ಕಾರ್ಮಿಕ ಶಿಕ್ಷಣ ದಿನಾಚರಣೆ
ಮ0ಗಳೂರು: ಕಾರ್ಮಿಕ ಶಿಕ್ಷಣ ದಿನಾಚರಣೆಯನ್ನು ಮಂಗಳೂರು ಪ್ರಾದೇಶಿಕ ನಿರ್ದೇಶನಾಲಯದ ದತ್ತೋಪಂತ ಥೇಂಗಡಿ ರಾಷ್ಟ್ರೀಯ ಕಾರ್ಮಿಕ ಶಿಕ್ಷಣ ಮತ್ತು ಅಭಿವೃದ್ಧಿ ಮಂಡಳಿಯ ಕಛೇರಿಯಲ್ಲಿ ಶುಕ್ರವಾರ ಆಚರಿಸಲಾಯಿತು.
ಸಮಾರಂಭವನ್ನು ಕುದುರೆಮುಖ ಅದಿರು ಸಂಸ್ಥೆಯ ಎಜಿಎಂ ಶಂಕರ ಕರ್ನಮ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂಘಟಿತ ಕ್ಷೇತ್ರದ ಚಳವಣಿಗೆ ಹಾಗು ರಾಷ್ಟ್ರ ನಿರ್ಮಾಣದಲ್ಲಿ ಮತ್ತು ಕೈಗಾರಿಕೆ ಬೆಳವಣಿಗೆಯಲ್ಲಿ ಕಾರ್ಮಿಕ ಶಿಕ್ಷಣ ಮಂಡಳಿಯ ಅಮೂಲ್ಯವಾದ ಪಾತ್ರವನ್ನು ನಿರ್ವಹಿಸುತ್ತಿದೆ. ಈ ದೆಶೆಯಲ್ಲಿ ಕಾರ್ಮಿಕ ಶಿಕ್ಷಣದ ಸಂಘಟಿತ, ಅಸಂಘಟಿತ ಮತ್ತು ಗ್ರಾಮೀಣ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಪ್ರಾದೇಶಿಕ ನಿರ್ದೇಶಕರಾದ ಎಂ. ಎಸ್. ಮಠಪತಿ ಕಾರ್ಯಕ್ರಮದಲ್ಲಿ ಮಾತನಾಡಿ ಕಾರ್ಮಿಕ ಶಿಕ್ಷಣದ ಪಾತ್ರದ ಬಗ್ಗೆ ವಿವರಿಸಿದರು. ದತ್ತೋಪಂತ ಥೇಂಗಡಿಯವರು ಭಾರತೀಯ ಕಾರ್ಮಿಕ ಚಳುವಳಿಗೆ ಸಲ್ಲಿಸಿದ ಅಮೂಲ್ಯ ಕೊಡುಗೆಗಳನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿದರು.
ಕಾರ್ಮಿಕ ಶಿಕ್ಷಣ ಮತ್ತು ಅಭಿವೃದ್ಧಿ ಪ್ರಾದೇಶಿಕ ಸಲಹಾ ಮಂಡಳಿಯ ಸದಸ್ಯ ವಿಶ್ವನಾಥಶೆಟ್ಟಿ ಮಾತನಾಡಿ, ಕಾರ್ಮಿಕ ಶಿಕ್ಷಣ ಮಂಡಳಿಯ ಕಾರ್ಯಕ್ರಮಗಳನ್ನು ಶ್ಲಾಘಿಸಿದರು, ಭಾರತದ ಕಾರ್ಮಿಕ ಚಳುವಳಿಯಲ್ಲಿ ಮತ್ತು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ದತ್ತೋಪಂತ ಥೇಂಗಡಿ ಕೊಡುಗೆ ಮತ್ತು ಕಾರ್ಯಗಳನ್ನು ಬಣ್ಣಿಸಿದರು.
ಹಿಂದಿ ದಿನಾಚರಣೆ: ಇದೇ ದಿವಸ ಹಿಂದಿ ದಿನಾಚರಣೆಯನ್ನು ಕೂಡ ಆಚರಿಸಲಾಯಿತು. ಕೆಐಓಸಿಎಲ್ ಅಧಿಕಾರಿಗಳಾದ ರಾಮಾನಾಥ ಶಾನುಭಾಗ್ ಮತ್ತು ಭವಾನಿ ಶಂಕರ್ ಹಿಂದಿ ದಿವಸದ ಮಹತ್ವ ಹಾಗೂ ಕೇಂದ್ರ ಸರ್ಕಾರದ ಕಛೇರಿಗಳಲ್ಲಿ ಹಿಂದಿ ಬಳಕೆ ಕುರಿತು ಮಾತನಾಡಿದರು.
ಸತೀಶ್ ಕುಮಾರ್ ಸ್ವಾಗತಿಸಿ, ಶಂಕರ ಲಿಂಗೇಗೌಡ ವಂದಿಸಿದರು.