ಕಾನೂನು ಅರಿವಿನಿಂದ ಉತ್ತಮ ಸಮಾಜ ನಿರ್ಮಾಣ- ಜಿಲ್ಲಾ ನ್ಯಾಯಾಧೀಶ ವೆಂಕಟೇಶ್
ಉಡುಪಿ: ಕಾನೂನು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದು, ಸಂವಿಧಾನ ರೂಪಿಸಿರುವ ನಿಯಮಗಳಿಗನುಸಾರವಾಗಿ ಮಾನವರು ಮಾನವೀಯತೆಯಿಂದ ಕರ್ತವ್ಯಗಳನ್ನು ನಿರ್ವಹಿಸಬೇಕೆಂದು ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ವೆಂಕಟೇಶ್ ನಾಯ್ಕ್ ಟಿ ಅವರು ಹೇಳಿದರು.
ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಸಭಾಭವನದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ(ರಿ),ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಅಭಿಯೋಜನಾ ಇಲಾಖೆ ಉಡುಪಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ 2017 ಕಾನೂನು ಮಾಹಿತಿ ಜಾಗೃತಿ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಂವಿಧಾನವು ಆಡಳಿತದ ದೃಷ್ಟಿಯಿಂದ ಮೂರು ಅಂಗಗಳನ್ನು ಮಾಡಿದ್ದು, ನ್ಯಾಯಾಂಗದಲ್ಲಿ ಮೂಲಭೂತ ಹಕ್ಕುಗಳನ್ನು ಉಲ್ಲೇಖಿಸಿದೆ. ದೇಶದ ಪ್ರತಿಯೊಬ್ಬರ ಧಾರ್ಮಿಕ, ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಹಕ್ಕುಗಳ ಪಾಲನೆಯ ಜೊತೆಗೆ ಕಾನೂನಿನ ಅರಿವು ಮುಖ್ಯ ಎಂದು ಅವರು ಹೇಳಿದರು.
ಪ್ರಸಕ್ತ ಸಾಲಿನ ಘೋಷ ವಾಕ್ಯ ಸೇವೆಗಾಗಿ ಸಂಪರ್ಕದ ಮೂಲ ಉದ್ದೇಶ ಪ್ರತಿ ಹಳ್ಳಿಯ ಜನರಿಗೂ ಕಾನೂನಿನ ತಿಳುವಳಿಕೆ ಮೂಡಿಸುವುದಾಗಿದೆ. ಸಮಾಜದ ದುರ್ಬಲ ವರ್ಗದವರಿಗೆ ನ್ಯಾಯಾಲಯದಲ್ಲಿ ನ್ಯಾಯ ದೊರೆಯುವಂತೆ ಉಚಿತವಾದ ಕಾನೂನು ಸೇವೆಗಳನ್ನು ನೀಡಲಾಗುತ್ತಿದೆ. ಪ್ರತಿಯೊಬ್ಬರು ಕಾನೂನು ಶಿಬಿರ, ಕಾನೂನು ಸಾಕ್ಷರತಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾಹಿತಿ ಪಡೆದು ಕೊಳ್ಳಬೇಕೆಂದು ಅವರು ಹೇಳಿದರು.
ಜೀವನ ರೂಪಿಸುವ ಮಾಹಿತಿಗಳಿಂದ ಸಶಕ್ತರಾಗಬೇಕೆಂದ ಅವರು, ಸೋಷಿಯಲ್ ಮೀಡಿಯಾದಲ್ಲೇ ತಮ್ಮನ್ನು ಯುವ ಜನಾಂಗ ಕಳೆದುಕೊಳ್ಳುವ ಪರಿಣಾಮ ಅಪಾಯಕಾರಿ ಎಂದರು.
ಸೇವೆಗಾಗಿ ಸಂಪರ್ಕ ಕಾರ್ಯಕ್ರಮವು ಸಾಮಾನ್ಯ ಜನರಿಗೆ ಕಾನೂನು ಅರಿವು ಮೂಡಿಸುವುದಾಗಿದೆ. ಸಮಾಜದ ಸಂಪನ್ಮೂಲವು ಸಮಾನ ಹಂಚಿಕೆ ಆಗದೇ ಇರಲು ಕಾರಣ ಕಾನೂನಿನ ಅರಿವು ಇಲ್ಲದೇ ಇರುವುದು. ತೊಂದರೆಗಳಿಗೆ ಸಿಲುಕಿ, ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಜಿಲಾ ಕಾನೂನು ಸೇವಾ ಪ್ರಾಧಿಕಾರವು ಸದಾ ಸೇವೆಯಲ್ಲಿರುತ್ತದೆ , ಕಾನೂನಿನ ಅರಿವಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ; ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಕಾನೂನಿನ ಮಾಹಿತಿ ಮತ್ತು ಜ್ಞಾನ ಹೊಂದಿರಬೇಕು. ಉನ್ನತ ಬದುಕು ಕಟ್ಟಿಕೊಳ್ಳುವಲ್ಲಿ ಕಾನೂನಿನ ಅರಿವು ಅಷ್ಟೇ ಮುಖ್ಯ ಎಂದು ಎಂದು ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಎಂ. ಪಾಟೀಲ್ ಹೇಳಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅನುರಾಧ , ಸರ್ಕಾರಿ ಅಭಿಯೋಜಕರು ಶಾಂತಿ ಬಾೈ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ರೋಹಿಣಿ ಕೆ., ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆಯ ಉಪನಿರ್ದೇಶಕರಾದ ಗ್ರೇಸಿ ಎಲ್. ಗೊನ್ಸಾಲ್ವಿಸ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಾಗೇಶ್ ಶಾನುಬಾಗ್, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಗದೀಶ್ ಕುಮಾರ್, ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಮುಖ್ಯ ಶಿಕ್ಷಕ ವಿಶ್ವನಾಥ್ ಬಾಯರಿ, ವಕೀಲರ ಸಂಘದ ಅಧ್ಯಕ್ಷ ಹೆಚ್.ರತ್ನಾಕರ ಶೆಟ್ಟಿ ಉಪಸ್ಥಿತರಿದ್ದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಲತಾ ಸ್ವಾಗತಿಸಿದರು.