ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಬಂಧಿಸಿದರೆ ಕರ್ನಾಟಕ ರಾಜ್ಯ ಉರಿಯಲಿದೆ: ಯಡ್ಯೂರಪ್ಪ
ಮಂಗಳೂರು: ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಬಂಧಿಸಿದರೆ ಕರ್ನಾಟಕ ರಾಜ್ಯ ಉರಿಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡ್ಯೂರಪ್ಪ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕೆ.ಪಿ.ಸಿ.ಸಿ ಉಸ್ತುವಾರಿ ಕೇರಳದ ಕೆ.ಸಿ.ವೇಣುಗೋಪಾಲ್ ರಾಜ್ಯದಲ್ಲಿ ಕೇರಳ ಮಾದರಿಯ ಕೊಲೆಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಗಲಭೆ ಪ್ರಕರಣಗಳಿಗೆ ಸಂಬಂಧಿಸಿ ಅಮಾಯಕರನ್ನು ಬಂಧಿಸಲಾಗುತ್ತಿದೆ ಹಾಗೂ ನೈಜ ಆರೋಪಿಗಳಿಗೆ ರಕ್ಷಣೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಎಲ್ಲಾ ಕೋಮು ಪ್ರಚೋದಿತ ಘಟನೆಗಳಿಗೆ ಸಚಿವ ರಮಾನಾಥ ರಯ ಮತ್ತು ಯು.ಟಿ.ಖಾದರ್ ಅವರುಗಳು ನೇರವಾಗಿ ಕಾರಣವಾಗಿದ್ದಾರೆ. ನೈಜ ಆರೋಪಿಗಳನ್ನು ಬಂಧಿಸುವುದನ್ನ ಬಿಟ್ಟು ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಮುಟ್ಟಿದರೆ ಕರ್ನಾಟಕ ಹೊತ್ತಿ ಉರಿಯಲಿದೆ. ಪೋಲಿಸರಿಗೆ ರಾಜ್ಯ ಸರಕಾರ ಮುಕ್ತವಾಗಿ ಕೆಲಸ ಮಾಡಲು ಅವಕಾಶ ನೀಡಲಿ ಅಲ್ಲದೆ ಮಹಿಳಾ ಪೋಲಿಸರಿಲ್ಲದೆ ರಾತ್ರಿಯ ಹೊತ್ತು ಹಿಂದು ನಾಯಕರ ಮನೆಗಳಿಗೆ ಹೋಗಿ ಧಾಳಿ ಮಾಡುವುದು ಖಂಡನೀಯವಾಗಿದೆ ಎಂದರು.
ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಅವರ ನಿಧನದ ವಾರ್ತೆಯನ್ನು 20 ಗಂಟೆಗಳ ಬಳಿಕ ಘೋಷಿಸಲು ಕಾರಣವೇನು ಎಂದು ಪ್ರಶ್ನಿಸಿದ ಯಡ್ಯೂರಪ್ಪ ಮುಖ್ಯಮಂತ್ರಿ ಈ ಸಾವಿಗೆ ನೇರವಾಗಿ ಹೊಣೆಗಾರರಾಗಿದ್ದು, ಶರತ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಶೋಭಾ ಕರಂದ್ಲಾಜೆ ಮತ್ತು ನಳಿನ್ ಕುಮಾರ್ ಅವರ ಮೇಲೂ ಪೋಲಿಸರು ಕೇಸು ದಾಖಲಿಸಿದ್ದಾರೆ.
ಜಿಲ್ಲೆಯಲ್ಲಿ ಆರ್ ಎಸ್ ಎಸ್ ಕಾರ್ಯಕರ್ತರ ಮೇಲೆ ಹಲ್ಲೆಗಳು ನಡೆದರೂ ಕೂಡ ಪೋಲಿಸರು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಅಲ್ಲದೆ ಆರೋಪಿಗಳ ಬಂಧನ ಕೂಡ ಮಾಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನು ಅಧಿಕಾರದಲ್ಲಿರುವುದು ಕೇವಲ 8-9 ತಿಂಗಳು ಅಷ್ಟೇ ಅದರ ಬಳಿಕ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲಿದೆ ಅದರ ಬಳಿಕ ಪೋಲಿಸರು ಈಗ ವರ್ತಿಸಿದ ರೀತಿಯಲ್ಲಿ ವರ್ತಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.
ಸಂಸದರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಶಾಸಕ ಗಣೇಶ್ ಕಾರ್ಣಿಕ್, ಮಾಜಿ ಶಾಸಕ ಯೋಗಿಶ್ ಭಟ್ ಹಾಗೂ ಇತರರು ಉಪಸ್ಥಿತರಿದ್ದರು.