ಕವಿಸಮಯ ಕವಿನಮನ: ನಟರಾಜ್ ವಾಷಿಂಗ್ಟನ್
ವಿದ್ಯಾಗಿರಿ; ಪಂಡಿತ ನಂ. ಅಶೋಕ ನಾರಾಯಣರ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಾ ಇದ್ದುದರಿಂದ ಕನ್ನಡದ ಮೇಲೆ ನನಗೆ ಅಭಿಮಾನ ಬೆಳೆಯಲು ಆರಂಭವಾಯಿತು ಎಂದು ಮೈ. ಶ್ರೀ. ನಟರಾಜ, ವಾಷಿಂಗ್ಟನ್ ಹೇಳಿದರು.
ಇವರು ಆಳ್ವಾಸ್ ನುಡಿಸಿರಿಯ ಮೂರನೇ ದಿನ ರತ್ನಾಕರವರ್ಣಿ ವೇದಿಕೆಯಲ್ಲಿ ನಡೆದ ಕವಿಸಮಯ-ಕವಿನಮನ ಎಂಬ ಕಾರ್ಯಕ್ರಮದಲ್ಲಿ ತಮ್ಮ ಕವಿತೆಯನ್ನು ವಾಚಿಸಿ ಮಾತನಾಡಿದರು.
ವಿದ್ಯಾರ್ಥಿಯಾಗಿದ್ದಾಗಲೇ ಡಾ. ಯು. ಆರ್. ಅನಂತಮೂರ್ತಿ, ತಿಪ್ಪೇರಂಗ ಸ್ವಾಮಿಯವರ ಪ್ರಭಾವ ನನ್ನ ಮೇಲೆ ಆಗಿತ್ತು. ಮನಸ್ಸಲ್ಲಿ ಮೂಡುವಂತಹ ಭಾವವನ್ನು ವ್ಯಕ್ತಪಡಿಸಲು ಕನ್ನಡವಲ್ಲದೇ ಬೇರೆ ಯಾವ ಭಾಷೆಯಲ್ಲೂ ಸಾಧ್ಯವಿಲ್ಲ ಎನ್ನುವುದು ಮನದಟ್ಟಾಯಿತು. ಹಾಗಾಗಿ ನಾನು ಕವನಗಳನ್ನು ಬರೆಯಲು ಆರಂಭಿಸಿದೆ. ಅಮೇರಿಕಾದಲ್ಲಿರುವ ಕನ್ನಡ ಮಕ್ಕಳಿಗೆ ಕನ್ನಡ ಕಲಿಸುವ ಸಲುವಾಗಿ ‘ಯುಗಾದಿ ಬಂದಿತು ತುಂಬು ಹರುಷ ತಂದಿತು’ ಎಂಬ ಕಾವ್ಯವನ್ನು ರಚಿಸಿದ್ದೇನೆ ಎಂದು ಹೇಳಿದರು.
ನಟರಾಜ್ ಅವರ ಕವನವನ್ನು ರಾಜೀವ್ ಬೆಂಗಳುರು ಸಂಗೀತಕ್ಕೆ ಅಳವಡಿಸಿ ಹಾಡಿದರು. ಬಾಗೂರು ಮಾರ್ಕಾಂಡೇಯರವರು ಚಿತ್ರ ಬಿಡಿಸುವುದರ ಮೂಲಕ ಕವನಕ್ಕೆ ಜೀವ ತುಂಬಿದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ನುಡಿಸಿರಿಯ ಸ್ವಾಗತ ಸಮಿತಿಯ ಉಪಾಧ್ಯಕ್ಷ ಎನ್. ಆರ್. ಬಳ್ಳಾಲ್, ಆಳ್ವಾಸ್ ನುಡಿಸಿರಿ 2018ರ ಸರ್ವಾಧ್ಯಕ್ಷೆ ಡಾ. ಮಲ್ಲಿಕಾ ಎಸ್. ಘಂಟಿ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಡಾ. ಜ್ಯೋತಿ ರೈ. ನಿರೂಪಿಸಿದರು.