ಕಾರ್ಕಳ ಕ್ವಾರಂಟೈನ್ ಕೇಂದ್ರದಲ್ಲಿ ಬಿಜೆಪಿಯ ಯುವ ಮೋರ್ಚಾ ಅಧ್ಯಕ್ಷರ ಮೋಜು ಮಸ್ತಿ – ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್ ಖಂಡನೆ
ಕಾರ್ಕಳ: ಕಾರ್ಕಳ ಮುರತ್ತಂಗಡಿಯ ಪ್ರಕೃತಿ ಶಾಲೆಯನ್ನು ಕ್ವಾರಂಟೈನ್ ಕೇಂದ್ರವನ್ನಾಗಿ ಮಾಡಲಾಗಿದ್ದು ಅಲ್ಲಿ ಕಾರ್ಕಳ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮತ್ತು ಇತರರು ಸೇರಿ ಹುಟ್ಟು ಹಬ್ಬ ಆಚರಣೆ ಮಾಡಿರುವುದನ್ನು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಮ್ಯಾಂಗಲೋರಿಯನ್ ಜೊತೆ ಮಾತನಾಡಿದ ವಿಶ್ವಾಸ್ ಅಮೀನ್ ಅವರು ಶಾಲೆಯಲ್ಲಿ ಕ್ವಾರಂಟೈನ್ ಕೆಂದ್ರದಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ, ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸಂಗಡಿಗರು ಸೇರಿ ಹುಟ್ಟು ಹಬ್ಬ ಆಚರಣೆ ಮಾಡಿದ್ದಾರೆ. ಮಹಾರಾಷ್ಟ್ರದಿಂದ ಬಂದಿರುವ ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡಿರುವ ಸ್ಥಳದಲ್ಲಿ ಯಾವುದೇ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಮಾಸ್ಕ್ ಧರಿಸದೆ ಈ ರೀತಿಯ ಮೋಜು ಮಸ್ತಿ ಸರಿಯಲ್ಲ. ಜಿಲ್ಲೆಯಲ್ಲಿ ಈಗಾಗಲೇ ಕೊರೋನಾ ಪ್ರಕರಣಗಳು ಏರುತ್ತಿದ್ದು, ಕ್ವಾರಂಟೈನ್ ಕೇಂದ್ರದಿಂದ ಮನೆಗೆ ಹೋದವರಲ್ಲಿ ಸಹ ಪಾಸಿಟಿವ್ ದೃಢಪಡುತ್ತಿರುವ ಸಮಯದಲ್ಲಿ ಈ ರೀತಿಯ ಬೇಜವಾಬ್ದಾರಿ ವರ್ತನೆಯನ್ನು ಕಾರ್ಕಳದ ಆಡಳಿತ ಪಕ್ಷದ ಕಾರ್ಯಕರ್ತರು ತೋರಿಸಿರುವುದು ಬೇಸರದ ವಿಚಾರವಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ತನಿಖೆ ನಡೆಸಬೇಕು ಮುಂದೆ ಇಂತಹ ಘಟನೆಗಳು ಪುನರಾವರ್ತೆನೆ ಆಗಬಾರದು ಎಂದು ಅವರು ಆಗ್ರಹಿಸಿದ್ದಾರೆ.
ಯಾವುದೇ ಸಾಮಾಜಿಕ ಅಂತರವಿಲ್ಲದೆ ಯಾವುದೇ ಸುರಕ್ಷತಾ ಮುಂಜಾಗ್ರತೆ ಇಲ್ಲದೆ ಆಚರಿಸಿದ ಈ ಹುಟ್ಟುಹಬ್ಬದ ಫೋಟೊ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದರಿಂದ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.