ಕಾವ್ಯ ಆತ್ಮಹತ್ಯೆ ಪ್ರಕರಣ; ಸಿಬಿಐ ತನಿಖೆಗೂ ನಾನು ಸಿದ್ದ; ಡಾ| ಮೋಹನ್ ಆಳ್ವಾ
ಮೂಡಬಿದ್ರೆ: ಯಾವುದೇ ಸಂಘಟನೆ ಅಥವಾ ಮಾಧ್ಯಮ ನನ್ನ ಕಾಲೇಜಿನ ಕ್ಯಾಂಪಸಿಗೆ ಕಾವ್ಯಳ ಆತ್ಮಹತ್ಯೆಯ ಕುರಿತು ಸತ್ಯ ತಿಳಿಯಲು ಬಂದಿಲ್ಲ. ಕಾವ್ಯಳದ್ದು ಅಸ್ವಾಬಾವಿಕ ಸಾವಾಗಿದ್ದು, 2017 ಜೂನ್ 18 ರಂದು ಕಾವ್ಯ ನಮ್ಮ ಸಂಸ್ಥೆಗೆ ಕ್ರೀಡಾ ಕ್ಷೇತ್ರದಿಂದ ದತ್ತು ಪಡೆದು ಬಂದವಳಾಗಿದ್ದಳು. ಕಾವ್ಯ ನಮ್ಮ ಸಂಸ್ಥೆಯಲ್ಲಿ 10 ತರಗತಿಗೆ ಸೇರ್ಪಡೆಗೊಂಡಿದ್ದಳು ಹಾಗೂ ಆಕೆಗೆ ಯಾವುದೇ ರೀತಿಯ ಶುಲ್ಕ ಪಡೆಯದೆ ಸಂಪೂರ್ಣ ಉಚಿತ ಶಿಕ್ಷಣ ನೀಡಲಾಗುತ್ತಿತ್ತು. ಕಾವ್ಯ ಪ್ರತಿನಿತ್ಯಬ್ಯಾಡ್ಮಿಂಟನ್ ತರಬೇತಿಗೆ ತೆರಳುತ್ತಿದ್ದು ಎಲ್ಲರೊಂದಿಗೆ ಆತ್ಮಿಯವಾಗಿ ಬೇರೆಯುತ್ತಿದ್ದಳು. ಸಂಸ್ಥೆಯಲ್ಲಿ ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ ಆಕೆ ಜು. 20 ರಂದು ಬೆಳಿಗ್ಗೆ 6.05 ಗಂಟೆಗೆ ತರಬೇತಿಗೆ ತೆರಳಿದ್ದು, 8 ಗಂಟೆಯ ತನಕ ಒಳಾಂಗಣ ಕ್ರೀಡಾಂಗಣದಲ್ಲಿ ತರಬೇತಿ ನಡೆಸಿದ್ದಾಳೆ. 9 ಗಂಟೆಗೆ ತರಗತಿಗೆ ಎಂದಿನಂತೆ ಹಾಜರಾಗಿ 3.30 ರ ತನಕ ತರಗತಿಯಲ್ಲಿದ್ದಳು. ಅದರ ಬಳಿಕ ಹಾಸ್ಟೆಲಿನ ರೂಮಿಗೆ ಬಂದಿದ್ದು ಮತ್ತೆ ಸಂಜೆಯ ತರಬೇತಿಗೆ ಹೋಗಿರಲಿಲ್ಲ. ಆಕೆಯ ಸಾವಿನ ಕುರಿತು ಯಾವುದೇ ರೀತಿಯ ತನಿಖೆಗೆ ನಾವು ಸಿದ್ದವಾಗಿದ್ದೇವೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಪ್ರವರ್ತಕ ಡಾ ಮೋಹನ್ ಆಳ್ವ ಹೇಳಿದ್ದಾರೆ.
ಅವರು ಮ್ಯಾಂಗಲೊರಿಯನ್ ಡಾಟ್ ಕಾಮ್ ಗೆ ನೀಡಿದ ಅಧಿಕೃತ ಸಂದರ್ಶನದ ವೇಳೆ ಮಾತನಾಡಿ, ನಾನು ಯಾವಾಗಲೂ ವಿದ್ಯಾರ್ಥಿಗಳು ಹಾಗೂ ಕ್ರೀಡಾ ತರಬೇತಿ ಶಿಕ್ಷಕರಿಗೆ ಕೌನ್ಸಿಲಿಂಗ್ ತೆಗೆದುಕೊಳ್ಳುತ್ತಿದ್ದು, ಜುಲೈ 20 ರಂದು ಕ್ರೀಡಾ ಶಿಕ್ಷಕ ರಾಧಕೃಷ್ಣ ಹಾಗೂ 60 ಮಂದಿ ವಿದ್ಯಾರ್ಥಿಗಳು ನನ್ನ ಮನೆಗೆ ಕೌನ್ಸಿಲಿಂಗ್ ಪಡೆಯಲು ಬಂದಿದ್ದರು. ಜುಲೈ 20 ರಂದು ಕಾವ್ಯ ಕ್ರೀಡಾ ತರಬೇತಿಗೆ ತೆರಳದೆ ಹಾಸ್ಟೆಲ್ ರೂಮಿನಲ್ಲಿಯೇ ಉಳಿದುಕೊಂಡಿದ್ದಳು ಆದರೆ ಉಳಿದ ಹುಡುಗಿಯರು ತರಬೇತಿಗೆ ತೆರಳಿದ್ದರು. ತರಬೇತಿ ಮುಗಿಸಿ ವಾಪಾಸದ ಹುಡುಗಿಯರ ಹಾಸ್ಟೆಲಿನ ರೂಮ್ ಒಳಗಿನಿಂದ ಚಿಲಕ ಹಾಕಿದ್ದು, ಹತ್ತಿರದ ಕಿಟಕಿಯಿಂದ ಇಣುಕಿ ನೋಡಿದಾಗ ಕಾವ್ಯ ನೇಣು ಬಿಗಿದುಕೊಂಡು ನೇತಾಡುತ್ತಿದ್ದ ದೃಶ್ಯ ಅವರು ಕಂಡಿದ್ದಾರೆ. ವಿದ್ಯಾರ್ಥಿಗಳು ಬಾಗಿಲನ್ನು ತೆರೆದು ಒಳಗೆ ಹೋಗಿದ್ದು, ಕಾವ್ಯಳನ್ನು ನೇಣಿನಿಂದ ಕೆಳಗಿಳಿಸಿ ಆಸ್ಪತ್ರೆಗೆ ಸೇರಿಸಲು ಅಂಬುಲೆನ್ಸಿಗೆ ತಿಳಿಸಿ ಆಸ್ಪತ್ರೆಗೆ ದಾಖಲಿಸಿದ್ದು, ದಾರಿಮಧ್ಯೆ ಆಕೆ ಸಾವನಪ್ಪಿರುವುದಾಗಿ ವೈದ್ಯರು ಹೇಳೀದ್ದಾರೆ.
ಯಾವುದೇ ಒಬ್ಬ ವ್ಯಕ್ತಿ ಸಾವಿಗೀಡಾದ ಬಳಿಕ ಮೃತದೇಹವನ್ನು ಯಾವುದೇ ಕಾರಣಕ್ಕೂ ತುರ್ತು ಚಿಕಿತ್ಸಾ ವಿಭಾಗದಲ್ಲಿ ಇಡಲು ಸಾಧ್ಯವಿಲ್ಲ ಅದನ್ನು ಶವಾಗಾರಕ್ಕೆ ಸಾಗಿಸಲೇ ಬೇಕು. ಅದರಂತೆ ದೇಹವನ್ನು ಶವಾಗಾರದಲ್ಲಿ ಕೊಳೆಯದಂತೆ ಇಡುವ ಸಲುವಾಗಿ ಸಾಗಿಸಲಾಗಿದೆ. ಕೂಡಲೇ ಸಂಸ್ಥೆಯ ವತಿಯಿಂದ ಕಾವ್ಯಾಳ ಹೆತ್ತವರಿಗೆ ಹಾಗೂ ಪೋಲಿಸರಿಗೆ ವಿಷಯ ತಿಳಿಸಿದ್ದು, ಅವರುಗಳೂ ಕೂಡ ಆಸ್ಪತ್ರೆಗೆ ಆಗಮಿಸಿದ್ದಾರೆ. ಕಾವ್ಯಾಳ ತಾಯಿ ಆ ವೇಳೆ ದುಃಖದಿಂದದ್ದರು, ಪೋಲಿಸರು ತಮ್ಮ ಕೆಲಸವನ್ನು ಮಾಡಿದ್ದು, 15 ಮಂದಿ ಸಂಸ್ಥೆಯ ಸಿಬಂದಿಗಳು ಅವರಿಗೆ ಸಹಕಾರ ನೀಡಿದ್ದರು. ಜುಲೈ 21 ರಂದು ಪೋಸ್ಟ್ ಮಾರ್ಟಮ್ ನಡೆಸಿದ ಬಳಿಕ ಮೃತದೇಹವನ್ನು ಕುಟುಂಬಿಕರಿಗೆ ಹಸ್ತಾಂತರಿಸಲಾಗಿದೆ. ನಮ್ಮ ಸಂಸ್ಥೆಯ ಮುಖ್ಯ ಶಿಕ್ಷಕರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಮೂರು ದಿನಗಳ ಬಳಿಕ ಕಾವ್ಯಳ ಹೆತ್ತವರು ಕೆಲವೊಂದು ವ್ಯಕ್ತಿಗಳ ಜೊತೆಗೂಡಿ ಮಂಗಳೂರು ನಗರ ಪೋಲಿಸ್ ಕಮೀಷನರ್ ಅವರನ್ನು ಭೇಟಿ ಮಾಡಿ ಕಾವ್ಯಳ ಸಾವಿನ ಕುರಿತು ತನಿಖೆ ನಡೆಸಲು ವಿನಂತಿಸಿದ್ದಾರೆ ಅದರ ಬಳಿಕ ಅವರುಗಳೂ ಬೆಂಗಳೂರಿಗೆ ತೆರಳಿ ಟಿವಿ ಮಾಧ್ಯಮವೊಂದಕ್ಕೆ ತಿಳಿಸಿದ್ದು ಅದರ ಬಳಿಕ ವಿಷಯ ಬೇರೆ ಬೇರೆ ಆಯಾಮಗಳನ್ನು ಪಡೆಯಲು ಕಾರಣವಾಗಿದೆ.
ಮುಂದುವರೆಸಿ ಮಾತನಾಡಿದ ಡಾ. ಆಳ್ವ ಅವರು ಈಗ ಎಲ್ಲಾ ಸಂಘಟನೆಗಳೂ ನಮ್ಮನ್ನು ಕೊಲೆಗಾರರು ಎನ್ನುವ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ ಅದರೆ ಯಾರು ಇಂದು ನಮ್ಮ ವಿರುದ್ದ ಅಪಪ್ರಚಾರ ಮಾಡುತ್ತಿದ್ದಾರೋ ಅವರ್ಯಾರು ಕೂಡ ನಮ್ಮ ಸಂಸ್ಥೆಯ ಕ್ಯಾಂಪಸಿಗೆ ಬಂದು ಸತ್ಯ ತಿಳಿಯುವ ಪ್ರಯತ್ನ ಮಾಡಿಲ್ಲ. ನಮ್ಮಲ್ಲಿ 26000 ಮಂದಿ ವಿದ್ಯಾರ್ಥಿಗಳು ಕಲಿಯುತ್ತಿದ್ದು ಅವರ ರಕ್ಷಣೆಯೇ ನಮ್ಮ ಪ್ರಥಮ ಆದ್ಯತೆ. ನಾನು ಈ ಘಟನೆಯ ಕುರಿತು ಯಾವುದೇ ರಾಜಕೀಯ ನಾಯಕರು ಅಥವಾ ಪೋಲಿಸ್ ಅಧಿಕಾರಿಯನ್ನೂ ಕೂಡ ಭೇಟಿಯಾಗಲು ಹೋಗಿಲ್ಲ. ನಾನ್ಯಾಕೆ ಮೂಡಬಿದ್ರೆಯಿಂದ ಒಡಿಹೋಗಲಿ? ನಾನು ಯಾವುದೇ ರೀತಿಯ ತನಿಖೆಗೆ ಸಿದ್ದವಾಗಿದ್ದೇನೆ ಎಂದರು.
ಕಾವ್ಯಳಿಗೆ ದೈಹಿಕ ಶಿಕ್ಷಣ ಶಿಕ್ಷಕರು ಬೆಳಿಗ್ಗೆ 4.30 ಕ್ಕೆ ತರಬೇತಿಗೆ ಕರೆದ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಆಳ್ವಾರು, ಆಕೆ ಈ ವಿಷಯ ಯಾಕೇ ಆಕೆಯ ತಾಯಿಯ ಬಳಿ ಹೇಳಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಸಿಸಿಟಿವಿ ದೃಶ್ಯಾವಳಿಯಲ್ಲಿ ಶಿಕ್ಷಕರು 5.15 ಕ್ಕೆ ತನ್ನ ಕಾರಿನಲ್ಲಿ ಒಳಾಂಗಣ ಕ್ರೀಡಾಂಗಣಕ್ಕೆ ಬರುವುದು ದಾಖಲಾಗಿದೆ. ಬಳಿಕ ಇತರ ವಿದ್ಯಾರ್ಥಿಗಳು ಕೂಡ ಬರುತ್ತಿದ್ದಾರೆ. 6.05 ಕ್ಕೆ ಕಾವ್ಯ ತರಬೇತಿಗಾಗಿ ಒಳಾಂಗಣ ಕ್ರೀಡಾಂಗಣಕ್ಕೆ ಪ್ರವೇಶ ಮಾಡಿದ್ದಾಳೆ. ಆದ್ದರಿಂದ ಆಕೆ ಯಾವ ಕಾರಣಕ್ಕಾಗಿ 4.30 ಕ್ಕೆ ತರಬೇತಿಗೆ ಹೋಗಲು ಇದೆ ಎಂದು ಹೇಳಿದ್ದಾಳೆ ಎನ್ನುವುದು ತಿಳಿದಿಲ್ಲ ಎಂದರು.
ಕೊನೆಯದಾಗಿ ಮಾತನಾಡಿದ ಆಳ್ವಾರು, ನಾನು ಸತ್ಯದೊಂದಿಗೆ ಇದ್ದು, ಅದರಲ್ಲಿಯೇ ನಂಬಿಕೆ ಇಟ್ಟಿದ್ದೇನೆ. ಪೋಲಿಸರು ಪ್ರಕರಣದ ತನಿಖೆ ನಡೆಸಲಿ, ಮಾಧ್ಯಮಗಳು ಪ್ರಕರಣದ ತನಿಖೇಯ ಮೊದಲೆ ತೀರ್ಪು ನೀಡುವುದು ಸರಿಯಲ್ಲ. ಸೂಕ್ತ ರೀತಿಯ ತನಿಖೆ ನಡೆಯಲ್ಲಿ. ಬೇಕಾದರೆ ಪ್ರಕರಣದ ತನಿಖೆಯನ್ನು ಸಿಬಿಐ ಗೆ ನೀಡಲಿ ನಾನು ಅದಕ್ಕೂ ಕೂಡ ಬದ್ದನಿದ್ದೇನೆ ಎಂದು ಅವರು ಹೇಳಿದರು.