ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಿರುವುದಕ್ಕೆ ಯಾವುದೇ ನೋಟಿಸ್ ಬಂದಿಲ್ಲ – ಅಮೃತ್ ಶೆಣೈ
ಉಡುಪಿ : ಕಾಂಗ್ರೆಸ್ ಪಕ್ಷದಿಂದ ನನ್ನನ್ನು ಅಮಾನತುಗೊಳಿಸಿರುವುದಕ್ಕೆ ಸಂಬಂಧಿಸಿ ಎಐಸಿಸಿ ಅಥವಾ ಕೆಪಿಸಿಸಿಯಿಂದ ಯಾವುದೇ ಪತ್ರ ಅಥವಾ ವಿವರಣೆ ಕೇಳಿ ಶೋಕಾಸ್ ನೋಟಿಸ್ ಬಂದಿಲ್ಲ. ನಾನು ರಾಜೀನಾಮೆಗೆ ಸಿದ್ಧವಾಗಿಯೇ ಈ ಹೋರಾಟಕ್ಕೆ ಇಳಿದಿದ್ದೇನೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಅಮೃತ್ ಶೆಣೈ ತಿಳಿಸಿದ್ದಾರೆ.
ಅವರು ಭಾನುವಾರ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು, ಪ್ರಜಾಪ್ರಭುತ್ವದಲ್ಲಿ ನಾನು ಇಂತಹ ಹೆಜ್ಜೆ ಏಕೆ ಇಟ್ಟೆ ಎಂಬುದನ್ನು ನನ್ನಿಂದ ತಿಳಿದುಕೊಳ್ಳುವ ಪ್ರಯತ್ನ ಹೈಕಮಾಂಡ್ ಮಾಡಬಹುದು ಎಂಬ ವಿಶ್ವಾಸ ಹೊಂದಿದ್ದೆ. ತಾಂತ್ರಿಕವಾಗಿ ನಾವು ತಪ್ಪು ಮಾಡಿದರೂ ನೈತಿಕವಾಗಿ ಸರಿ ಎಂಬ ಗೊಂದಲದಿಂದಾಗಿ ರಾಜೀನಾಮೆ ಕೊಡುವ ಅಂತಿಮ ನಿರ್ಧಾರವನ್ನು ನಾನು ಈವರೆಗೆ ಮಾಡಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಅಧಿಕೃತವಾಗಿ ಅಮಾನತು ಪತ್ರ ತಲುಪಿದರೆ ಪಕ್ಷದಲ್ಲಿ ಮಂತ್ರಿಯಾಗಿ ಕೆಲಸ ಮಾಡಿದ ದೊಡ್ಡ ವ್ಯಕ್ತಿಗಳಿಗೆ ಒಂದು ಕಾನೂನು, ಇತರರಿಗೆ ಇನ್ನೊಂದು ಕಾನೂನೇ ಎಂಬುಬದನ್ನು ಕೇಳ ಬಯಸುತ್ತೇನೆ. ನಾನು ಇದನ್ನು ಹೊರತುಪಡಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ವಿರೋಧ ಮಾಡುವುದು ದೂರದ ಮಾತು. ಯಾವುದೇ ಸಂದರ್ಭದಲ್ಲೂ ನಾನು ಪಕ್ಷಕ್ಕೆ ಮುಜುಗರ ಆಗುವ ರೀತಿಯಲ್ಲಿ ವರ್ತಿಸಿದ್ದೂ ಇಲ್ಲ, ಮಾತನಾಡಿದ್ದೂ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಆದರೆ ಪ್ರಮೋದ್ ಮಧ್ವರಾಜ್ ‘ನಾನು ಬಿಜೆಪಿ ಗೇಟ್ ಬಳಿ ನಿಂತಿದ್ದೇನೆ’, ರಾಜ್ಯ ಕಾಂಗ್ರೆಸ್ ಸರಕಾರ ತೀರ್ಮಾನಿಸಿ ಆಚರಿಸಿದ ಟಿಪ್ಪು ಜಯಂತಿಯಲ್ಲಿ ಭಾಗವಹಿಸದ ಹಾಗೆ ಆ ದೇವರೇ ಮಾಡಿದ್ದಾರೆ ಎಂದು ನೀಡಿರುವ ಹೇಳಿಕೆಗಳೆಲ್ಲ ಪಕ್ಷ ವಿರೋಧಿ ಆಗುವುದಿಲ್ಲವೇ? ಕಾರ್ಯಕರ್ತರಿಗೆ ನೋವು ಮತ್ತು ಗೊಂದಲ ಉಂಟು ಮಾಡುವ ಇಂತಹ ಹೇಳಿಕೆಗಳು ಚುನಾವಣೆಯಲ್ಲಿ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲವೇ ಎಂದು ಅಮೃತ್ ಶೆಣೈ ಪ್ರಶ್ನಿಸಿದ್ದಾರೆ.
ಪ್ರಮೋದ್ ಮಧ್ವರಾಜ್ ಅವರಿಗೆ ಕನಿಷ್ಠ ಎಚ್ಚರಿಕೆಯನ್ನೂ ಕೊಡದ ಹೈಕಮಾಂಡ್ ಇಷ್ಟು ವರ್ಷ ಪ್ರಾಮಾಣಿಕನಾಗಿ ಹೃದಯ ಮತ್ತು ಮನಸ್ಸು ಕೊಟ್ಟು ಪಕ್ಷಕ್ಕಾಗಿ ದುಡಿದ ನನ್ನನ್ನು ಏಕಾಏಕಿ ನೇರವಾಗಿ ಅಮಾನತು ಮಾಡಿದ ಕ್ರಮ ಸರಿಯೇ ಎಂಬುದನ್ನು ಪ್ರಶ್ನೆ ಮಾಡಲು ಬಯಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಪ್ರಮೋದ್ ಮಧ್ವರಾಜ್ ಜೊತೆ ನಾನು ಎಲ್ಲ ಚುನಾವಣೆಗಳಲ್ಲಿ ಬಹಳ ಹತ್ತಿರದಿಂದ ಹಾಗೂ ಮುಂಚೂಣಿಯಲ್ಲಿ ನಿಂತು ದುಡಿದಿದ್ದೇನೆ. ಅವರ ಮೇಲೆ ವೈಯಕ್ತಿಕವಾಗಿ ನನಗೆ ಪ್ರೀತಿ ಇದೆ. ಆದರೆ ರಾಜಕೀಯವಾಗಿ ಅವರ ಪ್ರತಿಯೊಂದು ತಪ್ಪು ನಿರ್ಧಾರಗಳನ್ನು ಬಾಯಿಮುಚ್ಚಿ ಸಮರ್ಥಿಸಲು ನನ್ನಿಂದ ಸಾಧ್ಯವಿಲ್ಲ, ನನಗೆ ಅಧಿಕೃತವಾಗಿ ಅಮಾನತು ಪತ್ರ ತಲುಪಿದರೆ ಅದಕ್ಕೆ ಉತ್ತರ ಕೊಡುತ್ತೇನೆ ಎಂದು ಅಮೃತ್ ಶೆಣೈ ಹೇಳಿಕೆಯಲ್ಲಿ ತಿಳಿಸಿದ್ದಾರೆ.