ಕರ್ನಾಟಕ ರಾಜ್ಯ ಕ್ರೈಸ್ತ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಕ್ರೈಸ್ತ ಅಭಿವೃದ್ಧಿ ಸಮಿತಿಯಿಂದ ತೀರ್ಮಾನ – ಜೆ.ಆರ್.ಲೋಬೊ

Spread the love

ಕರ್ನಾಟಕ ರಾಜ್ಯ ಕ್ರೈಸ್ತ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಕ್ರೈಸ್ತ ಅಭಿವೃದ್ಧಿ ಸಮಿತಿಯಿಂದ ತೀರ್ಮಾನ – ಜೆ.ಆರ್.ಲೋಬೊ

ಮಂಗಳೂರು: ಕರ್ನಾಟಕ ರಾಜ್ಯ ಕ್ರೈಸ್ತ ಸಮುದಾಯದವರ ಸರ್ವತೋಮುಖ ಅಭಿವೃದ್ಧಿಯ ಸಲುವಾಗಿ ಕರ್ನಾಟಕ ರಾಜ್ಯ ಕ್ರೈಸ್ತ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಬೇಕೆಂದು, ಕರ್ನಾಟಕ ರಾಜ್ಯ ಕ್ರೈಸ್ತ ಅಭಿವೃದ್ಧಿ ಸಮಿತಿಯ ಇತ್ತೀಚೆಗೆ ನವೆಂಬರ್ 10 ರಂದು ಬೆಂಗಳೂರಿನಲ್ಲಿ ಕ್ರೈಸ್ತ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಸಚಿವರಾಗಿರುವ ಕೆ.ಜೆ. ಜಾರ್ಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಿತಿಯ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಗಿದೆ ಎಂದು ಕ್ರೈಸ್ತ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರು ಹಾಗೂ ಉಪ ಸಮಿತಿಯ ಅಧ್ಯಕ್ಷರು ಹಾಗೂ ಕರ್ನಾಟಕ ವಿಧಾನ ಮಂಡಲದ ಹಿಂದುಳಿದ ವರ್ಗಗದವರ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿರುವ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಜೆ. ಆರ್ ಲೋಬೊ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯದ ಎಲ್ಲಾ ಕ್ಷೇತ್ರದ ಕ್ರೈಸ್ತ ಸಮುದಾಯದವರ ಅಭಿವೃದ್ಧಿಗೋಸ್ಕರ್ ಕರ್ನಾಟಕ ರಾಜ್ಯ ಸರ್ಕಾರವು ಕ್ರೈಸ್ತ ಅಭಿವೃದ್ಧಿ ಸಮಿತಿಯನ್ನು ರಚಿಸಿದ್ದು, ಅದಕ್ಕೆ 2013-14ರಲ್ಲಿ ರೂ 75. ಕೋಟಿ, 2014-15 ರಲ್ಲಿ ರೂ 100.00 ಕೋಟಿ, 2015-16 ರಲ್ಲಿ 125.00 ಕೋಟಿ, 2016-17ರಲ್ಲಿ 175.00 ಕೋಟಿ ಅನುದಾನವನ್ನು ಸರಕಾರ ನೀಡಿದ್ದು ಇದನ್ನು ಸಂಪೂರ್ಣವಾಗಿ ವಿನಿಯೋಗಿಸಲಾಗಿದೆ

ಈ ಅನುದಾನದಿಂದ ಚರ್ಚ್ ಹಾಗೂ ಪ್ರಾರ್ಥನಾ ಮಂದಿರಗಳ ದುರಸ್ಥಿ ಹಾಗೂ ಅಭಿವೃದ್ಧಿ, ಸ್ಮಶಾನಗಳಿಗೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಸಮುದಾಯ ಭವನಗಳ ನಿರ್ಮಾಣಕ್ಕೆ ಸಹಾಯಧನ, ಅನಾಥಾಶ್ರಮ, ವೃದ್ಧಾಪ್ಯ ಆಶ್ರಮಗಳು, ವಿಕಲಚೇತನಾ ನಿರಾಶ್ರಿತ ಆಶ್ರಮಗಳ ನಡೆಸುವಿಕೆಗೆ ಸಹಾಯಧನ, ಹೊರದೇಶಗಳಲ್ಲಿ ಸ್ನಾತಕೋತ್ತರ ಪದವಿಗಳ ಹಾಗೂ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಶಿಕ್ಷಣಕ್ಕೆ ಸಹಾಯಧನ ಇತ್ಯಾದಿಗಳಿಗೆ ಈ ಅನುದಾನವನ್ನು ವಿನಿಯೋಗಿಸಲಾಗಿದೆ.

ಇನ್ನೂ ಮುಂದಕ್ಕೆ, ಆರೋಗ್ಯ ಕೇಂದ್ರಗಳು, ಸಣ್ಣ ಸಣ್ಣ ಆಸ್ಪತ್ರೆಗಳನ್ನು ನಡೆಸಲು ಅದಕ್ಕೆ ಮೂಲಭೂತ ಸೌಕರ್ಯಗಳಿಗೆ ಅನುದಾನ ನೀಡುವ ಹೊಸ ಯೋಜನೆಗಳನ್ನು ಮಾಡುವ ಕುರಿತು ಈಗಾಗಲೇ ಸಮಿತಿ ತೀರ್ಮಾನಿಸಿದೆ.

ಸಮಿತಿಗೆ, ತೀರ್ಮಾನಗಳನ್ನು ಮಾಡಲು ಮಂಜೂರಾತಿಗೆ ಹಾಗೂ ಅನುಷ್ಠಾನಕ್ಕೆ ಸೀಮಿತವಾದ ವ್ಯಾಪ್ತಿಯಿದ್ದು, ಸಮಿತಿಗೆ ಅದರದ್ದೇ ಆದ ಪ್ರತ್ಯೇಕ ಸಿಬಂದಿ ಇರುವುದಿಲ್ಲ. ಈ ಕಾರಣಗಳಿಂದ, ಸಮಿತಿಯು ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ತೊಡಕುಗಳು ಉಂಟಾಗುತ್ತಿವೆ. ಮಂಜೂರು ಮಾಡಿರುವುದನ್ನು ಸಕಾಲದಲ್ಲಿ ಬಿಡುಗಡೆಗೆ ತೊಡಕುಗಳು, ಈ ಸಮಸ್ಯೆಗಳನ್ನು ಮನಗಂಡು ಇದನ್ನು ಪರಿಹರಿಸಲು, ಸಮಿತಿಯು ಇತ್ತೀಚಿಗಿನ ಸಭೆಯಲ್ಲಿ ತನ್ನದೇ ಆದ ಕ್ರೈಸ್ತ ಅಭಿವೃದ್ದಿ ಮಂಡಳಿಯನ್ನು ರಚನೆ ಮಾಡಿಬೇಕು ಎಂದು ತೀರ್ಮಾನಿಸಿ, ಈ ತೀರ್ಮಾನವನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಿಕೊಡುವುದೆಂದ ತೀರ್ಮಾನಿಸಲಾಗಿದೆ ಎಂದರು.

ಇತ್ತೀಚೆಗೆ ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಆರ್ಚ್ ಬಿಷಪ್ ಅವರನ್ನು ಭೇಟಿ ಮಾಡಿದ್ದಾಗಳೂ ಕೂಡ ಈ ವಿಷಯದಲ್ಲಿ ಆರ್ಚ್ ಬಿಷಪ್ ಕೂಡ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು, ಕ್ರೈಸ್ತ ಅಭಿವೃದ್ಧಿ ಮಂಡಳಿಯನ್ನು ರಚಿಸಬೇಕೆಂದು ಒತ್ತಾಯಿಸಿದ್ದಾರೆಂದು ಜೆ.ಆರ್. ಲೋಬೊ ತಿಳಿಸಿದ್ದಾರೆ.


Spread the love