ಕಲ್ಮಾಡಿಯಲ್ಲಿ ಹಡಗಿನ ಮಾದರಿಯಲ್ಲಿ ನಿರ್ಮಿಸಲಾದ ರಾಜ್ಯ ಪ್ರಥಮ ಚರ್ಚಿನ ಲೋಕಾರ್ಪಣೆ
ಉಡುಪಿ: ದೇವಾಲಯಗಳು ದೇವರ ಅಸ್ತಿತ್ವವನ್ನು ತೋರ್ಪಡಿಸುವ ಸ್ಥ¼ವಾಗಿದೆ ಅಲ್ಲದೆ ಕ್ರೈಸ್ತ ಸಮುದಾಯದವರಿಗೆ ದೇವಾಲಯ ಸ್ವರ್ಗದ ಬಾಗಿಲು ಎಂಬ ನಂಬಿಗೆ ಹೊಂದಿದೆ. ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ ಡಾ ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಅವರು ಶನಿವಾರ ಮಲ್ಪೆ ಕಲ್ಮಡಿಯಲ್ಲಿ ಹಡಗಿನ ಮಾದರಿಯಲ್ಲಿ ನಿರ್ಮಿಸಲಾದ ರಾಜ್ಯ ಪ್ರಥಮ ಸ್ಟೆಲ್ಲಾ ಮಾರಿಸ್ ಚರ್ಚನ್ನು ಲೋಕಾರ್ಪಣೆಗೊಳಿಸಿ ಸಾರ್ವಜನಿಕ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕಲ್ಮಾಡಿಯ ವೆಲಂಕಣಿ ಮಾತೆ ಕಡಲಿನ ಮಾತೆ ಅಥವಾ ಸಮುದ್ರ ತಾರೆ ಎಂಬ ಹೆಸರಿನೊಂದಿಗೆ ಪ್ರಖ್ಯಾತಿ ಹೊಂದಿದ್ದು, ಈ ಭಾಗದ ಹಲವು ವರ್ಷದ ಕನಸು ನನಸಾಗಿದೆ. ಈ ಚರ್ಚು ಕೇವಲ ಕ್ರೈಸ್ತ ಭಕ್ತರಿಗೆ ಮಾತ್ರ ಸೀಮಿತವಾಗಿರದೆ ಇತರ ಧರ್ಮಿಯರು ಕೂಡ ಇಲ್ಲಿ ಬಂದು ಪ್ರಾರ್ಥನೆ ಸಲ್ಲಿಸಿ ಕೃಪಾವರಗಳನ್ನು ಪಡೆಯುತ್ತಿರುವುದು ವಿಶೇಷವಾಗಿದೆ. ಭಾರತೀಯ ಸಂಸ್ಕøತಿಯಲ್ಲಿ ದೇವಾಲಯಗಳಿಗೆ ವಿಶೇಷ ಅರ್ಥವನ್ನು ಕಲ್ಪಿಸಲಾಗಿದ್ದು, ದೇವಾಲಯಗಳು ಮನುಷ್ಯ ಮತ್ತು ದೇವರ ನಡುವೆ ಸಂಬಂಧವನ್ನು ಬೆಸೆಯುವ ಕೊಂಡಿಗಳಾಗಿವೆ. ದೇವಾಲಯಗಳು ನಮ್ಮ ಮನಸ್ಸಿಗೆ ಆಧ್ಯಾತ್ಮಿಕ ಸಂತೋಷದೊಂದಿಗೆ ದೇವರ ಕೃಪಾವರಗಳನ್ನು ಪಡೆಯುವ ಪುಣ್ಯಸ್ಥಳಗಳಾಗಿವೆ. ದೇವಾಲಯಗಳು ಕ್ರೈಸ್ತ ಸಮುದಾಯದವರಿಗೆ ಸ್ವರ್ಗದ ದಾರಿ ತೋರಿಸುವ ಸ್ಥಳಗಳು ಎಂಬ ನಂಬಿಕೆ ಹೊಂದಿದ್ದು, ಇದರಿಂದಾಗಿ ದೈವಿ ಶಕ್ತಿಯ ಅನೂಭೂತಿಯನ್ನು ಪಡೆಯಲು ಸಾಧ್ಯವಿದೆ. ನಾವೆಲ್ಲರೂ ಒಂದೇ ಎನ್ನುವ ಮನೋಭಾವದೊಂದಿಗೆ ಸೌಹಾರ್ಧತೆಯಿಂದ ಬದಕಲು ದೇವಾಲಯ ಸಾಕ್ಷಿಯಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ಮಾತನಾಡಿ ಉಡುಪಿ ಕೃಷ್ಣ ಮಠಕ್ಕೂ ಮಲ್ಪೆಗೂ ಅವಿನಾಭಾವ ಸಂಬಂಧವಿದ್ದು ಮಲ್ಪೆಯ ಕಡಲಿನಲ್ಲಿ ಕೃಷ್ಣನ ಮೂರ್ತಿ ಸಿಕ್ಕ ಪ್ರತೀತಿ ಒಂದು ಕಡೆಯಾದರೆ, ದೇಶದ ಅತ್ಯನ್ನತ ಮೀನುಗಾರಿಕ ಬಂದರಾದ ಮಲ್ಪೆಯ ಸಮೀಪ ಕಲ್ಮಾಡಿಯಲ್ಲಿ ಹಡಗಿನ ಆಕೃತಿಯ ಚರ್ಚಿನ ನಿರ್ಮಾಣ ಒಂದು ದಾಖಲೆಯಾಗಿದೆ. ಮುಂದಿನ ದಿನಗಳಲ್ಲಿ ಈ ಚರ್ಚು ಮೀನುಗಾರರ ಚರ್ಚಾಗಿ ಹೆಸರು ಪಡೆಯಲಿ ಎಂದು ಶುಭಹಾರೈಸಿದರು.
ವಿಧಾನಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಐವನ್ ಡಿಸೋಜಾ ಮಾತನಾಡಿ 2% ಜನಸಂಖ್ಯೆಯನ್ನು ಹೊಂದಿರುವ ಕ್ರೈಸ್ತ ಸಮುದಾಯ ತನ್ನ ಪ್ರಾಮಾಣಿಕತೆ, ಸೇವೆ ಪ್ರೀತಿಯಿಂದ 97%ದಷ್ಟಿರುವ ಇತರ ಸಮುದಾಯದವರಿಗ ಮಾದರಿಯಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರಕಾರ ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ 175 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದು, ಅಲ್ಪಸಂಖ್ಯಾತ ಸಮುದಾಯಕ್ಕೆ 2750 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದರು.
ಬಲಿಪೂಜೆಯ ಪ್ರಭೋದನೆಯಲ್ಲಿ ಸಂದೇಶ ನೀಡಿದ ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ ಫ್ರಾನ್ಸಿಸ್ ಸೆರಾವೊ ಮಾತನಾಡಿ ದೇವಾಲಯದ ಉಪಯುಕ್ತತೆಯನ್ನು ಬೈಬಲ್ ಶ್ರೀಗಂಥದ ಆದಾರದೊಂದಿಗೆ ಸವಿಸ್ತಾರವಾಗಿ ವಿವರಿಸಿದರು.
ಗುಲ್ಬರ್ಗಾ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ. ರೋಬರ್ಟ್ ಮಿರಾಂದಾ, ರಾಜ್ಯ ಸಭಾಸದಸ್ಯ ಆಸ್ಕರ್ ಫೆರ್ನಾಂಡಿಸ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ದಾನಿಗಳನ್ನು, ಕಟ್ಟಡಕ್ಕೆ ನೆರವಾದವರನ್ನು ಸನ್ಮಾನಿಸಲಾಯಿತು. ಚರ್ಚಿನ ಕಟ್ಟಡಕ್ಕಾಗಿ ತನ್ನ ಹೆತ್ತವರು ನೀಡಿದ ಪಾಕೆಟ್ ಮನಿಯನ್ನು ಖರ್ಚು ಮಾಡದೆ ಕೂಡಿಟ್ಟು ಚರ್ಚಿನ ಕಟ್ಟಡಕ್ಕಾಗಿ ದೇಣಿಗೆಯಾಗಿ ನೀಡಿದ 6 ಮಂದಿ ಮಕ್ಕಳನ್ನು ಈ ಸಂದರ್ಭದಲ್ಲಿ ಧರ್ಮಾಧ್ಯಕ್ಷರು ಸನ್ಮಾನಿಸಿದರು. ಉದ್ಘಾಟನೆಯ ಪ್ರಯುಕ್ತ ಹೊರತರಲಾದ ನೂತನ ಸ್ಮರಣ ಸಂಚಿಕೆಯನ್ನು ಸಚಿವ ಪ್ರಮೋದ್ ಮಧ್ವರಾಜ್ ಅನಾವರಣಗೊಳಿಸಿದರು. ಕ್ರೈಸ್ತ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರು ಕಳುಹಿಸಿದ ಆಶೀರ್ವಾದದ ಶುಭಾಶಯ ಪತ್ರವನ್ನು ಲೂಯಿಸ್ ಲೋಬೊ ವಾಚಿಸಿದರು.
ಉಡುಪಿ ಧರ್ಮಪ್ರಾಂತ್ಯದ ಚಾನ್ಸಲರ್ ವಂ ವಲೇರಿಯನ್ ಮೆಂಡೊನ್ಸಾ, ಚರ್ಚಿನ ಧರ್ಮಗುರು ವಂ ಆಲ್ಬನ್ ಡಿಸೋಜಾ, ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ, ಸ್ಥಾಯಿ ಸಮಿತಿ ಅಧ್ಯಕ್ಷ ಹಾರ್ಮಿಸ್ ನೊರೊನ್ಹಾ, ಸದಸ್ಯ ನಾರಾಯಣ ಕುಂದರ್, ಬ್ಲಾಸ್ಂ ಫೆರ್ನಾಂಡಿಸ್, ಪಾಲನಾ ಸಮಿತಿಯ ಉಪಾಧ್ಯಕ್ಷ ಸಂಜಯ್ ಅಂದ್ರಾದೆ, ಕಾರ್ಯದರ್ಶಿ ಶೋಭಾ ಮೆಂಡೊನ್ಸಾ, ಲೂಯಿಸ್ ಲೋಬೊ ಉಪಸ್ಥಿತರಿದ್ದರು.
ಬೆಳಿಗ್ಗಿನ 9 ಗಂಟೆಗೆ ಸರಿಯಾಗಿ ಚರ್ಚಿನ ಪ್ರಧಾನ ಗೇಟಿನ ಬಳಿ ಮೂರು ಮಂದಿ ಧರ್ಮಾಧ್ಯಕ್ಷರುಗಳನ್ನು ಗೌರವಯುತವಾಗಿ ಸ್ವಾಗತಿಸಿ ಮೆರವಣಿಗೆಯಲ್ಲಿ ಕರೆತರಲಾಯಿತು. ಬಳಿಕ ಗುಲ್ಬರ್ಗಾ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ. ರೋಬರ್ಟ್ ಮಿರಾಂದಾ ಅವರು ನೂತನವಾದ ಗಂಟಾ ಗೋಪುರವನ್ನು ಆಶೀರ್ವದಿಸಿದರು. ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ ಫ್ರಾನ್ಸಿಸ್ ಸೆರಾವೊ ಅವರು ಪವಾಡ ಮಾತೆ ವೆಲಂಕಣಿ ಮೂರ್ತಿಯನ್ನು ಉದ್ಘಾಟಿಸಿದರು.
ಬಳಿಕ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಹಾಗೂ ದಾನಿಗಳು ಜೊತೆಯಾಗಿ ಸೇರಿ ನೂತನ ದೇವಾಲಯವನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಪವಿತ್ರ ಜಲ ಪ್ರೋಕ್ಷಣೆಯ ಮೂಲಕ ಚರ್ಚನ್ನು ಶುದ್ದಿಕರಿಸಲಾಯಿತು. ಬಳಿಕ ಧರ್ಮಾಧ್ಯಕ್ಷರು ಬಲಿಪೂಜೆಯ ಬಲಿಪೀಠವನ್ನು ಪವಿತ್ರ ಎಣ್ಣೆಯಿಂದ ಶುದ್ದಿಕರೀಸಿ ಬಲಿಪೂಜೆಯನ್ನು ಅರ್ಪಿಸಿದರು. ಗುಲ್ಬರ್ಗಾ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ. ರೋಬರ್ಟ್ ಮಿರಾಂದಾ ಅವರು ಪರಮ ಪ್ರಸಾದವನ್ನು ಇಡುವ ಪವಿತ್ರ ಪೆಟ್ಟಿಗೆಯನ್ನು ಆಶೀರ್ವದಿಸಿದರು.
ಚರ್ಚಿನ ಧರ್ಮಗುರು ವಂ ಆಲ್ಬನ್ ಡಿಸೋಜಾ ಸ್ವಾಗತಿಸಿ, ರೋನಾಲ್ಡ್ ಒಲಿವೇರಾ ಕಾರ್ಯಕ್ರಮ ನಿರೂಪಿಸಿದರು.