ಕಾರವಾರದಲ್ಲಿ ಕಾಳಿ ನದಿ ಸೇತುವೆ ಕುಸಿತ – ಲಾರಿ ಪಲ್ಟಿ, ಚಾಲಕನ ರಕ್ಷಣೆ 

Spread the love

ಕಾರವಾರದಲ್ಲಿ ಕಾಳಿ ನದಿ ಸೇತುವೆ ಕುಸಿತ – ಲಾರಿ ಪಲ್ಟಿ, ಚಾಲಕನ ರಕ್ಷಣೆ 

ಕಾರವಾರ (ಉತ್ತರ ಕನ್ನಡ): ಇತ್ತೀಚೆಗಷ್ಟೇ, ಅತೀವ ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿರೂರು ಗುಡ್ಡ ಕುಸಿದ ಘಟನೆ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಮತ್ತೊಂದು ಅವಗಢ ಸಂಭವಿಸಿದೆ.ಕಾರವಾರದ ಮೂಲಕ ಸಾಗುವ ರಾಷ್ಟ್ರೀಯ ಹೆದ್ದಾರಿ66ರಲ್ಲಿ ಕಾಳಿ ನದಿಗೆ ಅಡ್ಡವಾಗಿ ನಿರ್ಮಿಸಲಾಗಿದ್ದ ಸೇತುವೆ ಆ. 6ರ ಮಧ್ಯರಾತ್ರಿ ರಾತ್ರಿ ವೇಳೆ ಕುಸಿದಿಗೆ. ಈ ಘಟನೆಯಲ್ಲಿ ಲಾರಿಯೊಂದು ಚಾಲಕನ ಸಮೇತ ನದಿಗೆ ಬಿದ್ದಿದೆ.

ಕಾರವಾರ ಗೋವಾ ಸಂಪರ್ಕ ಮಾಡುವ ನಗರದ ಕೋಡಿಭಾಗ್ ಬಳಿ ಇರುವ ಈ ಸೇತುವೆ ಬುಧವಾರ ತಡರಾತ್ರಿ ಸುಮಾರು 12.30 ರ ವೇಳೆ ಕುಸಿದು ಬಿದ್ದಿದೆ. ಫಿಲ್ಲರ್ ಕಂಬಗಳ ನಡುವೆ ಸೇತುವೆ ಮೂರ್ನಾಲ್ಕು ಕಡೆ ತುಂಡಾಗಿ ನದಿಗೆ ಬಿದ್ದಿದ್ದು, ಇದೇ ವೇಳೆ ಗೋವಾದಿಂದ ಕಾರವಾರ ಕಡೆಗೆ ಆಗಮಿಸುತ್ತಿದ್ದ ಟ್ರಕ್ ನದಿಗೆ ಬಿದ್ದಿದ್ದು, ತಕ್ಷಣ ಮೀನುಗಾರರು ಹಾಗೂ ಪೋಲಿಸರು ಲಾರಿ ಚಾಲಕ ಕೇರಳ ಮೂಲದ ರಾಧಾಕೃಷ್ಣ ನಾಳಾ ಸ್ವಾಮಿ (37) ಎಂಬುವವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇನ್ನು ಘಟನೆ ಸಂಭವಿಸುವ ವೇಳೆ ಬೈಕ್ ಹಾಗೂ ಕಾರು ಕೂಡ ಇದೇ ಸೇತುವೆ ಮೇಲೆ ಸಂಚಾರ ಮಾಡುತ್ತಿತ್ತು ಎನ್ನಲಾಗಿದ್ದು ಅವರು ಮುಂದೆ ಸಾಗಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಟ್ರಕ್ ನೀರಿನಲ್ಲಿ ಬಿದ್ದಿದ್ದು ಮತ್ತೆ ಯಾವುದಾದರೂ ವಾಹನ ಬಿದ್ದಿರುವ ಬಗ್ಗೆ ಸ್ಥಳೀಯ ಮೀನುಗಾರರ ಜೊತೆ ಪೊಲೀಸರು ದೋಣಿಗಳ ಮೂಲಕ ಹುಡುಕಾಟ ನಡೆಸಿದ್ದಾರೆ.

ಚತುಷ್ಪಥ ರಾಷ್ಟ್ರೀಯ ಹೆದ್ದಾರಿ-66ರಲ್ಲಿನ ಕಾಳಿ ನದಿಗೆ ಎರಡು ಸೇತುವೆಗಳಿವೆ. ಗೋವಾ ಕಡೆಯಿಂದ ಕಾರವಾರದತ್ತ ವಾಹನಗಳು ಸಂಚರಿಸುತ್ತಿದ್ದ ಸೇತುವೆಯು ಮುರಿದು ಬಿದ್ದಿದೆ.

ಈ ಸೇತುವೆಯನ್ನು 1983ರಲ್ಲಿ ನಿರ್ಮಿಸಲಾಗಿತ್ತು. 2009ರಲ್ಲಿ ಸೇತುವೆಯ ಸಂಪೂರ್ಣ ದುರಸ್ತಿಗೆ ಪ್ರಯತ್ನಿಸಲಾಗಿತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. ಭಾಗಶಃ ಮಾತ್ರ ದುರಸ್ತಿ ನಡೆಸಲಾಗಿತ್ತು‌.

2018ರಲ್ಲಿ ಇದೇ ಸೇತುವೆ ಪಕ್ಕದಲ್ಲಿ ಇನ್ನೊಂದು ಸೇತುವೆಯನ್ನು ನಿರ್ಮಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಸದ್ಯ ಹೊಸ ಸೇತುವೆಯ ಮೇಲೆ ಸಂಚಾರ ನಿರ್ಬಂಧಿಸಿ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಸೂಚಿಸಿದ್ದಾರೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರವಾರದಿಂದ ಗೋವಾ ಕಡೆಗೆ ವಾಹನ ಸಂಚಾರ ಸ್ಥಗಿತಗೊಂಡಿದೆ.

ಸುದ್ದಿ ತಿಳಿದ ಕೂಡಲೇ ಮಧ್ಯರಾತ್ರಿ ಸ್ಥಳಕ್ಕೆ ಬಂದ ಶಾಸಕ ಸತೀಶ್ ಸೈಲ್ ಘಟನೆ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ. ಸ್ಥಳದಲ್ಲಿ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ, ಎಸ್ಪಿ ಎಮ್.ನಾರಾಯಣ ಸೇರಿ ಅಧಿಕಾರಿಗಳ ತಂಡ ಬೀಡುಬಿಟ್ಟಿದ್ದು, ಇತರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.


Spread the love