನ್ನು ನೀಡಿದ್ದು, ಸಾಮಾಜಿಕ ನ್ಯಾಯಕ್ಕೆ ಮನ್ನಣೆ ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಜನತೆ ಬೆಂಬಲ ನೀಡುವ ಮೂಲಕ ಕೃತಜ್ಞತೆ ಸಲ್ಲಿಸಬೇಕಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವುದು ಅಗತ್ಯವಾಗಿದೆ.