ಕಾಪುವಿನ ಸಾಹಸಿ ಯುವಕರಿಬ್ಬರ ಗೋ ಹಿಮಾಲಯನ್ ಬೈಕ್ ಯಾತ್ರೆಗೆ ಚಾಲನೆ

Spread the love

ಕಾಪುವಿನ ಸಾಹಸಿ ಯುವಕರಿಬ್ಬರ ಗೋ ಹಿಮಾಲಯನ್ ಬೈಕ್ ಯಾತ್ರೆಗೆ ಚಾಲನೆ

ಉಡುಪಿ: ಭಾರತ, ನೇಪಾಳ, ಭೂತಾನ್ ದೇಶಗಳ ಜನಜೀವನ, ಸಂಸ್ಕøತಿ, ಆಹಾರ ಪದ್ಧತಿಗಳ ಬಗ್ಗೆ ಆಧ್ಯಯನ ನಡೆಸಲು ಶುಕ್ರವಾರ ಬೆಳಿಗ್ಗೆ ಕಾಪುವಿನ ಖ್ಯಾತ ಛಾಯಾಗ್ರಾಹಕ ಸಚಿನ್ ಶೆಟ್ಟಿ ಮತ್ತು ಆತನ ಮಿತ್ರ ಅಭಿಷೇಕ್ ಶೆಟ್ಟಿ ಜತೆಗೂಡಿ ಗೋ ಹಿಮಾಲಯನ್ ಎಂಬ ಬೈಕ್ ಯಾತ್ರೆಯನ್ನು ಕಾಪುವಿನ ಹೊಸ ಮಾರಿಯಮ್ಮ ದೇವಸ್ಥಾನದ ಎದುರಿನಲ್ಲಿ ಚಾಲನೆ ನೀಡಿದರು.

ಶಾಸಕ ಲಾಲಾಜಿ ಮೆಂಡನ್ ಹೂ ಹಾರ ಹಾಕಿ ಶುಭಹಾರೈಸಿ ಬೈಕ್ ಯಾತ್ರೆಗೆ ಚಾಲನೆ ನೀಡಿದರು. ಕಾಪು ಎಸ್ಐ ನಿತ್ಯಾನಂದ ಗೌಡ, ಸಮಾಜ ಸೇವಕ ಲೀಲಾಧರ ಶೆಟ್ಟಿ ಸೌತ್ ಕೆನರಾ ಫೋಟೋಗ್ರಾಫರಸ್ ಅಸೋಸಿಯೇಶನ್ ಕಾಪು ವಲಯದ ಅಧ್ಯಕ್ಷ ಉದಯ ಪೂಜಾರಿ ಹಾಗೂ ಪದಾಧಿಕಾರಿಗಳು, ಯುವಕರಿಬ್ಬರ ಪೋಷಕರು, ಹಾಗೂ ನಾಗರೀಕರು ಯುವಕರ ಸಾಹಸ ಯಾತ್ರೆಗೆ ಶುಭಹಾರೈಸಿದರು.

ಬೆಳಗ್ಗೆ 7ಗಂಟೆಗೆ ಹೊರಟ ಈ ಬೈಕ್ ಯಾತ್ರೆಯು ಇಂದು ಮಹಾರಾಷ್ಟ್ರದ ಸತಾರಾ ಮೂಲಕ ಮುಂಬೈ ತಲುಪಲಿದ್ದಾರೆ. ಆ ಬಳಿಕ ಮಧ್ಯಪ್ರದೇಶದ ಇಂದೂರ್, ಉತ್ತರ ಪ್ರದೇಶದ ಜಾನ್ಸಿ, ಲಕ್ನೌ, ನೇಪಾಳದ ಸನೌಲಿ, ಕಠ್ಮಂಡು, ಭೂತಾನ್ನ ತಿಂಪು, ಅಸ್ಸಾಂನ ಗುಹಾಟಿ, ನಾಗಲ್ಯಾಂಡ್ನ ಕೋಹಿಮಾ, ಮಣಿಪುರದ ಇಂಫಾಲ್, ಮೇಘಾಲಯದ ಶಿಲಾಂಗ್, ಪಶ್ಚಿಮ ಬಂಗಾಲದ ಸಿಲಿಗುರಿ, ಕೋಲ್ಕತ್ತಾ, ಒರಿಸ್ಸಾದ ಪುರಿ, ಆಂಧ್ಯಪ್ರದೇಶದ ವಿಶಾಖಪಟ್ಟಣ, ವಿಜಯವಾಡ, ರಾಜ್ಯದ ಬೆಂಗಳೂರು, ಮಂಗಳೂರು ಮೂಲಕ ಕಾಪು ತಲುಪಲಿದ್ದಾರೆ. ಒಟ್ಟು 40 ದಿನಗಳ ಈ ಯಾತ್ರೆಯಲ್ಲಿ 13,560 ಕಿಮೀ. ಕ್ರಮಿಸಲಿದ್ದಾರೆ.

ಸಚಿನ್ ರಾಯಲ್ ಎನ್ಫೀಲ್ಡ್ ಹಿಮಾಲಯನ್, ಅಭಿಷೇಕ್ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಬೈಕ್ಗಳಲ್ಲಿ ಸಂಚರಿಸಿದರು. ಕಳೆದ ಬಾರಿ ಸಚಿನ್ ಶೆಟ್ಟಿ ಒಬ್ಬಂಟಿಯಾಗಿ ಯಶಸ್ವಿ ಲಡಾಕ್ ಯಾತ್ರೆ ಕೈಗೊಂಡಿದ್ದು, ಈ ಬಾರಿ ಅವರೊಂದಿಗೆ ಅವರ ಬಾಲ್ಯದ ಗೆಳೆಯ ಅಭಿಷೇಕ್ ಶೆಟ್ಟಿ ಸಾಥ್ ನೀಡುತ್ತಿದ್ದಾರೆ. ಭೂತಾನ್ ಹಾಗೂ ನೇಪಾಳ ದೇಶಗಳ ಸಂಸ್ಕøತಿ, ಆಹಾರ ಪದ್ಧತಿ, ಜನಜೀವನದ ಬಗ್ಗೆ ವೀಡಿಯೋ ಚಿತ್ರೀಕರಣಗೊಳಿಸಲಿದ್ದಾರೆ. ಅಂತೆಯೇ ಅವರು ತೆರಳುತ್ತಿರುವ ಎಲ್ಲಾ ಪ್ರದೇಶಗಳ ಚಿತ್ರೀಕರಣ ಮಾಡಲಿದ್ದರೆ.

ಕಳೆದ ವರ್ಷ ಸಾಕ್ಷ್ಯ ಚಿತ್ರ ನಿರ್ಮಿಸಲು ಸಚಿನ್ ಶೆಟ್ಟಿ ಏಕಾಂಗಿಯಾಗಿ ವಿವಿಧ ರಾಜ್ಯಗಳ ಜೀವನ ಪದ್ಧತಿ ಹಾಗೂ ಆಹಾರ ಪದ್ಧತಿ ಬಗ್ಗೆ ಕುರಿತ ಅಧ್ಯಯನ ನಡೆಸಲು ಲೈಟ್ಸ್ ಕೆಮರಾ ಲಡಾಕ್ ಟೂರ್ ಎಂಬ ಹೆಸರಿನಲ್ಲಿ 11,000 ಕಿಮೀ ಲಡಾಕ್ವರೆಗೆ ಬೈಕ್ ಯಾತ್ರೆ ನಡೆಸಿ ದೇಶಾಧ್ಯಂತ ಗಮನಸೆಳೆದಿದ್ದರು. ಇದೀಗ ಆತನ ಬಾಲ್ಯದ ಸ್ನೇಹಿತ ಅಭಿಷೇಕ್ ಶೆಟ್ಟಿ ಸಚಿನ್ ಶೆಟ್ಟಿ ಅವರೊಂದಿಗಿದ್ದಾರೆ. ಅದ್ದರಿಂದ ಇನ್ನಷ್ಟು ವಿಷಯ ಸಂಗ್ರಹಣೆ ಮಾಡಲು ಅನುಕೂಲ ಆಗಲಿದೆ.

ಸಚಿನ್ ಶೆಟ್ಟಿಯವರು ಅತ್ಯತ್ತಮ ಛಾಯಾಗ್ರಾಹಕನಾಗಿದ್ದು, ಸೌತ್ಕೆನರಾ ಫೊಟೊಗ್ರಾಫರ್ಸ್ ಎಸೋಶಿಯೇಶನ್ನ ಕಾಪು ವಲಯದ ಸಕ್ರಿಯ ಸದಸ್ಯನಾಗಿದ್ದಾನೆ. ಕನ್ನಡ ಹಾಗೂ ತುಳು ಚಲನ ಚಿತ್ರಕ್ಕೂ ಛಾಯಾಗ್ರಹಣ ಮಾಡಿದ್ದು, ಇತ್ತೀಚೆಗೆ ಬಿಡುಗಡೆ ಆದ ಅಮ್ಮೆರ್ ಪೋಲಿಸ್ ಚಿತ್ರ ಅವರಿಗೆ ಉತ್ತಮ ಹೆಸರು ತಂದು ಕೊಟ್ಟದೆ. ಹವ್ಯಾಸಿ ಬೈಕ್ ರೈಡರ್ ಆಗಿದ್ದು, ಹಲವಾರು ಸಂಘ ಸಂಸ್ಥೆಗಳಲ್ಲಿಯೂ ಸಚಿನ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಶಾಸಕ ಲಾಲಾಜಿ ಮೆಂಡನ್ ಮಾತನಾಡಿ, ಕಾಪುವಿನ ಈ ಇಬ್ಬರು ಯುವಕರ ಸಾಧನೆ ರಾಷ್ಟ್ರಕ್ಕೆ ಮಾದರಿಯಾಗಲಿ. ಈ ಯಾತ್ರೆಯ ಮೂಲಕ ಇನ್ನಷ್ಟು ಯುವಕರಿಗೆ ಪ್ರೇರೇಪಣೆಯಾಗಬೇಕು. ಈ ಪ್ರಯಾಣ ಸುಖಕರವಾಗಲಿ ಎಂದು ಹಾರೈಸಿದರು.

ಬೈಕ್ ಯಾತ್ರೆಗೆ ಚಾಲನೆ ನಿಡುವ ಸಂದರ್ಭ ಸ್ಥಳೀಯ ಸಮಾಜ ಸೇವಕ ಹಾಗೂ ರಂಗತರಂಗ ಸಂಸ್ಥೆಯ ನಿರ್ದೇಶಕ ಕರಂದಾಡಿ ಲೀಲಾಧರ ಶೆಟ್ಟಿ ಮಾತನಾಡಿ, ಈ ಭಾರಿ ಮೂರು ದೇಶಗಳ ಸಂಸ್ಕøತಿ, ಆಹಾರ ಪದ್ಧತಿ, ಜನಜೀವನದ ಬಗ್ಗೆ ವೀಡಿಯೋ ಚಿತ್ರೀಕರಣಗೊಳಿಸಲಿದ್ದಾರೆ ಅವರ ಪ್ರಯಾಣ ನಿರ್ವಿಙವಾಗಿ ಸಾಗಲಿ ಎಂದರು.

ಈ ಸಂದರ್ಭ ಸೌತ್ಕೆನರಾ ಫೊಟೊಗ್ರಾಫರ್ಸ್ ಎಸೋಶಿಯೇಶನ್ನ ಕಾಪು ವಲಯದ ಅಧ್ಯಕ್ಷ ಉದಯ ಪೂಜಾರಿ ಮುಂಡ್ಕೂರು, ಕಾರ್ಯದರ್ಶಿ ವೀರೇಂದ್ರ ಶಿರ್ವ, ಕೋಶಾಧಿಕಾರಿ ಸಂತೋಷ್ ಕಾಪು, ಶ್ರೀಧರ ಶೆಟ್ಟಿಗಾರ, ಪ್ರವೀಣ್ ಕುರ್ಕಾಲು, ಸಚಿನ್ ಉಚ್ಚಿಲ, ರವಿ ಕಟಪಾಡಿ ಮತ್ತು ಸದಸ್ಯರು, ಸಚಿನ್ ಹಾಗೂ ಅಬಿಷೇಕ್ ಕುಟುಂಬಿಕರು, ಮಿತ್ರರು ಹಾಗೂ ಅಭಿಮಾನಿಗಳು ಉಪಸ್ತಿತರಿದ್ದರು.


Spread the love