ಕಾಪು ತಾಲೂಕು ಸರ್ವೆ ಇಲಾಖೆ ಸಮಸ್ಯೆ ಸರಿಪಡಿಸಲು ಕಾಪು ಯುವ ಕಾಂಗ್ರೆಸ್ ಆಗ್ರಹ
ಉಡುಪಿ: ಹೊಸದಾಗಿ ರೂಪುಗೊಂಡ ಕಾಪು ತಾಲೂಕಿಗೆ ಸರ್ವೆ ಇಲಾಖೆ ಉಡುಪಿಯಿಂದ ಕಾಪುವಿಗೆ ವರ್ಗಾವಣೆಯಾಗಿರುವುದು ಬಹಳ ಸಂತೋಷದ ವಿಚಾರ. ಆದರೆ ಸರ್ವೆ ಇಲಾಖೆಯಿಂದಾಗಿ ಜನರಿಗೆ ಆಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸಿಗುವ ಲಕ್ಷಣಗಳು ಕಾಣುತ್ತಿಲ್ಲ ಎಂದು ಕಾಪು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅದ್ಯಕ್ಷರಾದ ಮೆಲ್ವಿನ್ ಡಿಸೋಜ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಕಾಪು ತಾಲೂಕಿಗೆ ಸಂಬಂಧಪಟ್ಟ ಗ್ರಾಮಗಳ ಸರ್ವೆ ಕಡತಗಳು ಉಡುಪಿಯಲ್ಲಿದ್ದು, ಆ ಸಂದರ್ಭದಲ್ಲಿ ಸರ್ವೆಗೆ ನೀಡಿದ ಅರ್ಜಿಗಳು ಇನ್ನೂ ಕೂಡಾ ವಿಲೇವಾರಿ ಆಗದೆ ಬಾಕಿ ಉಳಿದುಕೊಂಡಿವೆ. ಪದೇ ಪದೇ ಸಾಫ್ಟ್ವೇರ್ ಬದಲಾವಣೆಯಿಂದಾಗಿ ಜನರು ಹೈರಾಣಾಗಿದ್ದಾರೆ. ಡಿಸೆಂಬರ್ 2018 ರಲ್ಲಿ ಸರ್ವೆಗೆ ಅರ್ಜಿಕೊಟ್ಟ ಕಡತಗಳು ಸರ್ವೆಯಾಗಿ 4-5 ತಿಂಗಳಾದರೂ ನಕ್ಷೆ ಸಿಗದೆ ಜನರು ಅಲೆದಾಡುವ ಪರಿಸ್ಥಿತಿ ಉಂಟಾಗಿರುವುದು ಸರ್ವೆ ಇಲಾಖೆಯ ಕಾರ್ಯ ವೈಖರಿಯನ್ನು ಎತ್ತಿ ತೋರಿಸುತ್ತದೆ.
ಜನರು ಪದೇ ಪದೇ ಸರ್ವೆ ಇಲಾಖೆಗೆ ಅಲೆಯುವ ಪರಿಸ್ಥಿತಿ ಉದ್ಭವ ಆಗಿದೆ. ಸರ್ವೆ ಇಲಾಖೆಯ ಸಮಸ್ಯೆಗಳ ಬಗ್ಗೆ ಕಾಪು ಸರ್ವೆ ಇಲಾಖೆಯ ಅಧಿಕಾರಿಗಳಲ್ಲಿ ವಿಚಾರಿಸಿದರೆ ಅವರು ಮೇಲಾಧಿಕಾರಿಗಳ ಬಳಿ ವಿಚಾರಿಸಬೇಕು ಎಂದು ಸಬೂಬು ನೀಡುತ್ತಾರೆ. ಜನರಿಗೆ ಸರಿಯಾದ ಉತ್ತರ ಸಿಗದೆ, ಕಡತವೂ ವಿಲೇವಾರಿಯಾಗದೆ ಬಾಕಿ ಉಳಿದುಕೊಂಡಿವೆ.
ಪ್ರತಿಯೊಂದು ದಸ್ತಾವೇಜು ರಿಜಿಸ್ಟ್ರಿಗೆ ಹಾಗೂ ಭೂಪರಿವರ್ತನೆಗೆ ಸರ್ವೆ ನಕ್ಷೆ ಕಡ್ಡಾಯವಾಗಿರುವ ಈ ದಿನಗಳಲ್ಲಿ ಸರ್ವೆ ಇಲಾಖೆಯಲ್ಲಿ ನಕ್ಷೆಯು ಸಕಾಲಕ್ಕೆ ಸಿಗದೇ ಇರುವುದರಿಂದ ಜನರಿಗೆ ಅನಾನುಕೂಲವಾಗಿದೆ. ಅನೇಕ ಕಡತಗಳು ವರ್ಷಗಳಿಂದ ಬಾಕಿ ಉಳಿದುಕೊಂಡಿದ್ದು, ಜನರಿಗೆ ಯಾಕೆ ಬಾಕಿ ಇದೆಯೆಂಬ ಬಗ್ಗೆ ಸರಿಯಾದ ಉತ್ತರ ಸಿಗುತ್ತಿಲ್ಲ. ಸರ್ವೆ ಇಲಾಖೆಯ ಅಧಿಕಾರಿಗಳಿಗೆ ಎರಡು ಮೂರು ತಾಲೂಕಿನ ಜವಾಬ್ದಾರಿಯನ್ನು ನೀಡಿದ್ದು ಕಾಪುವಿಗೆ ವಾರಕ್ಕೊಮ್ಮೆ ತಿಂಗಳಿಗೊಮ್ಮೆ ಭೇಟಿ ನೀಡುವಂತಾಗಿದೆ. ಆದುದರಿಂದ ಸರ್ವೆ ಇಲಾಖೆಯ ಕೆಲಸ ಕಾರ್ಯಗಳು ಜನರಿಗೆ ಅನುಕೂಲವಾಗುವಂತೆ ಸಮರ್ಪಕವಾಗಿ ಆಗುವಲ್ಲಿ ಜಿಲ್ಲಾಡಳಿತ ಹಾಗೂ ಕ್ಷೇತ್ರದ ಶಾಸಕರು ಮುತುವರ್ಜಿ ವಹಿಸಿ ಸರ್ವೆ ಇಲಾಖೆಯ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಕಾಪು ಕ್ಷೇತ್ರ ಯುವ ಕಾಂಗ್ರೆಸ್ ಅದ್ಯಕ್ಷರಾದ ಮೆಲ್ವಿನ್ ಡಿಸೋಜ ಆಗ್ರಹಿಸಿದ್ದಾರೆ.