ಕಾನೂನಿಗೆ ಗೌರವ ಕೊಟ್ಟು ಸುಮ್ಮನಿರುವುದು ನಮ್ಮ ದೌರ್ಬಲ್ಯವಲ್ಲ: ಬಿಜೆಪಿ ವಿರುದ್ಧ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಆಕ್ರೋಶ

Spread the love

ಕಾನೂನಿಗೆ ಗೌರವ ಕೊಟ್ಟು ಸುಮ್ಮನಿರುವುದು ನಮ್ಮ ದೌರ್ಬಲ್ಯವಲ್ಲ: ಬಿಜೆಪಿ ವಿರುದ್ಧ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಆಕ್ರೋಶ

ಮಂಗಳೂರು: ಕುಲಶೇಖರದ ಕೃಷ್ಣ ಭಜನಾ ಮಂದಿರದ ಧಾರ್ಮಿಕ ಕಾರ್ಯಕ್ರಮದ ವೇಳೆ ಕಾಂಗ್ರೆಸ್ ಕಾರ್ಯಕರ್ತನ ವಿರುದ್ಧ ಹಲ್ಲೆ ನಡೆಸಿ ದೌರ್ಜನ್ಯ ಎಸಗಿರುವುದರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಕಾನೂನಿಗೆ ಗೌರವ ಕೊಟ್ಟು ಕಾಂಗ್ರೆಸ್ ಸುಮ್ಮನಿರುವುದನ್ನು ದೌರ್ಬಲ್ಯವೆಂದು ಭಾವಿಸುವುದು ಬೇಡ ಎಂದು ಕಾಂಗ್ರೆಸ್ ದ.ಕ. ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಜವಾಬ್ದಾರಿಯುತ ಶಾಸಕರಾಗಿರುವ ವೇದವ್ಯಾಸ ಕಾಮತ್ ರವರು ಅವಾಚ್ಯವಾಗಿ ಮಾತನಾಡಿ ಆಕ್ಷೇಪ ಮಾಡಿರುವುದು ಮಾತ್ರವಲ್ಲದೆ, ಕಾಂಗ್ರೆಸ್ ಕಾರ್ಯಕರ್ತನ ಹುಟ್ಟಿನ ಬಗ್ಗೆಯೂ ಕೀಳಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿದರು.

ಕುಲಶೇಖರದ ಕೃಷ್ಣ ಭಜನಾ ಮಂದಿರದ ಜೀರ್ಣೋದ್ಧಾರ ಕಾರ್ಯವನ್ನು ಪಕ್ಷಾತೀತವಾಗಿ ಅಲ್ಲಿನ ಸ್ಥಳೀಯರು ಸೇರಿ ನಡೆಸಿದ್ದಾರೆ. ಈ ಕುರಿತು ರವಿವಾರ ರಾತ್ರಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದ ಶಾಸಕ ವೇದವ್ಯಾಸ ಕಾಮತ್ರನ್ನು ಮಂದಿರ ಸಮಿತಿಯವರೂ ಆಗಿರುವ ಯಶವಂತ ಪ್ರಭು ಹಾಗೂ ಇತರರು ಸ್ವಾಗತಿಸಿದ್ದಾರೆ. ಈ ಸಂದರ್ಭ ಕಾಮತ್, “ಮಂದಿರ ದೇವಸ್ಥಾನಕ್ಕೆ ಕಲ್ಲು ಹೊಡೆಯವವರೂ ಇಲ್ಲಿದ್ದೀರಿ” ಎಂದು ಕೆಣಕಿದ್ದಾರೆ. ಬಳಿಕ ಸಭಾ ಕಾರ್ಯಕ್ರಮವಾಗಿ, ಸಭೆಯಲ್ಲಿ ಭಾಗವಹಿಸಿದ್ದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ ತೆರಳಿದ್ದರು. ಬಳಿಕ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ರವರು ಮತ್ತೆ ತಮ್ಮ ಭಾಷಣದಲ್ಲಿ ಭಜನಾ ಮಂದಿರ, ದೇವಸ್ಥಾನಗಳಿಗೆ ಕಲ್ಲು ಹೊಡೆಯುವವರೂ ಇಲ್ಲಿದ್ದಾರೆ ಎಂದು ಹೇಳಿದ್ದಾರೆ. ಕಾರ್ಯಕ್ರಮ ಮುಗಿದು ಹೋಗುವ ವೇಳೆ ಶಾಸಕರ ಮಾತಿನ ಬಗ್ಗೆ ಸಮಿತಿಯ ಸದಸ್ಯರು, ಕಾಂಗ್ರೆಸ್ ಕಾರ್ಯಕರ್ತರಾದ ಯಶವಂತ ಪ್ರಭುರನ್ನು ಪ್ರಶ್ನಿಸಿದ್ದಾರೆ. ಯಶವಂತ ಪ್ರಭು ಅವರ ತಂದೆ ಈ ಕೃಷ್ಣ ಮಂದಿರವನ್ನು ಸ್ಥಾಪಕರಲ್ಲಿ ಒಬ್ಬರಾಗಿದ್ದರಿಂದ ಶಾಸಕರು ಆಗಮನದ ವೇಳೆ, ಮಾತ್ರವಲ್ಲದೆ ಭಾಷಣದಲ್ಲೂ ಈ ಬಗ್ಗೆ ಉಲ್ಲೇಖಿಸಿದ್ದನ್ನು ಪ್ರಶ್ನಿಸಿದಾಗ ಶಾಸಕರ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ. ಶಾಸಕರು ಯಶವಂತ ಪ್ರಭು ಅವರ ಹುಟ್ಟನ್ನು ಪ್ರಶ್ನಿಸಿ ಅಣಕಿಸಿದ್ದಾರೆ. ಯಶವಂತ ಪ್ರಭು ಅವರೂ ಹಿಂದೂ ಅಲ್ಲವೇ ಎಂಬುದನ್ನು ಶಾಸಕರು ಹೇಳಬೇಕು. ಪ್ರಕರಣದ ಕುರಿತು ಶಾಸಕರು ಸೇರಿದಂತೆ ಇತರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಹಲ್ಲೆಗೊಳಗಾಗಿದ್ದ ಯಶವಂತ ಪ್ರಭು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾತ್ರಿ ವೇಳೆ ಪಾಂಡೇಶ್ವರ ವಾರ್ಡ್ನ ಕಾರ್ಪೊರೇಟರ್ ಗೂಂಡಾಗಳೊಂದಿಗೆ ಬಂದು ಮಣಿ ಎಂಬವರನ್ನು ಆಸ್ಪತ್ರೆಗೆ ದಾಖಲಿಸಿ ದಲಿತ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ. ಇದು ಬಿಜೆಪಿಗೆ ಶೋಭೆ ತರುವ ಕೆಲಸವಲ್ಲ. ಮಂದಿರ, ಮಸೀದಿ, ಹಿಂದುತ್ವ, ಮತಾಂತರ, ಸ್ವದೇಶಿ- ವಿದೇಶಿ, ಗೋಮಾಂಸ ಎಂದೆಲ್ಲಾ ಜನರನ್ನು ವಿಭಜಿಸಿ ಇದೀಗ ಕೃಷ್ಣ ಮಂದಿರದ ವಿಚಾರವನ್ನು ಕೆಣಕಲು ಮುಂದಾಗಿದ್ದಾರೆ. ಬಿಜೆಪಿಯ ಶಾಸಕರಿಗೆ ರಾಜ್ಯದಲ್ಲಿ ಎರಡು ವರ್ಷಗಳಿಂದ ತಮ್ಮ ಸರಕಾರ ಇಲ್ಲ ಎಂಬುದೇ ಮರೆತು ಹೋಗಿದೆ. ಹಾಗಾಗಿ ತಮ್ಮ ಅವಧಿಯಲ್ಲಿ ನಡೆಸಿದ ದೌರ್ಜನ್ಯ, ಹಲ್ಲೆಯನ್ನು ಮುಂದುವರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಕರಣದ ಬಗ್ಗೆ ಈಗಾಗಲೇ ಪಕ್ಷದ ಮುಖಂಡರು ಪೊಲೀಸ್ ಆಯುಕ್ತರ ಬಳಿ ಮಾತನಾಡಿದ್ದು, ನಮ್ಮ ನೇತೃತ್ವದ ನಿಯೋಗವೂ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಪ್ರಕರಣದ ಬಗ್ಗೆ ಸೂಕ್ತ ಕ್ರಮಕ್ಕೆ ಒತ್ತಾಯಿಸಲಿದೆ ಎಂದು ಅವರು ಹೇಳಿದರು.

ಶಾಸಕ ವೇದವ್ಯಾಸ ಕಾಮತ್ ರವರ ವರ್ತನೆ ಅವರ ಸ್ಥಾನಕ್ಕೆ ಶೋಭೆ ತರುವಂಥದ್ದಲ್ಲ. ಶಾಲೆಗಳಲ್ಲಿ ಮಕ್ಕಳನ್ನು ಹಿಡಿದು ರಾಜಕೀಯ ಮಾಡಿದವರಿಗೆ ಅಭಿವೃದ್ಧಿ ಬೇಕಾಗಿಲ್ಲ. ಜಾತಿ ಧರ್ಮಗಳ ನಡುವೆ ವಿಭಜಿಸಿ, ಹಿಂಸೆಗೆ ಪ್ರಚೋದನೆ ನೀಡಿ ಭಯ ಹುಟ್ಟಿಸುವ ಮೂಲಕ ಓಟ್ ಬ್ಯಾಂಕ್ ರಾಜಕೀಯವನ್ನು ಮಾಡಲಾಗುತ್ತಿದೆ. ಇದು ಜನರಿಗೆ ತಿಳಿಯಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಹೇಳಿದರು.

ಫರಂಗಿಪೇಟೆಯ ದಿಗಂತ್ ನಾಪತ್ತೆ ಪ್ರಕರಣವನ್ನು ಭೇದಿಸಿ ಆತನ ಕುಟುಂಬಸ್ಥರಿಗೆ ಪೊಲೀಸರು ನ್ಯಾಯ ಒದಗಿಸುವ ವಿಶ್ವಾಸವಿದ್ದು, ಅವರ ಕುಟುಂಬದ ಹೋರಾಟದ ಜತೆ ನಾವೂ ಇದ್ದೇವೆ ಎಂದು ಪದ್ಮರಾಜ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಶಾಲೆಟ್ ಪಿಂಟೋ, ವಿಶ್ವಾಸ್ ದಾಸ್, ಲಾರೆನ್ಸ್ ಡಿಸೋಜ, ಶುಭೋದಯ ಆಳ್ವ, ದಯಾನಂದ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.

ಸತ್ಯ ಪ್ರಮಾಣ ಮಾಡಲಿ

ಯಶವಂತ ಪ್ರಭು ಅವರ ಮೇಲೆ ಹಲ್ಲೆ ಪ್ರಕರಣ ನಡೆದ ವೇಳೆ ಆ ಜಾಗದಲ್ಲಿ ದಲಿತ ದೌರ್ಜನ್ಯ ಪ್ರಕರಣ ದಾಖಲಿಸಿರುವ ಮಣಿ ಎಂಬವರು ಇರಲೇ ಇಲ್ಲ. ಹಾಗಾಗಿ ಶಾಸಕರು ಹಾಗೂ ಮಣಿಯವರು ಮಾ.4ರಂದು ಪೂರ್ವಾಹ್ನ 11 ಗಂಟೆಗೆ ಕದ್ರಿ ಮುಂಜನಾಥ ದೇವಸ್ಥಾನಕ್ಕೆ ಹಾಜರಾಗಿ ಈ ಬಗ್ಗೆ ಸತ್ಯ ಪ್ರಮಾಣ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ಪ್ರಕಾಶ್ ಸಾಲ್ಯಾನ್ ಆಗ್ರಹಿಸಿದರು.


Spread the love
Subscribe
Notify of

0 Comments
Inline Feedbacks
View all comments