ಕಾವೇರಿ ವಿವಾದ; ತಮಿಳುನಾಡಿನಲ್ಲಿ ಕನ್ನಡಿಗರ ಹೊಟೆಲ್ ಮೇಲೆ ದುಷ್ಕರ್ಮಿಗಳ ದಾಳಿ

Spread the love

ಕಾವೇರಿ ವಿವಾದ; ತಮಿಳುನಾಡಿನಲ್ಲಿ ಕನ್ನಡಿಗರ ಹೊಟೆಲ್ ಮೇಲೆ ದುಷ್ಕರ್ಮಿಗಳ ದಾಳಿ

ಚೆನ್ನೈ: ಕಾವೇರಿ ನದಿ ನೀರು ಬಿಡುಗಡೆ ವಿಚಾರವಾಗಿ ತಮಿಳುನಾಡು ಸರ್ಕಾರದ ವಿರುದ್ಧ ಕರ್ನಾಟಕದಲ್ಲಿ ಆಕ್ರೋಶ ಭುಗಿಲೆದ್ದಿರುವ ಹೊತ್ತಿನಲ್ಲೇ, ತಮಿಳುನಾಡಿನಲ್ಲಿರುವ ಕನ್ನಡಿಗರ ವಿರುದ್ಧ  ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.

ಚೆನ್ನೈನಲ್ಲಿರುವ ಕನ್ನಡಿಗರ ಮಾಲೀಕತ್ವದ ವುಡ್ ಲ್ಯಾಂಡ್ ಗ್ರೂಪ್ ಹೊಟೆಲ್ ಮೇಲೆ ಇಂದು ದುಷ್ಕರ್ಮಿಗಳು ದಾಳಿ ನಡೆಸಿದ್ದು, ಹೊಟೆಲ್ ನ ರಿಸೆಪ್ಶನ್ ಮೇಲೆ ಪೆಟ್ರೋಲ್ ಬಾಂಬ್  ಎಸೆಯಲಾಗಿದೆ. ಪರಿಣಾಮ ರಿಸೆಪ್ಶನ್ ನಲ್ಲಿದ್ದ ಗಾಜುಗಳು ಪುಡಿಪುಡಿಯಾಗಿದ್ದು, ಪೀಠೋಪಕರಣಗಳು ಧ್ವಂಸಗೊಂಡಿವೆ. ಮೂಲಗಳ ಪ್ರಕಾರ ಹೊಟೆಲ್ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳನ್ನು ಟಿಪಿಡಿಕೆ (ತಂತಯ್ ಪೆರಿಯಾರ್ ದ್ರಾವಿಡರ್ ಕಳಗಂ) ಪಕ್ಷದ ಕಾರ್ಯಕರ್ತರು ಎಂದು ಶಂಕಿಸಲಾಗಿದೆ.

ಕೇವಲ ಇದು ಮಾತ್ರವಲ್ಲದೇ ತಮಿಳುನಾಡಿನಲ್ಲಿರುವ ಕರ್ನಾಟಕ  ನೋಂದಣಿಯ ಸುಮಾರು 10ಕ್ಕೂ ಹೆಚ್ಚು ವಾಹನಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದ್ದು, ರಾಮನಾಥಪುರಂನಲ್ಲಿ ಕನ್ನಡಿಗರ ಕರ್ನಾಟಕ ನೋಂದಣಿಯ 5 ವಾಹನಗಳ ಮೇಲೆ ಕಲ್ಲು  ತೂರಾಟ ಮಾಡಲಾಗಿದೆ. ಘಟನೆಯಲ್ಲಿ 2 ಬಸ್, 3 ವ್ಯಾನ್ ಹಾಗೂ 5 ಕಾರುಗಳು ಜಖಂಗೊಂಡಿವೆ.

ಚೆನ್ನೈ ಮಾತ್ರವಲ್ಲದೇ ತಮಿಳುನಾಡಿನ ನಾಗಪಟ್ಟಣಂ, ತಿರುಚ್ಚಿ ಮತ್ತು ತಂಜಾವೂರುಗಳಲ್ಲೂ ದಾಳಿ ನಡೆಸಲಾಗಿದ್ದು, ಅಲ್ಲಿ ನೆಲೆಸಿರುವ ಕನ್ನಡಿಗರ ಆಸ್ತಿಪಾಸ್ತಿಗೆ ನಷ್ಟವುಂಟು ಮಾಡಲಾಗಿದೆ  ಎಂದು ತಿಳಿದುಬಂದಿದೆ. ಪ್ರಕರಣ ಸಂಬಂಧ ದಿಢೀರ್ ಕಾರ್ಯಾಚರಣೆ ನಡೆಸಿರುವ ತಮಿಳುನಾಡು ಪೊಲೀಸರು ಸುಮಾರು 50ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದಿದ್ದು, ಕನ್ನಡಿಗರ ಹೊಟೆಲ್  ಹಾಗೂ ಕನ್ನಡಿಗರು ಹೆಚ್ಚಾಗಿ ನೆಲೆಸಿರುವ ಪ್ರದೇಶಗಳಲ್ಲಿ ಬಿಗಿ ಭದ್ರತೆ ಒದಗಿಸಿದ್ದಾರೆ.

ಕ್ರಪೆ: ಕನ್ನಡಪ್ರಭ


Spread the love