ಕಾರ್ಕಡ ವಿಜಯ ಕಾರಂತ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ
ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಾರ್ಕಡ ಕಡಿದ ಹೆದ್ದಾರಿ ಎಂಬಲ್ಲಿ 2015ರ ಫೆಬ್ರವರಿ 2ರಂದು ನಡೆದ ಕೊಲೆ ಪ್ರಕರಣ ಆರೋಪಿಗೆ 2 ವರ್ಷದ ಬಳಿಕ ಬುಧವಾರದಂದು ಕುಂದಾಪುರ ನ್ಯಾಯಲಯವು ಜೀವಾವಧಿ ಕಾರಾಗೃಹ ಶಿಕ್ಷೆ ವಿಧಿಸಿದೆ. ತನ್ನ ಸ್ನೇಹಿತ ವಿಜಯ ಕಾರಂತ(31)ನನ್ನು ಅದೇ ಊರಿನ ಶರತ್ ಪೂಜಾರಿ ಇರಿದು ಕೊಲೆ ಮಾಡಿದ್ದ ಪ್ರಕರಣ ಇದಾಗಿದೆ.
ಸಾಲಿಗ್ರಾಮ ಸಮೀಪದ ಕಾರ್ಕಡ ಕಡಿದ ಹೆದ್ದಾರಿ ನಿವಾಸಿ ವಿಜಯ್ ಕಾರಂತ (31) 2017 ಫೆಬ್ರವರಿ 2 ಸೋಮವಾರದಂದು ಅನುಮಾನಸ್ಪದವಾಗಿ ಮೃತಪಟ್ಟಿದ್ದ. ಕೊಲೆಯಾದ ದಿನ ಮಧ್ಯಾಹ್ನ ವಿಜಯ ಕಾರಂತ ತನ್ನ ಮನೆಯಲ್ಲಿ ಗಂಭೀರವಾಗಿ ಗಾಯಗೊಂಡು ಬಿದ್ದಿದ್ದ, ಇದನ್ನು ಗಮನಿಸಿದ್ದ ಸ್ಥಳೀಯರು ಆತನನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ವಿಜಯ ಕಾರಂತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ. ವಿಜಯ್ ಕಾರಂತ ಎದೆಯ ಎಡ ಭಾಗದ ಪಕ್ಕೆಲುಬಿನ ಪಕ್ಕದಲ್ಲಿ ಚಾಕುವಿನಿಂದ ತಿವಿದ ರೀತಿಯ ಗಾಯವಾಗಿತ್ತು, ಇದೇ ವಿಚಾರವಾಗಿ ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದರು.
ಬ್ರಹ್ಮಾವರ ವೃತ್ತ ನಿರೀಕ್ಷಕ ಅರುಣ್ ಬಿ.ನಾಯಕ್, ಕೋಟ ಠಾಣಾಧಿಕಾರಿ ಕೆ.ಆರ್.ನಾಯಕ್ ಅವರುಗಳು ಈ ಪ್ರಕರಣವನ್ನು ಕೈ ಗೆತ್ತಿಕೊಂಡು ತನಿಖೆ ಆರಂಭಿಸಿದಾಗ ನೆರೆಮನೆಯ ಶರತ್ ಎನ್ನುವ ಸ್ನೇಹಿತನ ಜೊತೆಗೆ ವಿಜಯ್ ಕಾರಂತಗೆ ಜಗಳವಾಗಿತ್ತು ಎನ್ನುವ ವಿಚಾರ ಹೊರಬಿದ್ದಿತ್ತು. ವಿಜಯ್ ಕಾರಂತನ ಹೆಂಡತಿಯ ಜೊತೆಗೆ ಅಕ್ರಮ ಸಂಬಂಧವಿರುವ ವಿಚಾರದ ಹಿನ್ನಲೆಯಲ್ಲಿ ಇರ್ವರ ನಡುವೆ ಜಗಳವೇರ್ಪಟ್ಟಿದ್ದು, ವಿಷಯ ಹೊರಗೆ ಹೋಗುತ್ತದೆ ಎನ್ನುವ ಭಯದಲ್ಲಿ ಶರತ್, ವಿಜಯ್ ಕಾರಂತಕ್ಕೆ ಇರಿದಿದ್ದನು. ಹಲ್ಲೆಯ ಅನಂತರ ಪ್ರಕರಣವನ್ನು ಮುಚ್ಚಿಹಾಕುವ ತಂತ್ರ ನಡೆದಿದ್ದು, ಹಲ್ಲೆ ನಡೆಸಿದ ಶರತ್ ಖುದ್ದಾಗಿ ಬಂದು ವಿಜಯ್ ಅಸ್ವಸ್ಥನಾಗಿದ್ದಾನೆ ಎಂದು ಸ್ಥಳೀಯರಿಗೆ ತಿಳಿಸಿದ್ದನು. ಆರಂಭದಲ್ಲಿ ಸ್ಥಳೀಯರು ವಿಜಯ ಕಾರಂತ ಮದ್ಯಪಾನದಿಂದ ಅಸ್ವಸ್ಥನಾಗಿದ್ದ ಎಂದು ಅನುಮಾನಿಸಿದ್ದರು. ಅನಂತರ ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸುವಾಗ ಘಟನೆ ಬೆಳಕಿಗೆ ಬಂದಿತ್ತು. ಕೃತ್ಯ ನಡೆಸಿದ ಬಳಿಕ ವಿಚಲಿತನಾಗದ ಶರತ್, ಸ್ಥಳೀಯರು ಹಾಗೂ ಪೆÇಲೀಸರಿಗೆ ಘಟನೆಯ ಕುರಿತು ತಪ್ಪು ಮಾಹಿತಿಗಳನ್ನು ನೀಡುತ್ತ ಪ್ರಕರಣವನ್ನು ಹಾದಿ ತಪ್ಪಿಸಲು ಪ್ರಯತ್ನಿಸಿದ್ದ, ಬಳಿಕ ಪೊಲೀಸ್ರು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಾಯಿ ಬಿಟ್ಟಿದ್ದನು.
ಈ ಕುರಿತು ಎರಡು ವರ್ಷಗಳಿಂದ ಕುಂದಾಪುರ ನ್ಯಾಯಾಲಯದಲ್ಲಿ ವಾದ ವಿವಾದಗಳು ನಡೆದಿದ್ದು, ಬುಧವಾರದಂದು ನ್ಯಾಯಾಧೀಶ ಪ್ರಕಾಶ್ ಕೆ. ಅವರು ಸೆಕ್ಷನ್ 302ರ ಅಡಿಯಲ್ಲಿ ಕೊಲೆ ಮಾಡಿರುವುದು ಸಾಬೀತಾದ ಹಿನ್ನಲೆಯಲ್ಲಿ ಜೀವಾವಧಿ ಕಾರಾಗ್ರಹ ಶಿಕ್ಷೆ 40 ಸಾವಿರ ರೂಪಾಯಿ ದಂಡ ಮತ್ತು ಸೆಕ್ಷನ್ 201ನಂತೆ ಸಾಕ್ಷಿ ನಾಶಕ್ಕೆ ಯತ್ನಿಸಿದ ಹಿನ್ನಲೆಯಲ್ಲಿ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ 10 ದಂಡ ವಿಧಿಸಿದ್ದಾರೆ. ಆರೋಪಿಯ ವಿರುದ್ಧ ಸರಕಾರಿ ಅಭೀಯೇಚಕರಾಗಿ ಶ್ರೀನಿವಾಸ ಹೆಗ್ಡೆ ಆ ಬಳಿಕ ಹರೀಶ್ಚಂದ್ರ ಉದ್ಯಾವರ ವಾದಿಸಿದ್ದರು.