ಕಾರ್ಕಳ: ಹಿಂಜಾವೇ ಮುಖಂಡ ಶ್ರೀಕಾಂತ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲು

Spread the love

ಕಾರ್ಕಳ: ಹಿಂಜಾವೇ ಮುಖಂಡ ಶ್ರೀಕಾಂತ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲು

ಕಾರ್ಕಳ: ಕಾರ್ಕಳದ ಲಕ್ಷ ದೀಪೋತ್ಸವದಲ್ಲಿ ಹಿಂದುಗಳಿಗೆ ಮಾತ್ರ ಅಂಗಡಿ ನಡೆಸಲು ಅವಕಾಶ ನೀಡುವ ವಿಚಾರದಲ್ಲಿ ಅಶಾಂತಿ ಸೃಷ್ಠಿಸುವ ವಿಡಿಯೋ ಚಿತ್ರೀಕರಿಸಿ ವೈರಲ್ ಮಾಡಿರುವ ಹಿಂದೂ ಜಾಗರಣಾ ವೇದಿಕೆಯ ಮುಖಂಡ ಶ್ರೀಕಾಂತ್ ಶೆಟ್ಟಿ ವಿರುದ್ಧ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.

ನ.19ರಂದು ಮತ್ತು 20ರಂದು ಕಾರ್ಕಳದಲ್ಲಿ ನಡೆಯುವ ಲಕ್ಷ ದೀಪೋತ್ಸವದಲ್ಲಿ ಹಿಂದುಗಳಿಗೆ ಮಾತ್ರ ಅಂಗಡಿ ನಡೆಸಲು ಜಾಗ ಕೊಡಿ ಎಂದು ಕಾರ್ಕಳ ಪೇಟೆಯಲ್ಲಿನ ಅಂಗಡಿಯವರಲ್ಲಿ ಕಾರ್ಕಳದ ರಮೇಶ್ ಶೆಟ್ಟಿ ಮತ್ತು ಬಂಟ್ವಾಳ ಕಡೆಯ 2-3 ಮಂದಿ ನ.12ರಂದು ಹೇಳಿಕೊಂಡು ಸ್ಥಳೀಯವಾಗಿ ಪ್ರಚಾರ ಮಾಡಿದ್ದು, ಈ ಮೂಲಕ ಇವರು ಬೇರೆ ಬೇರೆ ಸಮುದಾಯ ಗಳ ಮಧ್ಯೆ ವೈರುತ್ವ, ಧ್ವೇಷ ಹಾಗೂ ವೈಮನಸ್ಸು ಭಾವನೆಗಳನ್ನು ಉಂಟು ಮಾಡಿ ಅಶಾಂತಿ ಸೃಷ್ಠಿಸಲು ಪ್ರಯತ್ನಿಸಿರುವು ದಾಗಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿತ್ತು.

‘ಹಿಂದೂ ಜಾಗರಣ ವೇದಿಕೆಯ ಈ ವಿಚಾರಕ್ಕೆ ಶ್ರೀವೆಂಕಟರಮಣ ದೇವಸ್ಥಾನ ಆಡಳಿತ ಮಂಡಳಿಯವರು ಹಾಗೂ ಅಂಗಡಿ ಮಾಲಿಕರು ಸ್ಪಂದನೆ ನೀಡದೇ ಇದ್ದು, ಆದುದರಿಂದ ನ.19ರಂದು ನಡೆದ ದೇವಸ್ಥಾನದ ಲಕ್ಷ ದೀಪೋತ್ಸವವು ವಿಜೃಂಭಣೆ ಯಿಂದ ನಡೆದಿದೆ. ಇದರಲ್ಲಿ ಎಲ್ಲಾ ಜಾತಿ, ಧರ್ಮದವರು ಭಾಗವಹಿಸಿ ವ್ಯವಹಾರ ನಡೆಸಿದ್ದರು ಎಂದು ಉಡುಪಿ ಎಸ್ಪಿ ಡಾ.ಕೆ.ಅರುಣ್ ತಿಳಿಸಿದ್ದಾರೆ.

ನ.20ರಂದು ಕರ್ನಾಟಕ ರಾಜ್ಯ ಹಿಂದೂ ಜಾತ್ರ ವ್ಯಾಪಾರಸ್ಥರ ಸಂಘ, ಬಂಟ್ವಾಳ ಎಸ್ಪಿ ಮನವಿ ಸಲ್ಲಿಸಿ, ಕಾರ್ಕಳ ಲಕ್ಷ ದೀಪೋತ್ಸವ ಸಂದರ್ಭದಲ್ಲಿ, ನಮ್ಮ ಕೆಲವು ವ್ಯಾಪಾರಸ್ಥರು ದೊಡ್ಡ ಅಂಗಡಿಗಳನ್ನು ಹಾಕುತ್ತಿದ್ದು, ಅದನ್ನು ವಿಭಾಗಿಸಿ ಹೆಚ್ಚು ವ್ಯಾಪಾರ ಮಾಡುವ ಉದ್ದೇಶದಿಂದ ಸಣ್ಣ ಪ್ರಮಾಣವಾಗಿ ವಿತರಿಸುವ ಕೆಲಸವನ್ನು ಸಂಘ ಹಮ್ಮಿಕೊಂಡಿದೆ. ಇದರ ಭಾಗವಾಗಿ ಕೆಲವು ವ್ಯಾಪಾರಸ್ಥರು ಹಾಗೂ ನಮ್ಮ ಪರಿಚಯದ ಕೆಲವು ಸಾಮಾಜಿಕ ಕಾರ್ಯ ಕರ್ತರನ್ನು ಕರೆದುಕೊಂಡು, ದೇವಸ್ಥಾನದ ರಸ್ತೆ ಬದಿಯಲ್ಲಿರುವ ಎಲ್ಲಾ ಅಂಗಡಿ ಮನೆಗಳಿಗೆ ಭೇಟಿ ಮಾಡಿ, ಜಾಗದ ವಿಂಗಡಣೆ ಬಗ್ಗೆ ಚರ್ಚಿಸಿದ್ದೇವೆ. ಇದನ್ನು ಹೊರತುಪಡಿಸಿ ಯಾವುದೇ ಜಾತಿ ಧರ್ಮದ ಬಗ್ಗೆ ಚರ್ಚೆ ಮಾಡಿರುವುದಿಲ್ಲ. ಇದರ ಬಗ್ಗೆ ತಮ್ಮ ಹತ್ತಿರ ಯಾವುದೇ ಪುರಾವೆ ಇದ್ದಲ್ಲಿ ಅದನ್ನು ಸಾರ್ವಜನಿಕ ಮಾಡಬೇಕಾಗಿ ವಿನಂತಿಸಿದ್ದರು.

ಅದರಂತೆ ಪೊಲೀಸರು ಹಿಂದೂ ಜಾಗರಣ ವೇದಿಕೆಯವರು ಅಂಗಡಿಯ ಮಾಲಕರಲ್ಲಿ ಕೇಳಿಕೊಳ್ಳುತ್ತಿರುವ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸುವ ಕಾರ್ಯ ಮಾಡಿದ್ದು, ಇದನ್ನು ತಿಳಿದ ನಂತರ ಶ್ರೀಕಾಂತ್ ಶೆಟ್ಟಿ, ಈ ಪ್ರಕರಣವನ್ನು ಹಿಂಪಡೆಯದಿದ್ದರೆ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ನ.23ರಂದು ವಿಡಿಯೋ ಚಿತ್ರೀಕರಿಸಿದ್ದನು. ಬಳಿಕ ಶಾಂತಿ ಕದಡುವ ಈ ವೀಡಿಯೋವನ್ನು ಅಶಾಂತಿ ಸೃಷ್ಠಿಸುವ ಉದ್ದೇಶದಿಂದ ವೈರಲ್ ಮಾಡಿದ್ದನು. ಅದರಂತೆ ಆತನ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಕಲಂ: 353(2)ರಂತೆ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.


Spread the love