ಕರ್ತವ್ಯ ನಿರತ ವೈದ್ಯಾಧಿಕಾರಿಯ ಮೇಲೆ ಹಲ್ಲೆ ; ಇಬ್ಬರ ಬಂಧನ

Spread the love

ವೈದ್ಯಾಧಿಕಾರಿಯ ಮೇಲೆ ಹಲ್ಲೆ ; ಇಬ್ಬರ ಬಂಧನ

ಮಂಗಳೂರು: ಮಂಗಳೂರು ನಗರದ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಫಳ್ನೀರ್ ಹೈಲ್ಯಾಂಡ್ ಆಸ್ಪತ್ರೆಯ ಕರ್ತವ್ಯ ನಿರತ ವೈದ್ಯಾಧಿಕಾರಿಗೆ ಹಲ್ಲೆ ನಡೆಸಿ ಆಸ್ಪತ್ರೆಯ ಸೊತ್ತನ್ನು ಹಾನಿಗೊಳಿಸಿದ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಬಂಧಿತರನ್ನು ಕಣ್ಣೂರು ನಿವಾಸಿ ಮುಸ್ತಾಕ್ ಅಹಮ್ಮದ್(26), ಫರಂಗೀಪೇಟೆ ನಿವಾಸಿ, ಮೊಹಮ್ಮದ್ ಫಝುಲ್ (22) ಎಂದು ಗುರುತಿಸಲಾಗಿದೆ.

ಮಂಗಳೂರು ನಗರದ ಫಳ್ನೀರ್ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಡಾ: ಟಿಂಟೋ ಥಾಮಸ್ ರವರು ರಾತ್ರಿ ಕರ್ತವ್ಯದಲ್ಲಿದ್ದ ಸಮಯ ಸುಮಾರು 00-40 ಗಂಟೆಗೆ ಮೂರು ಜನ ವ್ಯಕ್ತಿಗಳು ಆಸ್ಪತ್ರೆಗೆ ಬಂದಿದ್ದು, ಅವರುಗಳ ಪೈಕಿ ಒಬ್ಬಾತನಿಗೆ ಕೈಗೆ ಗಾಯವಾಗಿದ್ದು, ಆತನಿಗೆ ಚಿಕಿತ್ಸೆ ನೀಡುವ ಸಲುವಾಗಿ ಆಸ್ಪತ್ರೆಯ ನಿಯಮದ ಬಗ್ಗೆ ಅವರಲ್ಲಿ ಹೇಳುತ್ತಿದ್ದ ಸಮಯ ಅವರ ಪೈಕಿ ಒಬ್ಬಾತನು ಆಸ್ಪತ್ರೆಯ ಕರ್ತವ್ಯ ನಿರತ ವೈದ್ಯಾಧಿಕಾರಿಯವರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆಯೊಡ್ಡಿರುವುದಲ್ಲದೇ ಅವರ ಮುಖಕ್ಕೆ ಕೈಯಿಂದ ಪಂಚ್ ಮಾಡಿರುವುದಲ್ಲದೇ ಆಸ್ಪತ್ರೆಯ ವೈದ್ಯಕೀಯ ದಾಖಲೆಗಳನ್ನು ನೆಲಕ್ಕೆ ಬಿಸಾಡಿ, ದೂರವಾಣೆಯ ಕನೆಕ್ಷನ್ ಕಟ್ ಮಾಡಿರುವುದಲ್ಲದೇ ಅಲ್ಲಿಂದ ಓಡಿ ಹೋಗುವ ಸಮಯ ಆಸ್ಪತ್ರೆಯ ಅಂಬುಲೆನ್ಸ್ ನ ಹೆಡ್ ಲೈಟ್ ನ್ನು ಗುದ್ದಿ ಹುಡಿ ಮಾಡುವ ಮೂಲಕ ಧಾಂದಲೆ ನಡೆಸಿ ಪರಾರಿಯಾಗಿದ್ದರು. ಈ ಬಗ್ಗೆ ವೈದ್ಯಾಧಿಕಾರಿಯವರು ನೀಡಿದ ದೂರಿನಂತೆ ಆರೋಪಿಗಳ ವಿರುದ್ಧ ಕರ್ತವ್ಯ ನಿರತ ವೈದ್ಯಾಧಿಕಾರಿಗೆ ಹಲ್ಲೆ, ಜೀವ ಬೆದರಿಕೆ ಹಾಗೂ ಆಸ್ಪತ್ರೆಯ ಸೊತ್ತಿಗೆ ಹಾನಿಗೊಳಿಸಿದಕ್ಕಾಗಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿತ್ತು. ಈ ಕೃತ್ಯದಲ್ಲಿ ಭಾಗಿಯಾದ ಓರ್ವನನ್ನು ಮಂಗಳೂರು ದಕ್ಷಿಣ ಠಾಣಾ ಪೊಲೀಸರು ದಸ್ತಗಿರಿ ಮಾಡಿದ್ದರು.

ಈ ಕೃತ್ಯ ನಡೆಸಿದ ಆರೋಪಿಗಳ ಪೈಕಿ ಇಬ್ಬರು ತಲೆಮರೆಸಿಕೊಂಡಿದ್ದು, ಆರೋಪಿಗಳ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಈ ಪ್ರಕರಣದಲ್ಲಿ ಭಾಗಿಯಾದ ಮುಸ್ತಾಕ್ ಅಹಮ್ಮದ್, ಮೊಹಮ್ಮದ್ ಫಝುಲ್, ಎಂಬವರನ್ನು ಮಂಗಳೂರು ನಗರದ ಕಣ್ಣೂರು ಮಸೀದಿ ಬಳಿಯಿಂದ ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿರುತ್ತದೆ. ಆರೋಪಿಗಳು ಈ ಹಿಂದೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಣ್ಣೂರು ಬಳಿ ನಡೆದ ಇಜಾಝ್ ಎಂಬಾತನ ಕೊಲೆ ಪ್ರಕರಣದಲ್ಲಿ, ವ್ಯಕ್ತಿಯೊಬ್ಬರ ಕೊಲೆಗೆ ಹಾಗೂ ದರೋಡೆಗೆ ಸಂಚು ರೂಫಿಸಿದ ಪ್ರಕರಣ ಹಾಗೂ ಜೀವ ಬೆದರಿಕೆ ಹಾಕಿದ ಪ್ರಕರಣಗಳಲ್ಲಿ ಭಾಗಿಯಾಗಿದ್ದರು.

ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಸುನೀಲ್ ವೈ ನಾಯ್ಕ್ ಮತ್ತು ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.


Spread the love