ಕಾಂಗ್ರೆಸ್ ಮುಕ್ತ ಕರ್ನಾಟಕ ಕನಸಿಗೆ ತಣ್ಣೀರೇರಚಿದ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಬಿಜೆಪಿ ಸದಸ್ಯರು; ಸೂಕ್ತ ಕ್ರಮಕ್ಕೆ ಆಗ್ರಹ

Spread the love

ಕಾಂಗ್ರೆಸ್ ಮುಕ್ತ ಕರ್ನಾಟಕ ಕನಸಿಗೆ ತಣ್ಣೀರೇರಚಿದ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಬಿಜೆಪಿ ಸದಸ್ಯರು; ಸೂಕ್ತ ಕ್ರಮಕ್ಕೆ ಆಗ್ರಹ

ಉಡುಪಿ: ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಅಧ್ಯಕ್ಷೀಯ ಚುನಾವಣೆಯ ವಿಚಾರವಾಗಿ ಜಿಲ್ಲಾ ಬಿಜೆಪಿ ಹೈಕಮಾಂಡ್ ಕೆಂಡಾಮಂಡಲವಾಗಿದೆ. ಬಿಜೆಪಿಯ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣ ಘೋಷಣೆಯ ಬೆನ್ನಲ್ಲೆ ಉಡುಪಿ ಜಿಲ್ಲೆಯ ಪ್ರಮುಖ ಸ್ಥಳೀಯಾಡಳಿತ ವ್ಯವಸ್ಥೆಯಾದ ಸಾಲಿಗ್ರಾಮ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಸದಸ್ಯೆಗೆ ನಾಲ್ವರು ಬಿಜೆಪಿ ಸದಸ್ಯರು ಮತ ಹಾಕಿ ಗೆಲ್ಲಿಸಿರುವುದು, ಪಕ್ಷದ ಅಂತರಿಕ ಸಭೆಯಲ್ಲಿ ಚರ್ಚೆಯಾಗಿದ್ದು, ಕಾರ್ಕಳ ಶಾಸಕ ಸುನಿಲ್ ಕುಮಾರ್ ಮತ್ತು ವಿಧಾನ ಪರಿಷತ್ ಸದಸ್ಯರ ಕೋಟ ಶ್ರೀನಿವಾಸ ಪೂಜಾರಿ ವಿರೋಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.

ಮುಂದಿನ ತಿಂಗಳಿನಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಂಡ ಉಡುಪಿ ಜಿಲ್ಲೆಗೆ ಬರ ಅಧ್ಯಯನಕ್ಕಾಗಿ ಭೇಟಿ ನೀಡುವ ವಿಚಾರವಾಗಿ ಇತ್ತೀಚೆಗೆ ಜಿಲ್ಲಾ ಬಿಜೆಪಿ ವತಿಯಿಂದ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಜಿಲ್ಲೆಯ ಬಿಜೆಪಿ ಹಿರಿಯ ಮುಖಂಡರು ನಾಯಕರು ಉಪಸ್ಥಿತರಿದ್ದು ಯಡಿಯೂರಪ್ಪ ಅವರನ್ನು ಸ್ವಾಗತಿಸುವ ಮತ್ತು ಕಾರ್ಯಕ್ರಮ ವ್ಯವಸ್ಥೆ ಬಗ್ಗೆ ಚರ್ಚೆ ನಡೆಸಲಾಗಿತ್ತು. ಇದೇ ಸಂದರ್ಭ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಪಕ್ಷದ ತತ್ವ ಮತ್ತು ಸಿದ್ಧಾಂತಕ್ಕೆ ವಿರುದ್ಧವಾಗಿ ಇನ್ರ್ನೆಂದು ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗೆ ಮತ ಹಾಕಿ ಸಹಕಾರ ನೀಡಿ, ಪರೋಕ್ಷವಾಗಿ ಕಾಂಗ್ರೆಸ್ ಸದಸ್ಯೆ ಅಧ್ಯಕ್ಷಗಾದಿಗೇರುವಂತೆ ಸಹಕರಿಸಿದ ಕುರಿತು ಸಭೆಯಲ್ಲಿ ಬಿಜೆಪಿ ಮುಖಂಡರೋರ್ವರು ಪ್ರಸ್ತಾಪಿಸಿದ್ದಾರೆ. ಈ ಬಗ್ಗೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಸಭೆಯಲ್ಲಿ ಪ್ರತಿಕ್ರಿಯಿಸಿ ಪತ್ರಿಕೆಗಳಲ್ಲಿ ಬಂದ ಮಾಹಿತಿ ಪ್ರಕಾರ ಬಿಜೆಪಿ ಓರ್ವ ಸದಸ್ಯ ಕಾಂಗ್ರೆಸ್ ಸದಸ್ಯೆಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅನುಮೋದಕರಾಗಿದ್ದು ಅಲ್ಲದೇ 4 ಬಿಜೆಪಿ ಸದಸ್ಯರು ಕಾಂಗ್ರೆಸ್ ಪಕ್ಷದ ಸದಸ್ಯೆಗೆ ಮತ ಹಾಕಿದ್ದಾರೆ, ಇದು ಪಕ್ಷದ ತತ್ವಕ್ಕೆ ವಿರುದ್ದವಾಗಿದೆ. ಇಂತಹ ವಿಚಾರಗಳು ಮತ್ತೆ ಮತ್ತೆ ಪುನರಾವರ್ತನೆಯಾಗುವುದು ಸರಿಯಲ್ಲ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಂತಹ ಬೆಳವಣಿಗೆಗಳು ಮುಂದೆ ಆಗದಂತೆ ಈಗಲೇ ಬ್ರೇಕ್ ಹಾಕಬೇಕು ಎಂದಿದ್ದಾರೆ ಎನ್ನಲಾಗಿದೆ.

ಸ್ಥಳೀಯಾಡಳಿತ ವ್ಯವಸ್ಥೆಯಿಂದಲೇ ಪಕ್ಷದ ತತ್ವ ಸಿದ್ಧಾಂತಕ್ಕೆ ಬೆಲೆ ನೀಡಿ ಆಡಳಿತ ನಡೆಸಬೇಕಾದ ಅಗತ್ಯೆ ಇದೆ, ಅಲ್ಲದೇ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಈ ಬೆಳವಣಿಗೆ ವಿರೋಧಿಯಾಗಿದೆ ಎನ್ನುವ ಕಾರಣಕ್ಕೆ, ವಿಧಾನ ಪರಿಷತ್ ಸದಸ್ಯ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕಾ ಪ್ರಕೋಷ್ಠದ ಅಧ್ಯಕ್ಷ ಕಿಶೋರ್ ಕುಂದಾಪುರ ಮತ್ತಿತತರು ಸಹಮತ ಸೂಚಿಸಿದ್ದಾರೆ ಎನ್ನಲಾಗಿದೆ.


Spread the love