ಕಾರ್ಕಳ: ಕೋವಿಡ್ -19 ಕರ್ತವ್ಯ ನಿರತ ಸಿಬಂದಿಯೊಂದಿಗೆ ಅನುಚಿತ ವರ್ತನೆ – ಪ್ರಕರಣ ದಾಖಲು
ಕಾರ್ಕಳ: ಕೋವಿಡ್ -19 ಕರ್ತವ್ಯ ನಿರತ ಸಿಬಂದಿಯೋರ್ವರಿಗೆ ವ್ಯಕ್ತಿಯೋರ್ವರು ಬೆದರಿಕೆಯೊಡ್ಡಿ ಸಾರ್ವಜನಿಕ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಂದ್ರಶೇಖರ್ (50) ಎಂಬವರು ಕಾರ್ಕಳ ಪುರಸಭೆಯ ಕರವಸೂಲಿಗಾರರಾಗಿ ಕರ್ತವ್ಯ ನಿರ್ವಹಿಕೊಂಡಿದ್ದು, ಸದ್ರಿಯವರಿಗೆ ಮುಖ್ಯಾಧಿಕಾರಿಯವರ ಆದೇಶದಂತೆ ಪುರಸಭಾ ವ್ಯಾಪ್ತಿಯಲ್ಲಿ ಅಗೋಸ್ತ್ 20 ರಿಂದ ಕೋವಿಡ್ -19 ಕ್ವಾರಂಟೈನ್ ವಾಚ್ ಆಪ್ ನಲ್ಲಿ ಕೋರೊನಾ ಪಾಸಿಟಿವ್ ಪ್ರಕರಣ, ಹೊರರಾಜ್ಯದಿಂದ ಬಂದ ಸಾರ್ವಜನಿಕರು ಮತ್ತು ಪ್ರಾಥಮಿಕ ಸಂಪರ್ಕ ಹೊಂದಿರುವ ವ್ಯಕ್ತಿಗಳ ಹೋಂ ಕ್ವಾರಂಟೈನ್ ಮನೆಗಳಿಗೆ ದಿನಂಪ್ರತಿ ಭೇಟಿ ನೀಡಿ ಫೋಟೋಗಳನ್ನು ತೆಗೆದು ಆಪ್ಲೋಡ್ ಮಾಡುವ ಕೆಲಸ ಮಾಡುತ್ತಿದ್ದರು.
ಅಗೋಸ್ತ್ 30ರಂದು ಬೆಳಿಗ್ಗೆ ಕಾರ್ಕಳ ಪುರ ಸಭಾ ವ್ಯಾಪ್ತಿಯ ಸತ್ಯನಾರಾಯಣ ನಗರದ ಕ್ವಾರಂಟೈನ್ ನಲ್ಲಿರುವ ಪ್ರಶಾಂತ್ ದೇವಾಡಿಗ, ನಿರ್ಮಲ ಮತ್ತು ಲಕ್ಷ್ಮೀ ದೇವಾಡಿಗ ಎಂಬವರ ಮನೆಗೆ ಹೋದಾಗ, ಪ್ರಶಾಂತ್ ದೇವಾಡಿಗ ಅವರು ಚಂದ್ರಶೇಖರ್ ಅವರಿಗೆ ಕೆಟ್ಟ ಭಾಷೆಯಲ್ಲಿ ನಿಂದಿಸಿ, ಹಲ್ಲೆ ನಡೆಸಿ ಸಾರ್ವಜನಿಕ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ಚಂದ್ರಶೇಖರ್ ಅವರು ಕಾರ್ಕಳ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಚಂದ್ರಶೇಖರ್ ಅವರು ನೀಡಿದ ದೂರಿನಂತೆ ಕಾರ್ಕಳ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.