ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಘೊಷಣೆಯನ್ನು ಸಿದ್ದರಾಮಯ್ಯ ವಿರೋಧಿಸುತ್ತಿರುವುದು ರಾಜಕೀಯ ಲಾಭಕ್ಕಾಗಿ – ನಳಿನ್ ಕುಮಾರ್ ಕಟೀಲ್

Spread the love

ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಘೊಷಣೆಯನ್ನು ಸಿದ್ದರಾಮಯ್ಯ ವಿರೋಧಿಸುತ್ತಿರುವುದು ರಾಜಕೀಯ ಲಾಭಕ್ಕಾಗಿ – ನಳಿನ್ ಕುಮಾರ್ ಕಟೀಲ್

ಮಂಗಳೂರು: ಒಂದೂವರೆ ತಿಂಗಳಿನಿಂದ ಲಾಕ್ಡೌನ್ ಜಾರಿಯಲ್ಲಿದ್ದು, ರಾಜ್ಯದ ಅನೇಕ ವಲಯದ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ದುಡಿಮೆ ಇಲ್ಲದೆ ನಷ್ಟವಾಗಿದ್ದು, ಈ ವರ್ಗದ ಜನರನ್ನು ಮತ್ತೆ ಆರ್ಥಿಕವಾಗಿ ಮುನ್ನೆಲೆಗೆ ತರುವ ಸಲುವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶ್ರಮಿಕ ವರ್ಗಕ್ಕೆ ನೀಡಿರುವ ಪ್ಯಾಕೇಜನ್ನು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಟೀಕಿಸಿರುವುದು ಸರಿಯಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಸಾಮಾಜಿಕ ನ್ಯಾಯದ ಅಡಿಯಲ್ಲಿ ಮುಖ್ಯಮಂತ್ರಿ ಯಡ್ಯೂರಪ್ಪನವರು ಸಾಮಾಜಿಕ ನ್ಯಾಯವನ್ನು ನೀಡುವ ಕೆಲಸವನ್ನು ಮಾಡಿದ್ದು, ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಹಲವು ಬಜೆಟ್ ಗಳನ್ನು ಮಂಡಿಸಿರುವ ವಿರೋಧ ಪಕ್ಷದ ನಾಯಕರೂ ಆಗಿರುವ ಸಿದ್ದರಾಮಯ್ಯ ನವರು ಟೀಕೆಯನ್ನು ಮಾಡಿದ್ದಾರೆ. ಮುಖ್ಯಮಂತ್ರಿಗಳಾಗಿ, ಬಜೆಟ್ ಮಂಡಿಸಿದ ಸಿದ್ದರಾಮಯ್ಯನವರಿಗೆ ಹೂವಿನ ಬೆಳೆಗೆ ಎಷ್ಟು ಖರ್ಚು ಮಾಡುತ್ತಾನೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲ. ಒಂದು ಎಕ್ರೆಗೆ 50 ಲಕ್ಷ ರೂಪಾಯಿಗಳನ್ನು ಖರ್ಚು ಮಾಡುತ್ತಾರೆ ಎಂಬ ಹೇಳಿಕೆಯನ್ನು ಸಿದ್ದರಾಮಯ್ಯ ನೀಡಿರುವುದು ನೋಡಿದರೆ ರಾಹುಲ್ ಗಾಂಧಿಯವರು ಆಲೂಗಡ್ಡೆಯಲ್ಲಿ ಚಿನ್ನ ತೆಗೆದಂತೆ ಸಿದ್ದರಾಮಯ್ಯ ಹೂವಿನಲ್ಲಿ ಚಿನ್ನ ತೆಗೆಯಲು ಹೊರಟಂತಿದೆ ಎಂದರು.

ಟೀಕೆ ಮಾಡುವುದೇ ತಮ್ಮ ಗುರಿ ಎಂಬಂತೆ ವರ್ತಿಸುತ್ತಿರುವ ಕಾಂಗ್ರೆಸ್ ನಾಯಕರು, ಇಂತಹ ಕಷ್ಟದ ಸಮಯದಲ್ಲಿ ರಾಜಕೀಯ ಮಾಡುತ್ತಿರುವುದು ಸರಿಯಲ್ಲ. ಸಿದ್ದರಾಮಯ್ಯ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದು ಕಾಂಗ್ರೆಸ್ ಪಕ್ಷ ಕಾರ್ಮಿಕರ, ಕೃಷಿಕರ ಭವಿಷ್ಯದೊಂದಿಗೆ ಆಟ ಆಡುವ ಕೆಲಸ ಮಾಡುತ್ತಿದೆ ಎಂದರು.


Spread the love